ಕಾಶ್ಮೀರ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ವಾತಾವರಣ ಗಂಭೀರವಾಗಿರುವಾಗಲೇ ಪಾಕಿಸ್ತಾನದ ಪ್ರಭಾವಿ ನಾಯಕರೊಬ್ಬರು ಸಾರೇ ಜಹಾಂ ಸೇ ಅಚ್ಚಾ, ಹಿಂದೂಸ್ತಾನ್ ಹಮಾರಾ ಎಂಬ ದೇಶಭಕ್ತಿ ಗೀತೆಯನ್ನು ಹಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಪಾಕಿಸ್ತಾನದ ಕರಾಚಿ ಮೂಲದ ಅಲ್ತಫ್ ಹುಸೇನ್ ಸಾರೇ ಜಹಾಂ ಸೇ ಅಚ್ಛಾ ಎಂದು ಹಾಡಿರುವ ಪಾಕ್ ನ ನಾಯಕರಾಗಿದ್ದು, ಸದ್ಯ ಇವರು ಲಂಡನ್ ನಲ್ಲಿ ವಾಸವಿದ್ದಾರೆ. ಹುಸೇನ್ ಅವರು ಕೆಲವು ದಿನಗಳ ಹಿಂದೆಯಷ್ಟೇ, ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಸರ್ಕಾರದ ಮೇಲೆ ಕಾಶ್ಮೀರದ ಜನರ ನಂಬಿಕೆ ಇಡಬಾರದು ಎಂಬ ಹೇಳಿಕೆಯನ್ನು ನೀಡಿದ್ದರು.

ಅವರು ಪಾಕಿಸ್ತಾನದ ನೀತಿಯನ್ನು ವಿರೋಧಿಸುತ್ತಾ ಕಳೆದ 72 ವರ್ಷಗಳಿಂದಲೂ ಪಾಕಿಸ್ತಾನದ ಸರ್ಕಾರ ಹಾಗೂ ಸೇನೆ ಕಾಶ್ಮೀರದ ಜನರಿಗೆ ಮೋಸ ಮಾಡುತ್ತಿದೆಯೆಂದು ಆರೋಪ ಮಾಡಿದ್ದರು‌. ಅದು ಮಾತ್ರವಲ್ಲದೆ 2016ರಲ್ಲಿ ಹುಸೇನ್ ಅವರು, ಪಾಕ್ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಅದನ್ನು ವಿಶ್ವದ ಕ್ಯಾನ್ಸರ್ ಎಂದು ವ್ಯಂಗ್ಯವಾಡಿದ್ದರು.
ಅಲ್ತಾಫ್ ಅವರು ನೀಡುತ್ತಿದ್ದ ಹೇಳಿಕೆಗಳನ್ನು ಪಾಕ್ ಖಂಡಿಸುತ್ತಾ, ಅಲ್ತಾಫ್ ಭಾರತದಿಂದ ಹಣ ಪಡೆದು ಪಾಕ್ ನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹಲವು ಬಾರಿ ಆರೋಪವನ್ನು ಮಾಡಿತ್ತು.

ಕರಾಚಿ ಭಾಗದಲ್ಲಿ ತನ್ನ ಬಲವನ್ನು ಹೊಂದಿರುವ ಅಲ್ತಾಫ್ ಅವರು ಪಾಕ್ ನಲ್ಲಿ ಇದ್ದರೆ ದೇಶದ ಭದ್ರತೆಗೆ ಸಮಸ್ಯೆಯೆಂದೂ, ಅವರಾಡುವ ಮಾತುಗಳು ದೇಶ ವಿರೋಧಿಯೆಂದು ಅವರನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಲಾಗಿದೆ. ಅದಕ್ಕೆ ಅವರು ಈಗ ಲಂಡನ್ ನಲ್ಲಿ ವಾಸವಿದ್ದಾರೆ. ಸ್ವಾತಂತ್ರ್ಯ ಬರುವ ಮೊದಲು ಜನರಲ್ಲಿ ಸ್ಪೂರ್ತಿ ತುಂಬುತ್ತಿದ್ದ ಸಾರೇ ಜಹಾಂ ಸೇ ಅಚ್ಛಾ ಹಾಡನ್ನು ಹಾಡುವ ಮೂಲಕ ಅಲ್ತಾಫ್ ಹುಸೇನ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here