ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ಧರಾಮಯ್ಯನವರು ಇಬ್ಬರೂ ಕೂಡಾ ಕೋವಿಡ್ ಪಾಸಿಟಿವ್ ಆದ ಕಾರಣ ನಗರದ ಪಂಚತಾರಾ ಸೌಲಭ್ಯಗಳು ಲಭ್ಯವಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಟೀಕೆಗಳು, ವಿಮರ್ಶೆಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದು, ಸಾಮಾನ್ಯ ಜನರು, ಬಡವರು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿಯಲ್ಲಿ ಈ ಇಬ್ಬರು ಜನ ನಾಯಕರು ಐಶಾರಾಮೀ ಆಸ್ಪತ್ರೆಗೆ‌ ದಾಖಲಾಗಿರುವುದು ಚರ್ಚೆಯನ್ನು ಹುಟ್ಟು ಹಾಕಿದೆ.‌

ಕೋವಿಡ್ ಹೆಚ್ಚಾಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗಳ ಲೋಪಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಡವರ ಕೈಗೆಟುಕದ ದುಬಾರಿ ಚಿಕಿತ್ಸೆ ಹೀಗೆ ವೈದ್ಯಕೀಯ ರಂಗದ ಕುಂದು ಕೊರತೆಗಳು ಬಹಿರಂಗವಾಗಿದೆ. ಸರ್ಕಾರ ಮಾತ್ರ ಕೋವಿಡ್ ಸೋಂಕಿತರಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡುತ್ತಿರುವುದಾಗಿ ಮೊದಲಿನಿಂದಲೂ ಹೇಳುತ್ತಲೇ‌ ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಹೀಗೆ ನಾನಾ ಸಮಸ್ಯೆಗಳಿಂದ ಜನರು ವಿಧಿಯಿಲ್ಲದೇ‌ ದುಬಾರಿಯಾದ ಖಾಸಗಿ ಆಸ್ಪತ್ರೆಗಳ ಕಡೆ ಹೋಗುವಂತಾಗಿದೆ. ಇಂತಹ ಸಂದರ್ಭದಲ್ಲಿ ಇಬ್ಬರು ನಾಯಕರು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಾಗಿದ್ದರೆ ಸರ್ಕಾರಿ ಆಸ್ಪತ್ರೆಗಳು ಬಡವರಿಗೆ ಮಾತ್ರವೇ? ಇವರೇ ನಿರ್ಮಾಣ ಮಾಡಿಸಿರುವ ಆಸ್ಪತ್ರೆಗಳ ಮೇಲೆ ಇವರಿಗೆ ನಂಬಿಕೆಯಿಲ್ಲದೆ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇದ್ದರೂ ಐಶಾರಾಮೀ ಆಸ್ಪತ್ರೆಗೆ ದಾಖಲಾಗಿರುವ ಇವರು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದಿತ್ತು, ಅಥವಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರೆ ಇಡೀ ವ್ಯವಸ್ಥೆ ಮುಂದೆ ಬಂದು ಇವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿತ್ತು, ಆದರೆ ಅವರು ಹಾಗೆ ಮಾಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಅನೇಕರು.

ನಟ ಚೇತನ್ ಕೂಡಾ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದು ಇಬ್ಬರೂ ಬೇಗ ಗುಣಮುಖರಾಗಲೀ ಆದರೆ, ಇಬ್ಬರೂ ನಾಯಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಿರಾಶಾದಾಯಕವಾಗಿದೆ
ನಮ್ಮ ರಾಷ್ಟ್ರದಲ್ಲಿ ಹೆಚ್ಚಿನ ನಾಗರಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆಯನ್ನು ಪಡೆಯಬಲ್ಲರು, ಅದಕ್ಕಾಗಿಯೇ ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಎಲ್ಲರಿಗೂ ಸಮಾನ ಆರೋಗ್ಯ ಸೇವೆ ಅತ್ಯಗತ್ಯ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here