ಮೂವತ್ತು ವರ್ಷಗಳ ಹಿಂದೆ ಬಾಕಿ ಉಳಿಸಿಕೊಂಡಿದ್ದ ೨೦೦ ರೂ. ಹಣವನ್ನು ವಾಪಸ್ ನೀಡಲು ಕೀನ್ಯಾದ ಸಂಸದ ರಿಚರ್ಡ್ ಟೊಂಗ್ ಐ ಮಹಾರಾಷ್ಟ್ರದ ಔರಂಗಾಬಾದ್‌ಗೆ ಆಗಮಿಸಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.ಕೀನ್ಯಾದ ರಿಚರ್ಡ್ ಟೊಂಗ್‌ಐ ೧೯೮೫-೮೯ರ ಅವಧಿಯಲ್ಲಿ ಔರಂಗಾಬಾದ್‌ನ ಕಾಲೇಜೊಂದರಲ್ಲಿ ಅಧ್ಯಯನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವಾಂಖೇದೇನಾಗರ್ ಪ್ರದೇಶದಲ್ಲಿ ಅವರು ವಾಸಿಸುತ್ತಿದ್ದರು. ಅಲ್ಲಿನ ಕಾಶೀನಾಥ ಗೌಳಿ ಅವರ ಅಂಗಡಿಯಲ್ಲಿ ದಿನಸಿ ಸಾಮಾನುಗಳನ್ನು ಖರೀದಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿದ ನಂತರ ವಾಪಸಾಗುವಾಗ ರಿಚರ್ಡ್ ೨೦೦ರೂ. ಹಾಗೇ ಬಾಕಿ ಉಳಿಸಿ ಹೋಗಿದ್ದರು.

ಇದೀಗ ರಿಚರ್ಡ್ ಕೀನ್ಯಾದ ನ್ಯಾರಿಬಾರಿ ಚಾಚೆ ಎನ್ನುವ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಾಕಿ ಉಳಿಸಿಕೊಂಡಿದ್ದ ಹಣವನ್ನು ವಾಪಸ್ ನೀಡಲು ಅವರು ತಮ್ಮ ಪತ್ನಿ ಮಿಶೆಲ್ ಸಮೇತರಾಗಿ ಬಂದಾಗ ಕಾಶೀನಾಥ್ ಅವರಿಗೆ ಅಚ್ಚರಿ. ಅತ್ಯಂತ ಭಾವುಕರಾದ ಗೌಳಿಗೆ ಮೊದಲು ಇದನ್ನು ನಂಬಲು ಸಾಧ್ಯವೇ ಆಗಲಿಲ್ಲ. ನಂತರ ಮನೆಗೆ ಬಂದ ಅತಿಥಿಯನ್ನು ಊಟಕ್ಕಾಗಿ ಹೊರಗೆ ಒಳ್ಳೆಯ ಹೋಟೆಲೊಂದಕ್ಕೆ ಕರೆದುಕೊಂಡು ಹೋಗಲು ಕಾಶೀನಾಥ್ ಮುಂದಾದಾಗ ಅದನ್ನು ಒಪ್ಪದ ರಿಚರ್ಡ್ ಮನೆಯಲ್ಲಿಯೇ ಊಟ ಮಾಡುವುದಾಗಿ ಸರಳತೆಯನ್ನು ಮೆರೆದಿದ್ದಾರೆ.

’ನಾನು ಔರಂಗಾಬಾದ್‌ನಲ್ಲಿ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಈ ಗೌಳಿ ಜನ ನನಗೆ ತುಂಬಾ ಸಹಾಯ ಮಾಡಿದರು. ಹೀಗಾಗಿ ನಾನು ಎಂದಾದರೂ ಒಂದು ದಿನ ಬಂದು ಬಾಕಿ ಮರುಪಾವತಿ ಮಾಡಿ ಧನ್ಯವಾದಗಳನ್ನು ತಿಳಿಸಲು ನಿರ್ಧರಿಸಿದ್ದೆ. ಇದು ನನ್ನ ಜೀವನದ ಒಂದು ಭಾವನಾತ್ಮಕ ಕ್ಷಣ’ ಎಂದು ರಿಚರ್ಡ್ ವರ್ಣಿಸಿದ್ದಾರೆ.
ರಿಚರ್ಡ್ ವಾಪಸಾಗುವ ಮೊದಲು ಗೌಳಿ ಕುಟುಂಬವನ್ನು ಕೀನ್ಯಾಗೆ ಆಹ್ವಾನಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here