ದೊಡ್ಮನೆ ಹುಡುಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂದರೆ ಅದು ಅಭಿಮಾನಿಗಳ‌‌ ಪಾಲಿಗೆ ಒಂದು ಪರ್ವ ದಿನ. ಈಗಾಗಲೇ ಅದಕ್ಕೆ ದಿನಗಣನೆ ಪ್ರಾರಂಭವಾಗಿದೆ. ಅಭಿಮಾನಿಗಳು ಹಾಗೂ ಆಪ್ತರು ಅಪ್ಪು ಅವರ ಹುಟ್ಟು ಹಬ್ಬವನ್ನು ಆಚರಿಸಲು, ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಈಗಾಗಲೇ ಸಿದ್ಧತೆಗಳನ್ನು ನಡೆಸಿದ್ದಾರೆ. ಅಪ್ಪು ಹುಟ್ಟುಹಬ್ಬ ಪ್ರತಿ ವರ್ಷ ಕೂಡಾ ಬಹಳ ಅದ್ದೂರಿಯಾಗಿ ನಡೆಯುತ್ತದೆ. ಆದ್ದರಿಂದ ಪ್ರತಿ ವರ್ಷದ ಹಾಗೆ ಈ ಬಾರಿಯೂ ಕೂಡಾ ಪವರ್ ಸ್ಟಾರ್ ಹುಟ್ಟು ಹಬ್ಬದ ಅಬ್ಬರ ಜೋರಾಗಿಯೇ ಇರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮುಂಗಡವಾಗಿಯೇ ಶುಭಾಶಯ ತಿಳಿಸುತ್ತಿದ್ದಾರೆ.

ಈ ಬಾರಿಯೂ ಅವರಿಗೆ ಉಡುಗೊರೆಗಳ ಭರ್ಜರಿ ಮಹಾಪೂರ ಆಗುವುದರಲ್ಲಿ ಅನಮಾನವೇ ಬೇಡ. ಇದೇ ತಿಂಗಳು ಅಂದರೆ ಮಾರ್ಚ್ 17ರಂದು ಪವರ್ ಸ್ಟಾರ್ ಹುಟ್ಟು ಹಬ್ಬ. ಈ ವಿಶೇಷ ದಿನದಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಸಾಕಷ್ಟು ಉಡುಗೊರೆಗಳು ಕಾದಿವೆ. ಪವರ್ ಸ್ಟಾರ್ ಅವರು ಜೇಮ್ಸ್ ಚಿತ್ರಕ್ಕೆ ಈಗಾಗಲೆ ಹಸಿರು ನಿಶಾನೆಯನ್ನು ತೋರಿಸಿದ್ದು ಈ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಅಪ್ಪು ಅವರ ಜನ್ಮ ದಿನದಂದು ಬಿಡುಗಡೆಯಾಗುತ್ತಿದೆ. ಇದು ಅವರ ಜನ್ಮ ದಿನಕ್ಕೆ ಜೇಮ್ಸ್ ಚಿತ್ರ ತಂಡದ ಉಡುಗೊರೆಯೇ ಆಗಿದೆ.

ನಿರ್ದೇಶಕ ಪವನ್ ಒಡೆಯರ್ ಹಾಡಿನ ಮೂಲಕ ಉಡುಗೊರೆ ನೀಡಲು ಸಿದ್ಧತೆ ನಡೆಸಿದ್ದಾರೆ. ಅದೇನೆಂದರೆ ನಟ ಸಾರ್ವಭೌಮ ಚಿತ್ರದ ಟೈಟಲ್ ಹಾಡು ಬಹಳಷ್ಟು ಜನಪ್ರಿಯ ಆದ ಹಿನ್ನೆಲೆಯಲ್ಲಿ ಅದೇ ಟ್ರ್ಯಾಕ್ ಗೆ ಹೊಸ ಸಾಹಿತ್ಯವನ್ನು ಸೇರಿಸಿ ಹಾಡೊಂದನ್ನು ಮಾಡಲಾಗುತ್ತಿದೆ. ಈ ಹಾಡಿನ ವಿಶೇಷತೆ ಎಂದರೆ ಇದರಲ್ಲಿ ಪುನೀತ್ ಅವರು ಅಭಿನಯಿಸಿರುವ ಸಿನಿಮಾಗಳ ಬಗ್ಗೆ ಸಾಹಿತ್ಯ ಇದೆ ಎನ್ನಲಾಗಿದೆ. ಈ ಹಾಡು ಕೂಡಾ ಅಪ್ಪು ಅವರಿಗೆ ಹುಟ್ಟು ಹಬ್ಬಕ್ಕೆ ಸಿಗುತ್ತಿರುವ ಒಂದು ಭರ್ಜರಿ ಉಡುಗೊರೆಯೇ ಆಗಿದೆ ಎಂಬುದರಲ್ಲಿ ಅನುಮಾನವಿಲ್ಲ.

ಇನ್ನು ಈ ವರ್ಷದಲ್ಲಿ ಬರಲಿರುವ ಬಹುನಿರೀಕ್ಷೆಯ ಪವರ್ ಸ್ಟಾರ್ ಸಿನಿಮಾ ಅಂದ್ರೆ ಅದು ಯುವರತ್ನ. ರಾಜಕುಮಾರ ದಂತಹ ಎವರ್ ಗ್ರೀನ್ ಇಂಡಸ್ಟ್ರಿ ಬ್ಲಾಕ್‌ಬಸ್ಟರ್ ಸಿನಿಮಾ ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಮತ್ತೊಮ್ಮೆ ಪುನೀತ್ ರಾಜ್‍ಕುಮಾರ್ ಯುವರತ್ನ ಚಿತ್ರದಲ್ಲಿ ನಟಿಸುತ್ತಿದ್ದು ಈಗಾಗಲೇ ಯುವರತ್ನ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪುನೀತ್ ರಾಜ್‍ಕುಮಾರ್ ಜನ್ಮದಿನಕ್ಕೆ ಯುವರತ್ನ ಚಿತ್ರತಂಡ ಸಹ ಯುವರತ್ನ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡುತ್ತಿದೆ. ಹೀಗೆ ಪವರ್ ಸ್ಟಾರ್ ಜನ್ಮದಿನದ ಸಂಭ್ರಮಕ್ಕೆ ಅಭಿಮಾನಿಗಳಿಗೆ ಸಖತ್ ಸಂಭ್ರಮ ನೀಡಲು ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರತಂಡಗಳು ಸಜ್ಜಾಗುತ್ತಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here