City Big News Desk.
ಕಲ್ಬುರ್ಗಿ: ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಎಂದಿಗೂ ಮರೆಯುವುದಿಲ್ಲ. ಈ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಮನ್ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 371 ಜೆ ಗೆ ತಿದ್ದುಪಡಿಯಾಗಿ ಕಾಂಗ್ರೆಸ್ ಸರ್ಕರ ಜಾರಿ ಮಾಡಿತು. ಕಲ್ಯಾಣ ಕರ್ನಾಟಕಕ್ಕೆ 371 ಜೆ ಸೌಲಭ್ಯ ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶ್ರೀ ಧರಂಸಿಂಗ್ ಅವರು ಪ್ರಮುಖ ಪಾತ್ರ ವಹಿಸಿದರು. ಲಾಲ್ ಕೃಷ್ಣ ಅಡ್ವಾಣಿಯವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ 371 ಜೆ ಮಾಡಲು ಇಚ್ಛಾಶಕ್ತಿ ತೋರಲಿಲ್ಲ. 371 ಜೆ ದಿಂದಾಗಿ ಈ ಭಾಗದ ಅನೇಕ ಜನರು ಸರ್ಕಾರಿ ನೌಕರಿ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 99,600 ಮನೆಗಳು ಸೇರಿದಂತೆ 14,42000 ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಹಿಂದಿನ ಸರ್ಕಾರ ಐದು ವರ್ಷದಲ್ಲಿ ಕೇವಲ 8 ಲಕ್ಷ ಮಾತ್ರ ಮನೆ ಮಾತ್ರ ನಿರ್ಮಾಣ ಮಾಡಿದ್ದು, ಅದರಲ್ಲಿ ಕೇವಲ 19000 ಮನೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಿದೆ. ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕೇವಲ ಮರುನಾಮಕರಣ ಮಾಡಿದ್ದೇ ಹಿಂದಿನ ಸರ್ಕಾರದ ಕೊಡುಗೆ ಎಂದರು.
ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಜವಾಬ್ದಾರಿ ನಮ್ಮದು
ಇಂದು ಐತಿಹಾಸಿಕವಾದ ದಿನ. ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ವಾಗ್ದಾನ ಮಾಡಲಾಗಿತ್ತು. ಈ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುವ ಜವಾಬ್ದಾರಿ ನಮ್ಮದು ಎಂಬ ಭರವಸೆಯನ್ನು ನೀಡಲಾಗಿತ್ತು. 2013-18 ರಲ್ಲಿ ಅಧಿಕಾರದಲ್ಲಿದ್ದಗ ಕಾಂಗ್ರೆಸ್ ಸರ್ಕಾರ ಕೊಟ್ಟಂತಹ 165 ಭರವಸೆಗಳನ್ನು 158 ಈಡೇರಿಸಿ, 30 ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿತ್ತು. ಆದ್ದರಿಂದ ಈ ಬಾರಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದರು. ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 76 ಭರವಸೆಗಳನ್ನು ಜಾರಿಗೆ ತರಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂಬ ಸ್ಪಷ್ಟವಾದ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಶಕ್ತಿ ಯೋಜನೆಯಿಂದ ಮಹಿಳೆಯರು ಸಂತುಷ್ಟರಾಗಿದ್ದಾರೆ
ಈ ಬಾರಿಯೂ ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿಗಳನ್ನು ಜಾರಿಗೊಳಿಲು ಸಚಿವಸಂಪುಟ ತೀರ್ಮಾನ ಕೈಗೊಳ್ಳಲಾಯಿತು. ಅದಂತೆ ಜೂನ್ 11 ರಂದು ‘ಶಕ್ತಿ’ ಯೋಜನೆ ಜಾರಿಗೊಳಿಸಲಾಯಿತು. ಇದುವರೆಗೂ 30 ಕೋಟಿಗೂ ಹೆಚ್ಚು ಜನ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದು, ಪ್ರತಿದಿನ ಸುಮಾರು 50 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆಯಿಂದ ರಾಜ್ಯದ ಮಹಿಳೆಯರು ಸಂತುಷ್ಟರಾಗಿದ್ದಾರೆ ಎಂದು ತಿಳಿಸಿದರು.
ನುಡಿದಂತೆ ನಡೆದಿದ್ದೇವೆ
ಗೃಹಜ್ಯೋತಿ ಕಾರ್ಯಕ್ರಮದಡಿ 2.14 ಕೋಟಿ ಜನ ಲಾಭ ಪಡೆಯಲಿದ್ದು, 1.41 ಕೋಟಿ ಜನರ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಜುಲೈ ಒಂದರಿಂದ ಪ್ರಾರಂಭವಾಗಿದೆ. ಇಂದು ಆಗಸ್ಟ್ ತಿಂಗಳಲ್ಲಿ ಆಗಸ್ಟ್ ಮಾಹೆಯಿಂದ ಶೂನ್ಯ ಬಿಲ್ಲು ಬರುತ್ತದೆ. ಅದನ್ನು ಸಾಂಕೇತಿಕವಾಗಿ 10 ಜನಕ್ಕೆ ನೀಡಿದ್ದೇವೆ.ಬುದ್ದ, ಬಸವರ, ಗಾಂಧಿ, ಅಂಬೇಡ್ಕರ್, ನಾರಾಯಣ ಗುರು ತಿಳಿಸಿದಂತೆ ನುಡಿದಂತೆ ನಡೆಯುತ್ತಿದ್ದೇವೆ ಎಂದರು.
ಕರ್ನಾಟಕದಲ್ಲಿ ಕರ್ನಾಟಕ ಮಾದರಿ
ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆಯಡಿ ರೂಪಿಸಲಾಗಿದ್ದು, ಕರ್ನಾಟಕದಲ್ಲಿ ಕರ್ನಾಟಕ ಮಾದರಿ-ಪ್ರಾರಂಭ ಮಾಡುತ್ತೇವೆ. ಬಡತನ ಹಿಂಸೆಯ ಅತಿ ಕೆಟ್ಟ ರೂಪ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು ದೇಶದಲ್ಲಿ ಬಡವ ಶ್ರೀಮಂತರೆಂಬ ಅಸಮಾನತೆ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ನಾವು ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 4 ಕೆಜಿಗೆ ಇಳಿಸಿದರು.ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಹಕರಿಸದ ಕಾರಣ, 5 ಕೆಜಿ ಅಕ್ಕಿಯ ಬದಲು 170 ರೂ. ಗಳನ್ನು ಎಲ್ಲ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದರು.
ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ
ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 24 ರಂದು ಚಾಲನೆ ನೀಡಲಿದ್ದೇವೆ. ರಾಜ್ಯದ 1.28 ಕೋಟಿ ಕುಟುಂಬಗಳಿಗೆ 2000 ರೂ. ಗಳನ್ನು ಈ ಯೋಜನೆಯಡಿ ನೀಡಲಾಗುವುದು. ನಾವು ಜನರ ಕೈಗೆ ದುಡ್ಡು ನೀಡುತ್ತದ್ದೇವೆ. ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ತನ್ಮೂಲಕ ರಾಜ್ಯದ ಜಿಡಿಪಿ , ಆರ್ಥಿಕ ಚಟುವಟಿಕೆ ಜಾಸ್ತಿಯಾಗುತ್ತದೆ. ಐದು ಗ್ಯಾರಂಟಿಗಳಿಂದ ಒಬ್ಬರಿಗೆ 4 ರಿಂದ 5 ಸಾವಿರ ರೂ. ದೊರೆಯಲಿದ್ದು, ಈ ರೀತಿ ವಾರ್ಷಿಕವಾಗಿ 48 ರಿಂದ 60 ಸಾವಿರ ರೂ. ಜನರಿಗೆ ಲಭಿಸಲಿದೆ ಎಂದು ತಿಳಿಸಿದರು.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.