ನಟ ಪ್ರಕಾಶ್ ರೈ ಅವರು ಅನ್ಯ ಭಾಷೆಯಲ್ಲಿ ಪ್ರಕಾಶ್ ರಾಜ್ ಎಂದೇ ಪರಿಚಿತರು. ಅವರ ರಾಜಕೀಯ ವಿಚಾರಧಾರೆಗಳು ಏನೇ ಆದರೂ, ಚಿತ್ರರಂಗದಲ್ಲಿ ಅವರ ಸಾಧನೆ ಮೆಚ್ಚಲೇಬೇಕಾದಂತಹುದು‌. ಒಮ್ಮೆ ಬಣ್ಣ ಹಚ್ಚಿ ನಟಿಸಲು ತೊಡಗಿದರೆಂದರೆ ಅವರು ತಾನು ನಿರ್ವಹಿಸುತ್ತಿರುವ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಾರೆ. ಅದಕ್ಕೆ ಅವರ ಪಾತ್ರಗಳು ಜನರ ಮನಸ್ಸಿನಲ್ಲಿ ಬಹುಕಾಲದ ವರೆಗೆ ನೆನಪಾಗಿ ಉಳಿದು ಬಿಡುತ್ತದೆ‌. ಇಂತಹ ಬಹುಭಾಷಾ ನಟ, ಮೇರು ನಟ ಸಹ ಕಲಾವಿದರ ಬಗ್ಗೆ ಕೂಡಾ ಅಪಾರ ಕಾಳಜಿ ಹೊಂದಿದ್ದರು ಎಂಬುದಕ್ಕೊಂದು ನಿದರ್ಶನ ಎನ್ನುವ ಘಟನೆಯನ್ನು ತೆಲುಗಿನ ಬಹಳ ಪ್ರಸಿದ್ಧ ನಟನಾದ ರಾಜಾ ರವೀಂದ್ರ ಅವರು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ.

ತೆಲುಗಿನ ಸೀನಿಯರ್ ನಟರೊಬ್ಬರು ಎಂದು ಹೇಳಿದ ರಾಜಾ ರವೀಂದ್ರ ಅವರು ಆ ನಟನ ಹೆಸರು ಈಗ ಹೇಳುವುದು ಸರಿಯಲ್ಲ, ಅವರೊಬ್ಬ ಸೀನಿಯರ್ ಹಾಗೂ ದೊಡ್ಡ ನಟ, ಆದರೆ ಆರ್ಥಿಕವಾಗಿ ಅವರು ದಿವಾಳಿಯಾಗಿದ್ದರು, ಮಾಡಿದ್ದ ಸಾಲವನ್ನು ತೀರಿಸಲಾಗದೆ, ಬೇರೆ ದಾರಿಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದರಂತೆ. ಆ ಸಂದರ್ಭದಲ್ಲಿ ಆ ನಟನ ನೆರವಿಗೆ ನಿಂತವರು ಪ್ರಕಾಶ್ ರೈ ಎಂಬ ವಿಚಾರವನ್ನು ರಾಜಾ ರವೀಂದ್ರ ಅವರು ತಿಳಿಸುವ ಮೂಲಕ ಪ್ರಕಾಶ್ ರೈ ಅವರು ಮಾಡಿರುವ ಸಹಾಯದ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ.

ಪ್ರಕಾಶ್ ರೈ ಅವರಿಗೆ ಸೀನಿಯರ್ ನಟನ ಪರಿಸ್ಥಿತಿ ತಿಳಿದು, ಅವರು ರಾಜಾ ರವೀಂದ್ರ ಅವರಿಗೆ ಕರೆ ಮಾಡಿ ಅವರನ್ನು ತನ್ನ ಬಳಿ ಕರೆತರುವಂತೆ ಹೇಳಿದರಂತೆ. ಹೀಗೆ ಆತ್ಮಹತ್ಯೆ ಗೆ ನಿರ್ಧರಿಸಿದ್ದ ನಟನನ್ನು ಕರೆಸಿ, ಅವರ ಜೊತೆ ಮಾತನಾಡಿದ ಪ್ರಕಾಶ್ ರೈ ಅವರು ಆ ನಟನಿಗೆ 50 ಲಕ್ಷ ರೂಪಾಯಿಗಳನ್ನು ನೀಡಿದ್ದು ಮಾತ್ರವಲ್ಲದೇ ಅದರಲ್ಲಿ ಒಂದು ರೂಪಾಯಿ ಕೂಡಾ ಮರಳಿ ಪಡೆಯಲಿಲ್ಲವಂತೆ. ಅದು ಮಾತ್ರವೇ ಅಲ್ಲದೆ ನಟ ರಾಜಾ ರವೀಂದ್ರ ಅವರು ತಮ್ಮ ಹಿರಿಯ ಮಗಳ ಮದುವೆ ಸಂದರ್ಭದಲ್ಲಿ ಕೂಡಾ ಪ್ರಕಾಶ್ ರೈ ಸಹಾಯ ಮಾಡಿದ್ದರು ಎಂಬುದನ್ನು ಕೂಡಾ ಸ್ಮರಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here