ವಿದ್ಯೆ ವಿನಯ ಕಲಿಸುತ್ತದೆ ಎನ್ನುತ್ತಾರೆ.. ವಿನಯ ವಿದ್ಯೆ ಕಲಿಸಿದ ಉದಾಹರಣೆ ಉಂಟೇ ಎಂದರೆ ಇದೆ ಎನ್ನುವ ಸಾಕ್ಷಿಯೊಂದು ಇಲ್ಲಿದೆ. ನಮ್ಮ ರಾಜ್ ಕುಮಾರ್ ಎಂಬ ಮುತ್ತುರಾಜ್ ಹುಟ್ಟಿ ಬೆಳೆದಿದ್ದು ತಾಯಿಯ ತವರು ಗಾಜನೂರಿನಲ್ಲಿ. ಅಲ್ಲಿ ಶಾಲೆ ಇರಲಿಲ್ಲ. ಒಂದು ಮೈಲು ದೂರದ ಹರಿಪುರಕ್ಕೆ ಹೋಗಬೇಕಿತ್ತು. ಶಾಲೆ ಸೇರಿದ್ದೇನೋ ಸರಿ.‌ ಆದರೆ ಕಲಿತಿದ್ದು..? ಶಾಲೆಗೆ ಹೋಗುವಾಗ ಉದ್ದಕ್ಕೆ ಸಿಗುತ್ತಿದ್ದ ಮರ ,ಗಿಡ, ಕೆರೆ, ಬಾವಿ ಈ ಹುಡುಗನಿಗೆ ಮೆಚ್ಚಿನ ಸಂಗಾತಿಗಳಾಗಿದ್ದವು. ಅಲ್ಲಿಯೇ ಇದ್ದ ದನ ಮೇಯಿಸಿಕೊಂಡು ಖುಷಿ ಪಡೆದುಕೊಳ್ಳುತ್ತಿದ್ದ. ಆದರೆ ತಂದೆ ತಾಯಿ ಬಿಡುತ್ತಾರೆಯೇ?  ಹರಿಪುರ ಶಾಲೆಗೆ ಸೇರಿಸಿದರು.

ಒಂದು ದಿನ ತನಿಖಾಧಿಕಾರಿ ಬಂದರು. ಹುಡುಗರ ಜಾಣತನದ ಪರೀಕ್ಷೆ ನಡೆಯಿತು. ನಾಲ್ಕನೇ ತರಗತಿಯ ಮುತ್ತು ರಾಜನಿಗೆ ಅಯೋಮಯ.‌ ಮಗ್ಗಿ ಬಾರದು..ಕೂಡುವುದು.. ಕಳೆಯುವುದು ಗೊತ್ತಿಲ್ಲ ! ಪರೀಕ್ಷೆ ನಡೆಸುತ್ತಿರುವ ಸೂಟು ಬೂಟಿನ ಸಾಹೇಬರ ಪ್ರಶ್ನೆಗೆ..”ಬೆಬ್ಬೆಬ್ಬೆ” ಎನ್ನುವಂತಾಯಿತು. ಅಧಿಕಾರಿ ಮೇಷ್ಟ್ರ ಮುಖಕ್ಕೆ ಮಂಗಳಾರತಿ ಮಾಡಿ ಹೋದರು. ಅವರಿಗೆ ಸಿಟ್ಟು ಈ ಹುಡುಗನ ಮೇಲೆ. ಇವನಿಂದಾಗಿ ಮೇಲಧಿಕಾರಿಯಿಂದ ಮಾತು ಕೇಳಬೇಕಾಯ್ತುಲೢ ಎಂದು. “ನೀನು ದನ ಕಾಯಲು ಲಾಯಕ್ ಹೋಗು “ಎಂದು ಬೆತ್ತದಿಂದ ಮನಬಂದಂತೆ ಥಳಿಸಿದ್ದರು.

ಅವತ್ತು ಶಾಲೆ ಬಿಟ್ಟ ಮುತ್ತುರಾಜ್ ಮತ್ತೆ ಶಾಲೆ ಕಡೆ ತಲೆ ಹಾಕಲಿಲ್ಲ ..! ಶಾಲೆ ಬಿಟ್ಟ ಮಗನನ್ನು ಕಂಡರೆ ತಂದೆಗೆ ನೋವೆನಿಸುತ್ತದೆ ಆದರೆ ಮಗ ಓದದಿದ್ದರೆ ಏನಂತೆ ಒಳ್ಳೇ ಮನುಷ್ಯನಾಗಿ ಬಾಳಬೇಕು… ಆದರೆ ಅವರು ತಿದ್ದಿದರೂ ಮಗ ಸರಿಯಾಗಿ ನಡೆದುಕೊಳ್ಳಲಿಲ್ಲ ! ಅವರೂ ಬೆತ್ತದ ರುಚಿ ತೋರಿಸಿದರು. ಅದು ಅಂತಿಂಥ ಬೆತ್ತ ಅಲ್ಲ ಬಿಳಿಗಿರಿರಂಗನ ಬೆಟ್ಟಕ್ಕೆ ಹೋದಾಗ ತಂದಿದ್ದು . ಆದರೆ ಮುಂದೆ ನಡೆದಿದ್ದು ಇತಿಹಾಸ. ನಾಲ್ಕನೇ ತರಗತಿಯಲ್ಲಿ ಕೂಡುವ ಲೆಕ್ಕ ಮಾಡದೆ ಪೆಟ್ಟು ತಿಂದು ಶಾಲೆ ಬಿಟ್ಟ ಹುಡುಗನನ್ನು ಮೈಸೂರು ವಿಶ್ವವಿದ್ಯಾಲಯ ಕರೆದು ಗೌರವ ಡಾಕ್ಟರೇಟ್ ನೀಡಿ ಸಂಭ್ರಮಿಸಿತು.

ಅವತ್ತು ಅವರ ಜೊತೆಗೆ ಡಾಕ್ಟರೇಟ್ ಪದವಿ ಪಡೆದವರು ಕನ್ನಡದ ಹೆಸರಾಂತ ಕವಿ ವಿ.ಸಿ. ಸೀತಾರಾಮಯ್ಯ.  ಇಬ್ಬರು ಅಕ್ಕಪಕ್ಕ ಕುಳಿತಾಗ ರಾಜ್ ಗೆ ಏಕೋ ಸಂಕೋಚ! ವಿ.ಸಿ. ಸೀತಾರಾಮಯ್ಯನವರು ದೊಡ್ಡ ಸಾಹಿತಿ. ಒಂದಲ್ಲ; ಎರಡೆರಡು ವಿಷಯಗಳಲ್ಲಿ ಎಂ.ಎ ಪದವಿ ಪಡೆದವರು. ಅಂಥವರ ಜೊತೆಗೆ ಅವಿದ್ಯಾವಂತನಾದ ತಾನು ಹೇಗೆ ಪಕ್ಕದಲ್ಲಿ ಕೂರುವುದು? ರಾಜ್ ಚಡಪಡಿಕೆಯನ್ನು ವಿಚಾರಿಸಿದಾಗ ಅವರು ಇದನ್ನೇ ವೀ.ಸಿಯವರಿಗೆ ತಿಳಿಸಿದರಂತೆ. ಅದಕ್ಕೆ ವಿ.ಸಿ .ಸೀತಾರಾಮಯ್ಯ “ನನಗೆ ಡಾಕ್ಟರೇಟ್ ಕೊಡ್ತಾರೆ ಅಂದ್ರೆ ಇಷ್ಟೆಲ್ಲ ಜನ ನೋಡೋಕ್ಕೆ ಬರುತ್ತಿದ್ದರೆ?” ಎಂದು ಮುಂದೆ ನೆರೆದ ಜನಸಾಗರದತ್ತ ಬೆರಳು ಮಾಡಿ ತೋರಿದರು.

“ಇದೆಲ್ಲಾ ನೀವು ಪಡೆದ ವಿದ್ಯೆಯಿಂದ ಅಲ್ಲವೇ..? ವಿದ್ಯೆ ವಿನಯ ಕೊಡುತ್ತದೆ ಎನ್ನುತ್ತಾರೆ. ಆದರೆ ವಿನಯವೇ ವಿದ್ಯೆ ದೊರಕಿಸಿಕೊಟ್ಟ ಅಪರೂಪದ ಉದಾಹರಣೆ ನೀವು” ಎಂದರಂತೆ. ಏನೇ ಆಗಲಿ, ಅಂದು ಹೊಡೆದ ಮೇಷ್ಟರಿಗೆ ಕನ್ನಡ ಜನ ಕೃತಜ್ಞರಾಗಿರಬೇಕು. ಅವರೇನಾದರೂ ಆಗ ಮುದ್ದಿಸಿ ತಿದ್ದಿ ಪಾಠ ಹೇಳಿದ್ದರೆ ಮುತ್ತುರಾಜ ಚೆನ್ನಾಗಿ ಓದಿ ಇನ್ನೇನೋ ಆಗಿಬಿಡುತ್ತಿದ್ದರು. ಡಾ. ರಾಜ್ ಕುಮಾರ್ ಆಗುತ್ತಿರಲಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here