ಕೊರೊನಾ ಲಾಕ್ ಡೌನ್ ಆದ ನಂತರ ಬಹುತೇಕ ಉದ್ಯಮಗಳು ಬಂದ್ ಆಗಿವೆ. ಎಲ್ಲೆಡೆ ಜನರು ಸಂಕಷ್ಟವನ್ನು ಎದುರಿಸುತ್ತಿದ್ದು ಸರ್ಕಾರ ಹಾಗೂ ವಿವಿಧ ಇಲಾಖೆಗಳು ವಿವಿಧ ವರ್ಗದ, ವಿವಿಧ ಶ್ರಮಿಕರ ನೆರವಿಗೆ ಪ್ಯಾಕೇಜ್ ಗಳನ್ನು ಘೋಷಣೆ ಮಾಡುತ್ತಿದೆ. ಇನ್ನು ಲಾಕ್ ಡೌನ್ ನಿಂದಾಗಿ
ಶಾಲಾ ಕಾಲೇಜುಗಳು ಕೂಡಾ ಬಂದ್ ಆಗಿದ್ದು, ಅನೇಕರು ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಕಾಲೇಜು ತೆರೆಯವುದು ಬೇಡ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ. ಇದು ತಪ್ಪಲ್ಲ ಇದು ಸರಿಯಾದ ನಿರ್ಧಾರವೇ ಆಗಿದೆ‌. ಆದರೆ ಖಾಸಗಿ ಶಾಲೆಗಳಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ, ಸಣ್ಣ ಪುಟ್ಟ ನಗರ ಪಟ್ಟಣಗಳ ಖಾಸಗಿ ಶಾಲೆಗಳ ಶಿಕ್ಷಕರ ಪರಿಸ್ಥಿತಿ ದುರ್ಬರವಾಗುತ್ತಾ ಸಾಗಿದೆ.

ಎಂಟು, ಹತ್ತು ಸಾವಿರ ಸಂಬಳಕ್ಕೆ ಖಾಸಗಿ ಶಾಲೆಯಲ್ಲಿ
ಕೆಲಸ ಮಾಡುವ ಶಿಕ್ಷಕರಿಗೆ ಕಳೆದೆರಡು ತಿಂಗಳಿಂದ ಸಂಬಳವಿಲ್ಲದೆ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಯಾವುದೇ ಪರಿಹಾರದ ಪ್ಯಾಕೇಜಾಗಲೀ, ತಾವು ದಶಕಗಳಿಂದ ದುಡಿಯುವ ಖಾಸಗಿ ಸಂಸ್ಥೆಗಳ ಕಡೆಯಿಂದಾಗಲೇ ಅಗತ್ಯ ನೆರವು ಕೂಡಾ ಸಿಗದಂತಾಗಿದೆ. ಯಾರ ಬಳಿ ಹೇಳಿಕೊಳ್ಳುವುದು ಎಂಬುದು ಕೂಡಾ ತಿಳಿಯದ ಪರಿಸ್ಥಿತಿ. ದಶಕಗಳಿಂದ ಕಾಲದಿಂದಲೂ ಇರುವ ಶಾಲೆಗಳು ಕನಿಷ್ಠ ಶಿಕ್ಷಕರಿಗೆ ಅಗತ್ಯ ವಸ್ತುಗಳನ್ನು ಕೂಡಾ ನೀಡುವಷ್ಟು ಗಳಿಸಿಲ್ಲವೇ? ಲಕ್ಷ ಲಕ್ಷ ಶುಲ್ಕ ಪಡೆಯುವ ಶಾಲೆಗಳಲ್ಲಿ ನೀಡುವ ಶಿಕ್ಷಣವನ್ನೇ ಇಂತಹ ಶಾಲೆಗಳ ಶಿಕ್ಷಕರೂ ನೀಡುತ್ತಿದ್ದಾರೆ. ಆದರೆ ಈ‌‌ ಸಂಕಷ್ಟದಲ್ಲಿ ಅವರ ನೆರವಿಗೆ ಯಾರೂ ಧಾವಿಸದೇ ಇರುವುದು ವಿಷಾದನೀಯ.

ಅಲ್ಲದೇ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವ ಸಹಸ್ರಾರು ಸಂಖ್ಯೆಯಲ್ಲಿ ಇರುವ ಶಿಕ್ಷಕರ ಪರವಾಗಿ ಎಲ್ಲೂ, ಯಾರೂ ದನಿ ಎತ್ತುತ್ತಿಲ್ಲ, ಶಿಕ್ಷಕ ಕ್ಷೇತ್ರದ ಪ್ರತಿನಿಧಿಗಳು ಕೂಡಾ ಖಾಸಗಿ ಶಾಲೆಯ ಶಿಕ್ಷಕರ ಪರವಾಗಿ ಇದುವರೆವಿಗೂ ಮಾತನಾಡದಿರುವುದು ಅದೆಷ್ಟೋ ಶಿಕ್ಷಕರ ಜೀವನದಲ್ಲಿ ಶಿಕ್ಷಕ ವೃತ್ತಿಯು ಅಭದ್ರತೆಯನ್ನು ಹುಟ್ಟು ಹಾಕುತ್ತಿದೆ. ಯಾವುದೇ ರೀತಿಯ ರಕ್ಷಣೆ ಇಲ್ಲ ಎನಿಸುವಂತಾಗಿದೆ. ಗ್ರಾಮಾಂತರ ದಲ್ಲಿ ಅದೆಷ್ಟೋ ಖಾಸಗಿ ಶಾಲೆಗಳು ಎಸ್‌ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಸತತ ನೂರು ಪ್ರತಿ ಶತ ಫಲಿತಾಂಶ ದಾಖಲಿಸುತ್ತಿದ್ದು ಇಲ್ಲಿನ ಶಿಕ್ಷಕರ ಶ್ರಮಕ್ಕೆ ಇದು ಸಾಕ್ಷಿಯಾಗಿದೆ.

ಆದರೆ ಲಾಕ್ ಡೌನ್ ನಂತರ ಅತ್ತ ವೇತನವೂ ಇಲ್ಲದೇ ಇತ್ತ ಸರ್ಕಾರದ ನೆರವೂ ಇಲ್ಲದೆ ಅಭದ್ರತೆಯಲ್ಲಿ ಜೀವನ ಕಳೆಯುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರ ಬಗ್ಗೆ ಇನ್ನಾದರೂ ಸರ್ಕಾರ ಗಮನಹರಿಸುವುದೇ ಎಂದು ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here