ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರು ರಾಜಕೀಯಕ್ಕೆ ಅಡಿಯಿಡುವ ಎಲ್ಲ ಲಕ್ಷಣಗಳಿದ್ದರೂ ಅವರು ಕಡೆಗೂ ರಾಜಕೀಯಕ್ಕೆ ಅಡಿಯಿಡಲೇ ಇಲ್ಲ. ತಮ್ಮ ಜೀವನವನ್ನು ಕೊನೆತನಕ ಕಲೆಗಾಗಿ ಮೀಸಲಿಟ್ಟರು. ಆದರೂ ಒಂದು ಘಟನೆಯನ್ನು ಅತ್ತ ರಾಜಕೀಯ ಇತ್ತ ಚಿತ್ರರಂಗದ ಅಭಿಮಾನಿಗಳು ಇಂದಿಗೂ ನೆನೆಯುತ್ತಾರೆ. ಅದು 1978ರ ಉಪ ಚುನಾವಣೆ ಸಂದರ್ಭ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಡಾ.ರಾಜ್ ಕುಮಾರ್ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇತ್ತು. ಈಗಿನ ತರಹ ಕಾಂಗ್ರೆಸ್ ಪಕ್ಷ ಆಗಲೂ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಗೆಲುವಿಗಾಗಿ ಹಪಹಪಿಸುತ್ತಿದ್ದ ಸಮಯ. ಇಂತಹ ಸಮಯದಲ್ಲಿ ಡಾ.ರಾಜ್‍ಕುಮಾರ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸಂಗತಿ ಕಾಂಗ್ರೆಸ್ ವಲಯದಲ್ಲಿ ದುಃಸ್ವಪ್ನದಂತೆ ಕಾಡುತ್ತಿತ್ತು.

ಆಗ ಭಾರತೀಯ ರಾಜಕೀಯ ವಲಯದಲ್ಲಿ ಹೊಸ ಗಾಳಿ ಬೀಸುತ್ತಿತ್ತು. ತುರ್ತು ಪರಿಸ್ಥಿತಿಯ ಬಳಿಕ ಕಾಂಗ್ರೆಸ್ ತನ್ನ ವರ್ಚಸ್ಸನ್ನು ಕಳೆದುಕೊಂಡಿತ್ತು. ಇಂದಿರಾಗಾಂಧಿ ಶತಾಯಗತಾಯ ಉಪಚುನಾವಣೆಯಲ್ಲಿ ಗೆಲ್ಲಲು ಪಣತೊಟ್ಟಿದ್ದರು. ಸ್ವಾತಂತ್ರ್ಯದ ಬಳಿಕ ಕೇಂದ್ರದಲ್ಲಿ ಜನತಾ ಪರಿವಾರ ಮತ್ತು ಇತರೆ ಪಕ್ಷಗಳು ಮೊಟ್ಟಮೊದಲ ಸಲ ಪ್ರಾಬಲ್ಯ ಮೆರೆದಿದ್ದಂತಹ ಸಂದರ್ಭವದು.
ಈ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಸೆಣೆಸಲು ರಾಜ್ಯದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಗಾಗಿ ಹುಡುಕಾಟ ನಡೆದಿತ್ತು. ಆಗ ಡಾ.ರಾಜ್ ಕುಮಾರ್ ಬಿಟ್ಟರೆ ಇನ್ಯಾರೂ ಆ ರೀತಿಯ ವರ್ಚಸ್ಸಿನ ವ್ಯಕ್ತಿ ಇರಲಿಲ್ಲ. ಹಾಗಾಗಿ ಹಲವಾರು ರಾಜಕೀಯ ಪಕ್ಷಗಳು ಅವರನ್ನು ಕಣಕ್ಕಿಳಿಸಲು ಹಾತೊರೆಯುತ್ತಿದ್ದವು.

ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಇಂದಿರಾ ವಿರುದ್ಧ ರಾಜ್‌ರನ್ನು ಕಣಕ್ಕಿಳಿಸುವ ತೆರೆಮರೆ ಕಸರತ್ತುಗಳು ಬಿರುಸಾಗಿದ್ದವು.
ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿಗಾಗಿ ಕಾಂಗ್ರೆಸ್‌ನ ಡಿ ಬಿ ಚಂದ್ರೇಗೌಡ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದರು. ರಾಜ್ ಕುಮಾರ್ ಅವರ ಜನಪ್ರಿಯತೆಯನ್ನು ಬಂಡವಾಳವಾಗಿಸಿಕೊಂಡಿದ್ದ ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವಂತೆ ಅವರ ಬೆನ್ನುಬಿದ್ದಿದ್ದವು. ಆದರೆ ರಾಜ್ ಆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ರಾಜಕಾರಣಿಗಳು ಎಷ್ಟರ ಮಟ್ಟಿಗೆ ರಾಜ್‌ರನ್ನು ಓಲೈಸಲು ಪ್ರಯತ್ನಿಸುತ್ತಿದ್ದರೆಂದರೆ, ಆ ಸಂದರ್ಭದಲ್ಲಿ ರಾಜ್ ಮತ್ತು ಪಾರ್ವತಮ್ಮ ಒಂದು ವಾರ ಕಾಲ ಒಬ್ಬರನ್ನೊಬ್ಬರು ಮಾತನಾಡಿಸಿಕೊಳ್ಳದಷ್ಟೂ ಸಾಧ್ಯವಾಗಿರಲಿಲ್ಲ. ಕಡೆಗೆ ಅವರ ಕಾಟ ತಾಳಲಾರದೆ ರಾಜಕಾರಣಿಗಳ ಕೈಗೆ ಸಿಗದಂತೆ ಅಜ್ಞಾತ ಸ್ಥಳದಲ್ಲಿದ್ದು ಬಿಡುತ್ತಿದ್ದರು.

ಅದೆಲ್ಲಾ ಆದ ಬಳಿಕ ತಾನೇಕೆ ಚುನಾವಣೆಗೆ ಸ್ಪರ್ಧಿಸಲಿಲ್ಲ ಎಂಬ ಬಗ್ಗೆ ರಾಜ್ ಸಾರ್ವಜನಿಕವಾಗಿ ಎಲ್ಲೂ ಹೇಳಲಿಲ್ಲ. ಆಗ ಹಲವಾರು ವದಂತಿಗಳು, ಮಾತುಗಳು ಕೇಳಿಬಂದಿದ್ದವು. ಆದರೆ ರಾಜ್ ವರ್ಚಸ್ಸಿಗೆ ಮಾತ್ರ ಇದರಿಂದ ಯಾವುದೇ ಕುಂದು ಬರಲಿಲ್ಲ. ಇದೀಗ ಇದೇ ಮೊದಲ ಸಲ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ತಮ್ಮ ತಂದೆ ಅವರ ಬಳಿ ಹೇಳಿದ್ದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
1978ರ ಚುನಾವಣೆ ಬಳಿಕ ರಾಘವೇಂದ್ರ ರಾಜ್ ಕುಮಾರ್ ಸಹ ಅಪ್ಪಾಜಿ ಅವರ ಉತ್ತರಕ್ಕಾಗಿ ಬಹಳ ವರ್ಷ ಕಾಯಬೇಕಾಯಿತಂತೆ. “ಆಗ ತಾನು ದ್ವಿತೀಯ ಪಿಯುಸಿ ಮುಗಿಸಿ ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರಿಪೇರ್ ಆಗುತ್ತಿದ್ದೆ. ಆಗ ಇದೇ ವಿಚಾರವನ್ನು ಅಪ್ಪಾಜಿ ಬಳಿ ಕೇಳುತ್ತಿದ್ದೆ. ಆಗ ಅಪ್ಪಾಜಿ, ನೀನಿನ್ನೂ ಚಿಕ್ಕವ, ಇದೆಲ್ಲಾ ನಿನಗೆ ಈಗ ಅರ್ಥವಾಗಲ್ಲ. ಈ ಬಗ್ಗೆ ಹೇಳಲು ಇದು ಸೂಕ್ತ ಸಮಯ ಅಲ್ಲ. ಸಮಯ ಬಂದಾಗ ತಿಳಿಸುತ್ತೇನೆ. ಕವಿರತ್ನ ಕಾಳಿದಾಸ ಸಿನಿಮಾದ ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಎಂದಿದ್ದರು’.

2005ರವರೆಗೂ ಆ ರಹಸ್ಯವನ್ನು ಅಪ್ಪಾಜಿ ಹೇಳಿರಲಿಲ್ಲ. “2005ರಲ್ಲಿ ಚೆನ್ನೈನಲ್ಲಿ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಗ ಆಸ್ಪತ್ರೆಯ ಕೊಠಡಿಗೆ ನನ್ನನ್ನು ಏಕಾಂತವಾಗಿ ಬರಲು ಹೇಳಿದರು. ಆಗ ಸುಮಾರು ವರ್ಷಗಳ ಹಿಂದೆ ನಾನು ಕೇಳಿದ್ದ ಪ್ರಶ್ನೆಯನ್ನು ನೆನಪಿಸುತ್ತಾ ಉತ್ತರ ಹೇಳಿದರು. ನನಗೇ ಇದನ್ನು ಯಾಕೆ ಹೇಳಿದರು ಎಂದು ಈಗಲೂ ನನಗೆ ಅಚ್ಚರಿಯಾಗುತ್ತದೆ. ನಮ್ಮ ತಾಯಿ (ಪಾರ್ವತಮ್ಮ), ಅಣ್ಣ (ಶಿವರಾಜ್ ಕುಮಾರ್), ತಮ್ಮ (ಪುನೀತ್) ಅಥವಾ ಬರಗೂರು ರಾಮಚಂದ್ರಪ್ಪ ಇವರೆಲ್ಲಾ ಅವರಿಗೆ ತುಂಬಾ ಆತ್ಮೀಯರಾಗಿದ್ದರು. ಆದರೂ ಅವರ್ಯಾರಿಗೂ ಹೇಳದೆ ನನಗಷ್ಟೇ ಹೇಳಿದರು.”
ಅಪ್ಪಾಜಿ ಹೇಳಿದ್ದಿಷ್ಟು, “ಅವರು ನನ್ನನ್ನು ಸ್ಪರ್ಧಿಸಲು ಕೇಳಿದ್ದರ ಹಿಂದೆ ಪಾಸಿಟೀವ್ ಉದ್ದೇಶ ಇದ್ದಿದ್ದರೆ, ಖಂಡಿತ ಸ್ಪರ್ಧಿಸುತ್ತಿದ್ದೆ. ಆದರೆ ಅವರು ನನ್ನನ್ನೊಂದು ಅಸ್ತ್ರದಂತೆ ಬಳಸಲು ನೋಡಿದರು. ಗೋಕಾಕ್ ಚಳವಳಿಗೆ ಧುಮುಕಲು ಹೇಳಿದಾಗ (1978ರ ಚುನಾವಣೆಯ ಐದು ವರ್ಷಗಳ ಬಳಿಕ) ಹೆಮ್ಮೆಯಿಂದ ಭಾಗಿಯಾಗಿದ್ದೆ. ಆಗ ನನ್ನ ಪಾಲ್ಗೊಳ್ಳುವಿಕೆ ಅಗತ್ಯವಾಗಿ ಬೇಕಾಗಿತ್ತು. ಇದರಲ್ಲಿ ಸಕಾರಾತ್ಮಕ ಉದ್ದೇಶ ಅಡಗಿತ್ತು. ಆದರೆ ಚುನಾವಣೆಗೆ ನಾನು ಬೇಕಾಗಿರಲಿಲ್ಲ. ಬೇರೆ ಯಾರನ್ನೋ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸುವ ಪ್ರಯತ್ನ ಅದು. ನಾನು ಸ್ಪರ್ಧಿಸದಿದ್ದದ್ದೇ ಒಳ್ಳೆಯದಲ್ಲವೇ? ಎಂದು ಕೇಳಿದ್ದರು. ನೀವು ಯಾವೊತ್ತು ತಪ್ಪು ಮಾಡಿದ್ದೀರಿ ಅಪ್ಪಾಜಿ? ಎಂದು ಮರುಪ್ರಶ್ನಿಸಿದ್ದಾಗಿ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

ಆ ದಿನಗಳನ್ನು ನೆನಪಿಸಿಕೊಂಡಿರುವ ರಾಘವೇಂದ್ರ ರಾಜ್‌ ಕುಮಾರ್, ”ಆಗ ನಾವು ಚೆನ್ನೈನಲ್ಲಿ ವಾಸವಾಗಿದ್ದೆವು. ನಮ್ಮನ್ನೆಲ್ಲಾ (ಮಕ್ಕಳು) ಆಂಟಿ ಬಳಿ ಬಿಟ್ಟು, ಅಪ್ಪಾಜಿ ಮತ್ತು ಅಮ್ಮ ಎರಡು ಕಾರುಗಳಲ್ಲಿ ಒಂದು ವಾರಕ್ಕೆ ಬೇಕಾಗುವ ಆಹಾರ ಸಾಮಗ್ರಿ ತುಂಬಿಸಿಕೊಂಡು ತಮಿಳುನಾಡಿನಲ್ಲಿ ಸುತ್ತಾಡುತ್ತಿದ್ದರು. ರಾಜಕಾರಣಿಗಳಿಂದ ತಪ್ಪಿಸಿಕೊಳ್ಳಲು ಅವರು ಆ ರೀತಿ ಮಾಡಬೇಕಾಯಿತು. ಬಹಳಷ್ಟು ರಾಜಕಾರಣಿಗಳು ತಮ್ಮ ಬೆಂಗಾವಲು ಪಡೆಯ ಜತೆಗೆ ಮನೆಗೆ ಬರುತ್ತಿದ್ದರು. ಆದರೆ ಅಪ್ಪಾಜಿ ಮನೆಯಲ್ಲಿರುತ್ತಿರಲಿಲ್ಲ ಎಂದಿದ್ದಾರೆ.
1980ರಲ್ಲಿ ರಾಜ್ ಅವರನ್ನು ರಾಜಕೀಯಕ್ಕೆ ಕರೆತರಲು, ಹೊಸ ರಾಜಕೀಯ ಪಕ್ಷ ಕಟ್ಟಲು ಸಾಕಷ್ಟು ಒತ್ತಡ ಹೇರಲಾಯಿತು. ಆಗ ತಮಿಳುನಾಡು, ಆಂಧ್ರದಲ್ಲಿ ಸಿನಿಮಾ ತಾರೆಗಳು ರಾಜಕೀಯದಲ್ಲಿ ಗೆದ್ದಿದ್ದರು. ಆದರೆ ರಾಜ್ ಮಾತ್ರ ಕೊನೆತನಕ ರಾಜಕೀಯಕ್ಕೆ ಅಡಿಯಿಡಲೇ ಇಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ.
“ಇದಕ್ಕೆ ಹಲವಾರು ಕಾರಣಗಳಿವೆ. ನಾನು ಒಳ್ಳೆಯ ಶಿಕ್ಷಣ ಪಡೆದಿಲ್ಲ ಎಂಬುದು ಒಂದು ಕಾರಣ. ಇನ್ನೊಂದು ಜವಾಬ್ದಾರಿ. ತಾನೊಬ್ಬ ಜನಪ್ರಿಯ ವ್ಯಕ್ತಿ ಎಂಬುದನ್ನೇ ಬಂಡವಾಳವಾಗಿಸಿಕೊಂಡು ಅಭಿಮಾನಿಗಳನ್ನು ದೂರಮಾಡಿಕೊಳ್ಳಲು ಇಷ್ಟವಿರಲಿಲ್ಲ. ಅವರು ಯಾವಾಗಲೂ ಹೇಳುತ್ತಿದ್ದರು. ದೇವರು ನನಗೆ ಕಲೆ ಎಂಬುದನ್ನು ವರವಾಗಿ ನೀಡಿದ್ದಾನೆ. ನನ್ನ ಜೀವನದ ಉದ್ದೇಶ, ಗುರಿ ಇದೊಂದೇ. ಹಾಗಾಗಿ ಅವರು ತಮ್ಮ ಗುರಿ, ಸಾಧನೆಯ ಹಾದಿಯನ್ನು ಬಿಟ್ಟು ಬೇರೊಂದು ಮಾರ್ಗ ಆಯ್ಕೆ ಮಾಡಿಕೊಳ್ಳಲಿಲ್ಲ” ಎನ್ನುತ್ತಾರೆ ರಾಘವೇಂದ್ರ ರಾಜ್ ಕುಮಾರ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here