
ಮೈತ್ರಿ ಸರ್ಕಾರದ ಪತನಾನಂತರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ನಿವೃತ್ತಿಯಾಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಅದರ ಬಗ್ಗೆ ಹಾಗೂ ಇನ್ನಿತರೆ ವಿಚಾರಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕುಮಾರ ಸ್ವಾಮಿ ಅವರು ನಾನು ಕಳೆದ 14 ತಿಂಗಳಲ್ಲಿ ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಬಹಳಷ್ಟು ಶ್ರಮವಹಿಸಿ ದುಡಿದಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಧಿಸಲಾಗದ ಎಷ್ಟೋ ಕಾರ್ಯಗಳನ್ನು ನಾನು ಕೇವಲ 14 ತಿಂಗಳಲ್ಲಿ ಸಾಧಿಸಿರುವುದಾಗಿ ಅವರು ಹೇಳಿದ್ದಾರೆ.
ತಮ್ಮ ತಮ್ಮ ಕ್ಷೇತ್ರದ ಒಳಿತಿಗಾಗಿ ಶಾಸಕರು ನನ್ನ ಮುಂದೆ ಇಟ್ಟ ಬೇಡಿಕೆಗಳನ್ನು ತಕ್ಷಣವೇ ಪೂರೈಸಿರುವುದಾಗಿ ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ. ಸಿಎಂ ಸ್ಥಾನದಿಂದ ಹೆಚ್ಡಿಕೆ ಅವರು ಕೆಳಗಿಳಿದ ಮೇಲೆ ಮಾಜಿ ಸಿಎಂ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿರುವುದಾಗಿ ಎಲ್ಲೆಡೆ ಸುದ್ದಿಗಳು ಹರಿದಾಡಿ ಎಲ್ಲರ ಗಮನವನ್ನು ಸೆಳೆದಿತ್ತು. ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸ್ಪಷ್ಟೀಕರಣವನ್ನು ನೀಡಿದ್ದಾರೆ. ರಾಜ್ಯ ರಾಜಕೀಯದ ಪ್ರಸ್ತುತ ಬೆಳವಣಿಗೆಗಳಿಂದ ಅವರಿಗೆ ಬೇಸರವಾಗಿದ್ದು, ವೈಯಕ್ತಿಕವಾಗಿ ಹೇಳುವುದಾದರೆ ರಾಜಕೀಯದಲ್ಲಿ ಆಸಕ್ತಿ ಇಲ್ಲವಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಅದೇ ಸಂದರ್ಭದಲ್ಲಿ ಪಕ್ಷದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿರಿಸಿಕೊಂಡಾಗ, ಪಕ್ಷದ ಕಾರ್ಯಕರ್ತರ ಒತ್ತಾಸೆ ಹಾಗೂ ಅವರ ಕೋರಿಕೆಯನ್ನು ಮೀರಲಾರದೆ ನಾನು ರಾಜಕೀಯದಲ್ಲಿ ಇರುತ್ತೇನೆ ಎನ್ನುವ ಮೂಲಕ ರಾಜಕೀಯ ನಿವೃತ್ತಿಯ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಜಾತಿ ರಾಜಕೀಯ, ತೋಳ್ಬಲ ಹಾಗೂ ಹಣ ಇವುಗಳು ರಾರಾಜಿಸುತ್ತಿದ್ದು, ಇದರಿಂದಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಪಾರದರ್ಶಕತೆ ಎಂಬುದು ಮರೆಯಾಗಿ ಹೋಗಿದೆ ಎಂದು ಮಾಜಿ ಸಿಎಂ ಹೆಚ್ಡಿಕೆ ರಾಜಕೀಯದ ವಿಚಾರವಾಗಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.