ಪಾರ್ವತಮ್ಮ ರಾಜ್‍ಕುಮಾರ್ ಈ ಹೆಸರು ನಾಡಿನ ಎಲ್ಲರಿಗೂ ಚಿರಪರಿಚಿತವಾದ ಹೆಸರು. ಇದು ಒಂದು ಸಾಮಾನ್ಯವಾದ ಹೆಸರಲ್ಲ, ಈ ಹೆಸರು ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಹೆಸರು, ಕನ್ನಡ ಚಿತ್ರರಂಗ ಎಂದೆಂದಿಗೂ ಮರೆಯಲಾರದ ಹೆಸರು. ವರನಟ ಅಣ್ಣಾವ್ರ ಪತ್ನಿಯಾಗಿ, ದೊಡ್ಡ ಕುಟುಂಬವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಯಶಸ್ವಿ ಗೃಹಿಣಿಯಾಗಿ, ಪತಿಯ ಜೊತೆ ಸದಾ ಬೆನ್ನೆಲುಬಾಗಿ ನಿಂತ ಮಾದರಿ ಪತ್ನಿಯಾಗಿ, ಮೂವರು ಮುತ್ತಿನಂತ ನಾಯಕ ನಟರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟ ತಾಯಿಯಾಗಿ, ಚಿತ್ರ ನಿರ್ಮಾಣ ಸಂಸ್ಥೆಯೊಂದರ ಒಡತಿಯಾಗಿ ನಾನಾ ಪಾತ್ರಗಳನ್ನು ಸಕ್ಷಮವಾಗಿ ನಿರ್ವಹಿಸಿ ಮಹಿಳಾ ಲೋಕಕ್ಕೆ ಮಾದರಿಯಾದವರು ಪಾರ್ವತಮ್ಮ ರಾಜ್‍ಕುಮಾರ್.

ಪಾರ್ವತಮ್ಮ ರಾಜ್‍ಕುಮಾರ್ ಅವರು ಡಿಸೆಂಬರ್ 6,
1939 ರಲ್ಲಿ ನಂಜನಗೂಡಿನಲ್ಲಿ ಜನಿಸಿದರು. ಅಪ್ಪ ಅಪ್ಪಾಜಿಗೌಡ ಮತ್ತು ಅಮ್ಮ ಲಕ್ಷ್ಮಮ್ಮ. ಮನೆಯ ಹಿರಿ ಮಗಳಾಗಿದ್ದರು ಪಾರ್ವತಮ್ಮನವರು. ಹುಟ್ಟಿದ್ದು ನಂಜನಗೂಡಿನಲ್ಲಿ ಆದರೂ ಬೆಳೆದಿದ್ದು ಮೈಸೂರು ಬಳಿಯ ಒಂದು ಪುಟ್ಟ ಹಳ್ಳಿ ಸಾಲಿಗ್ರಾಮದಲ್ಲಿ. ಪಾರ್ವತಮ್ಮ ಅವರು ಇನ್ನೂ ತೊಟ್ಟಿಲಲ್ಲಿ ಇರುವಾಗಲೇ ಅವರ ಸೋದರ ಮಾವ ಸಿಂಗನಲ್ಲೂರು ಪುಟ್ಟಸ್ವಾಮಿ ಹಾಗೂ ಅವರ ಪತ್ನಿ ಲಕ್ಷ್ಮಮ್ಮ ಇಬ್ಬರೂ ತೊಟ್ಟಿಲಲ್ಲಿ ಬೆಳ್ಳಿಯ ನಾಣ್ಯವನ್ನಿಟ್ಟು, ಮುಂದೆ ಆಕೆಯನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳುವುದಾಗಿ ಮಾತು ಕೊಟ್ಟರು.

ಹತ್ತನೇ ತರಗತಿ ಮುಗಿಸಿದ ಕೂಡಲೇ ಪಾರ್ವತಮ್ಮನವರಿಗೆ ನಂಜನಗೂಡಿನ ರಾಣಪ್ಪನ ಛತ್ರದಲ್ಲಿ ವಿವಾಹವಾಯಿತು‌. ಮುತ್ತುರಾಜ್ ಅವರ ಜೊತೆ ಸಪ್ತಪದಿ ತುಳಿದ ಪಾರ್ವತಮ್ಮನವರು ಅಣ್ಣಾವ್ರ ಮನೆಯ ಬೆಳಕಾದರು. ವಿವಾಹದ ನಂತರ ಗಂಡನ ಮನೆಯ ಬಡತನದಲ್ಲೇ ಸುಖವನ್ನು ಕಂಡವರು, ಇತರರಿಗೂ ಸಂತೋಷವನ್ನು ನೀಡಿದವರು ಪಾರ್ವತಮ್ಮ. ಅದಾದ ನಂತರ ಅಣ್ಣಾವ್ರಿಗೆ ನಾಯಕನಾಗಿ ಸಿನಿಮಾದಲ್ಲಿ 1954 ರಲ್ಲಿ ಬೇಡರ ಕಣ್ಣಪ್ಪನ ಪಾತ್ರಕ್ಕೆ ಆಹ್ವಾನ ಬಂದಿತು. ಅಲ್ಲಿಂದ ತಮ್ಮ ಪತಿಯ ಜೊತೆ ನಿಂತ ಪಾರ್ವತಮ್ಮ ನವರು ಮುಂದೆ ತಮ್ಮ ಪತಿಯ ಜೊತೆಯಾಗಿ ನಡೆದರು.

ಅಣ್ಣಾವ್ರು ಚಿತ್ರರಂಗದಲ್ಲಿ ನಾಯಕ ನಟನಾಗಿ ಮೆರೆದರೆ, ಪಾರ್ವತಮ್ಮ ರಾಜ್‍ಕುಮಾರ್ ಅವರು ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನು ಬರೆದ ಮಹಿಳೆಯಾಗಿ ಅನೇಕರಿಗೆ ಸ್ಪೂರ್ತಿ ಹಾಗೂ ಮಾದರಿಯಾದರು. ತ್ರಿಮೂರ್ತಿ ಸಿನಿಮಾ ನಿರ್ಮಾಣದ ಮೂಲಕ ನಿರ್ಮಾಪಕಿಯಾದರು ಪಾರ್ವತಮ್ಮ ನವರು. ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಸಿನಿಮಾ ವಿತರಕಿ ಕೂಡಾ ಇವರೇ. ಹುಬ್ಬಳ್ಳಿಯಲ್ಲಿ ಚಂದ್ರಿಕಾ ಮೂವೀಸ್ ಎಂಬ ಹಂಚಿಕಾ ಸಂಸ್ಥೆ ನಿರ್ಮಾಣ ಮಾಡಿದ ಹೆಗ್ಗಳಿಕೆ ಪಾರ್ವತಮ್ಮ ರಾಜ್‍ಕುಮಾರ್ ಅವರದು.

ಪಾರ್ವತಮ್ಮ ರಾಜ್‍ಕುಮಾರ್ ಅವರು ತಮ್ಮದೇ ಆದ ವಜ್ರೇಶ್ವರಿ ಕಂಬೈನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ಮಹಿಳೆಯಾಗಿ ರಾಜ್ಯಾದ್ಯಂತ ನೂರಕ್ಕೂ ಅಧಿಕ ಸಿನಿಮಾ ವಿತರಣೆ ಮಾಡಿದ ದಾಖಲೆ ಪಾರ್ವತಮ್ಮ ಅವರದು. ಅವರ ನಿರ್ಮಾಣ ಸಂಸ್ಥೆಯ ಮೂಲಕ ಮೂಡಿದ ಬಂದ ಬೆಟ್ಟದ ಹೂ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರಕಿ, ಅವರ ಮಗ ಪುನೀತ್ ಅತ್ಯುತ್ತಮ ಬಾಲ ನಟನಾಗಿ ಪ್ರಶಸ್ತಿ ಪಡೆದರು. ಇವರದೇ ನಿರ್ಮಾಣದಲ್ಲಿ ಬಂದ ಜೀವನ ಚೈತ್ರ ಸಿನಿಮಾದ ನಾದ ಮಯ ಹಾಡಿಗೆ ಅಣ್ಣಾವ್ರಿಗೆ ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಗಾಯಕನಾಗಿ ಪ್ರಶಸ್ತಿ ಬಂದಿತು.

ಪಾರ್ವತಮ್ಮ ರಾಜ್‍ಕುಮಾರ್ ಅವರ ಜೀವನ ಒಂದು ಯಶೋಗಾಥೆ. ಅವರ ಸಾಧನೆ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಗುರ್ತಿಸಿ ಅವರನ್ನು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಸನ್ಮಾನಿಸಿದೆ ಭಾರತ ಸರ್ಕಾರ. ಇದೆಲ್ಲದರ ಹೊರತಾಗಿ ನೊಂದ ಮಹಿಳೆಯರಿಗೆ ದಾರಿ ದೀಪವಾಗಿದೆ ಪಾರ್ವತಮ್ಮ ರಾಜ್‍ಕುಮಾರ್ ಅವರು ಸ್ಥಾಪಿಸಿದ ಶಕ್ತಿ ಧಾಮ. ಹೀಗೆ ಪಾರ್ವತಮ್ಮ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಅಗ್ರ ನಾಯಕಿಯರಾಗಿ ಮೆರೆದ ಸುಧಾರಾಣಿ,ಮಾಲಾಶ್ರೀ, ಪ್ರೇಮ, ರಮ್ಯ ಮತ್ತು ರಕ್ಷಿತ ಅವರನ್ನು ತಮ್ಮ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರರಂಗಕ್ಕೆ ಪರಿಚಯಿಸಿದವರು.

ಪಾರ್ವತಮ್ಮನವರ ಜೀವನದ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ವಿಷಯಗಳಿವೆ. ಅವರ ಜೀವನ ಇಂದು ಅನೇಕರಿಗೆ ಒಂದು ಸ್ಪೂರ್ತಿ. ವಿಶೇಷವಾಗಿ ಗೃಹಿಣಿಯರಿಗೆ ಪಾರ್ವತಮ್ಮ ಅವರು ಮಾದರಿ ಮಹಿಳೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ಪಾರ್ವತಮ್ಮ ರಾಜ್‍ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಆದರೆ ಅವರ ನೆನಪುಗಳು, ಸರಳ ವ್ಯಕ್ತಿತ್ವ ಹಾಗೂ ಸಾಧನೆಯಿಂದಾಗಿ ಅವರು ನಾಡಿನ ಜನ ಮನದಲ್ಲಿ ಸದಾ ಉಳಿದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here