ಅಂಗ ವೈಕಲ್ಯ ಎಂಬುದು ದೇಹಕ್ಕೆ ಮಾತ್ರವೇ ಹೊರತು ಜೀವನದಲ್ಲಿ ಅಸಾಧ್ಯವಾದುದನ್ನು ಸುಸಾಧ್ಯ ಮಾಡುವ ದೃಢ ನಿಶ್ಚಯ ಹಾಗೂ ಆತ್ಮವಿಶ್ವಾಸವನ್ನು ಹೊಂದಿರುವ ಮನಸ್ಸುಗಳಿಗಲ್ಲ ಎಂಬುದನ್ನು ಜಗತ್ತಿಗೆ ಸಾರಿ ಹೇಳಿರುವ ಅದೆಷ್ಟೋ ಮಂದಿ ನಮ್ಮ ನಡುವೆಯೇ ಇದ್ದು, ಅವರ ಜೀವನ ದೈಹಿಕವಾಗಿ ಸಮರ್ಥರಾಗಿದ್ದರೂ, ಅಸಮರ್ಥರಂತೆ ಉಡಾಫೆಯ ಮಾತು ಹೇಳುತ್ತಾ ಕೂರುವ ಅದೆಷ್ಟೋ ಜನರಿಗೆ ಮಾದರಿಯಾಗಿದೆ. ಅಂತಹ ಸಾಧಕರಲ್ಲಿ ಒಬ್ಬರು ವಿಶೇಷ ಚೇತನರಾದ ಪ್ರಂಜಲ್ ಪಾಟೀಲ್ ಅವರು. ದೃಷ್ಟಿ ದೋಷವು ಅವರ ಸಾಧನೆಗೆ ತಲೆಬಾಗಿದೆ. ಅದು ಅವರ ಸಾಧನೆಯ ಹಾದಿಯಲ್ಲಿ ಅಡ್ಡಗಾಲಾದರೂ, ಅದನ್ನು ಮೀರಿ ನಿಂತು ಐಎಎಸ್ ಸೇವೆಗೆ ಆಯ್ಕೆ ಯಾದವರು ಪ್ರಂಜಲ್ ಪಾಟೀಲ್.

ಆರು ವರ್ಷದ ಬಾಲಕಿಯಾಗಿದ್ದಾಗ ದೃಷ್ಟಿಯನ್ನು ಕಳೆದುಕೊಂಡ ಬಾಲಕಿಗೆ ತನ್ನ ಗುರಿಯತ್ತ ಸಾಗಲು ಅದು ಅಡ್ಡಿಯಾಗಲಿಲ್ಲ. ಶಾಲಾ ಶಿಕ್ಷಣವನ್ನು ಕಮಲ ಮೆಹ್ತಾ ದಾದರ್ ಶಾಲೆಯಲ್ಲಿ ನಡೆಸಿದರು . ತದನಂತರ ಕ್ಸೇವಿಯರ್ ಸೆಂಟರ್ ಫಾಲ್ ವಿಶ್ಯುಯಲಿ ಇಂಪೇರ್ಡ್ ಅವರ ನೆರವಿನಿಂದ,ಸತತ ಪರಿಶ್ರಮದಿಂದ ಅವರಿಗೆ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ದಾಖಲಾತಿ ದೊರೆಯಿತು. ಅಲ್ಲಿ ರಾಜ್ಯಶಾಸ್ತ್ರ ವನ್ನು ಪ್ರಂಜಲ್ ಅಧ್ಯಯನ ಮಾಡಿದರು. ಇದರ ನಂತರ ದೆಹಲಿಗೆ ಹೋದ ಇವರು ಅಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇಂಟರ್ ನ್ಯಾಷನಲ್ ರಿಲೇಷನ್ಸ್ ವಿಷಯದಲ್ಲಿ ಸ್ನಾತಕೋತ್ತರ ಹಾಗೂ ಇಂಟಿಗ್ರೇಟೆಡ್ ಎಮ್.ಫಿಲ್ ಮತ್ತು ಪಿ.ಹೆಚ್ ಡಿ ಪದವಿಗಳನ್ನು ಕೂಡಾ ಪಡೆದುಕೊಂಡರು.

2014 ರಲ್ಲಿ ಇವರಿಗೆ ವಿವಾಹವಾಯಿತು. ಆದರೆ ಮನಸ್ಸಿನಲ್ಲೇ ಓದಿ, ಒಂದು ಉನ್ನತ ಸ್ಥಾನ ಪಡೆಯಬೇಕೆಂಬ ಆಸೆಯಿಂದ ಯುಪಿಎಸ್ ಸಿ ಪರೀಕ್ಷೆ ಬರೆದರು. ಆದರೆ ಆಗ ಅವರಿಗೆ 773 ನೇ ಸ್ಥಾನ ದೊರೆತ್ತಿತ್ತು. ಭಾರತೀಯ ರೈಲ್ವೆಯಲ್ಲಿ ಅವಕಾಶ ದೊರೆಯಿತಾದರೂ ಅವರ ಸಂಪೂರ್ಣ ದೃಷ್ಟಿದೋಷದಿಂದಾಗಿ ರೈಲೈ ಇಲಾಖೆ ಅವರಿಗೆ ಉದ್ಯೋಗ ಅವಕಾಶವನ್ನು ‌ನೀಡಲಿಲ್ಲ. ಈ ಘಟನೆ ಆಕೆಯನ್ನು ವಿಚಲಿತಗೊಳಿಸಲಿಲ್ಲ ಬದಲಿಗೆ ಮತ್ತಷ್ಟು ಬಲವನ್ನು ನೀಡಿತು. ಇನ್ನಷ್ಟು ಆಸಕ್ತಿಯಿಂದ ಅಧ್ಯಯನ ನಡೆಸಲು ಪ್ರೇರಣೆ ನೀಡಿತು. ಅವರು ಮೊದಲಿಗಿಂತ ಹೆಚ್ಚಿನ ಶ್ರಮವಹಿಸಿ ಓದಿದರು.

ಅವರ ಶ್ರಮಕ್ಕೆ ಪ್ರತಿಫಲ ಸಿಗುವ ಕಾಲ ಬಂದೇ ಬಂತು. ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆಯನ್ನು ಎದುರಿಸಿದ ಆಕೆ ಮಾಡಿದ್ದು ನಿಜವಾಗಿಯೂ ಅಭೂತಪೂರ್ವ ಸಾಧನೆ. ಅವರು 124 ನೇ ರ್ಯಾಂಕ್ ಪಡೆದರು. ಈ ಬಾರಿಯ ಅವರ ಸಾಧನೆಯ ಫಲವಾಗಿ ಇದೇ ವರ್ಷದ ಮೇ ತಿಂಗಳಲ್ಲಿ ಎರ್ನಾಕುಲಂ ಜಿಲ್ಲೆಯ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಅಧಿಕಾರವನ್ನು ಪಡೆದುಕೊಂಡರು. ಅವರ ಈ ಸಾಧನೆ ಇಂದು ಸಹಸ್ರಾರು ಮಂದಿಗೆ ಮಾದರಿಯಾಗಬೇಕಿದೆ. ಪ್ರಂಜಲ್ ಮಾತನಾಡುತ್ತಾ ರೈಲ್ವೆ ಇಲಾಖೆಗೆ ಅವಕಾಶಗಳ ದ್ವಾರ ಯಾವಾಗಲೂ ಎಲ್ಲರಿಗಾಗಿಯೂ ತೆರೆಯಬೇಕು. ದೈಹಿಕ ಮಿತಿಗಳನ್ನು ಅಲ್ಲಿ ಹೇರಬಾರದು ಎಂದು ಸಲಹೆ ನೀಡಿದ್ದಾರೆ.

ಪ್ರಂಜಲ್ ಪಾಟೀಲ್ ರಂತಹವರು ನಮ್ಮಲ್ಲಿ ಬಹಳ ವಿರಳ. ಜೀವನದಲ್ಲಿ ಒಮ್ಮೆ ಸೋಲು ಎದುರಾದರೆ, ಅವಕಾಶ ವಂಚಿತರಾದರೆ ಅದೇ ಜೀವನದ ವಿಫಲತೆ ಎಂದು ಭಾವಿಸಿ ಖಿನ್ನರಾಗುತ್ತಾರೆ. ಅಂತಹವರ ಮುಂದೆ ದೈಹಿಕ ನ್ಯೂನ್ಯತೆಯು ಸಾಧನೆಗೆ ಎಂದೂ ಅಡ್ಡಿಯಲ್ಲ ಎಂಬುದನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿರುವ ಇವರ ಜೀವನ ಹಾಗೂ ಸಾಧನೆ ಲಕ್ಷಾಂತರ ಭಾರತೀಯರಿಗೆ ಒಂದು ಚೈತನ್ಯ ತುಂಬುವ ಯಶೋಗಾಥೆಯಾಗಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here