ರಾಮ ನವಮಿ ಇದು ಮರ್ಯಾದಾ ಪುರುಷೋತ್ತಮ, ಇಕ್ಷ್ವಾಕು ಕುಲ ತಿಲಕನಾದ ಶ್ರೀ ರಾಮಚಂದ್ರನ ಜನ್ಮದಿನ. ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ಸಾಮಾನ್ಯವಾಗಿ ಮಾರ್ಚ್ – ಏಪ್ರಿಲ್ ತಿಂಗಳುಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಚೈತ್ರ ಮಾಸದ ಒಂಭತ್ತನೆಯ ದಿನವೇ ಶ್ರೀ ರಾಮ ನವಮಿ ಎಂದು ಹಿಂದೂ ಕ್ಯಾಲೆಂಡರ್ ತಿಳಿಸುತ್ತದೆ. ಆದ್ದರಿಂದಲೇ ಹಿಂದೂಗಳಿಗೆ ರಾಮನವಮಿ ಒಂದು ಮಹತ್ವಪೂರ್ಣವಾದ ಧಾರ್ಮಿಕ ಹಬ್ಬವಾಗಿದೆ. ಹಬ್ಬವಾಗಿದೆ.

ಶ್ರೀ ರಾಮನು ಶ್ರೀ ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಏಳನೇ ಅವತಾರ. ಮಾನವ ಅವತಾರ. ಶ್ರೀ ರಾಮನನ್ನು ಮನೆದೇವರಾಗಿ ಆರಾಧಿಸುವವರು ಒಂಭತ್ತು ದಿನದ ಹಬ್ಬವನ್ನು ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣವನ್ನು ಭಕ್ತಿ ಶ್ರದ್ಧೆಗಳಿಂದ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಶ್ರೀ ರಾಮ‌ ನವಮಿಯ ಆಚರಣೆ ಬಹಳ ಸರಳ ಹಾಗೂ ಸುಲಭ ಕೂಡಾ ಹೌದು.
ಅದಕ್ಕೆ ಹೇಳುವರು ಎಲ್ಲಿ ಯಾರು ಶ್ರೀ ರಾಮನನ್ನು ಜಪಿಸಿವರೋ ಅಲ್ಲಿ ಆ ಭಕ್ತ ಪರಿಪಾಲಕನಾದ ಶ್ರೀರಾಮನು ಅವರನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ.

ದೇಶದಾದ್ಯಂತ ರಾಮನವಮಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಅದರಲ್ಲೂ ಉತ್ತರ ಭಾರತದ ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಶ್ರೀ ರಾಮನು ಜನಿಸಿದನೆಂಬ ಪ್ರತೀತಿ ಇರುವ ಆಯೋಧ್ಯಾ ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ ರಾಮನವಮಿ ಹಬ್ಬವನ್ನು ಬಹಳ ವೈಭವದಿಂದ ನಡೆಸಲಾಗುತ್ತದೆ.
ತುಳಸೀ ದಾಸರ ರಾಮಚರಿತ ಮಾನಸದಲ್ಲಿ ಹೇಳಿರುವಂತೆ, ಭಜನೆ, ಕೀರ್ತನೆಗಳು ಮತ್ತು ಮೆರವಣಿಗೆ ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ.

ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಮುಂಜಾನೆಯೇ ಹಬ್ಬ ಪ್ರಾರಂಭಗೊಳ್ಳುತ್ತದೆ. ಏಕೆಂದರೆ ರಾಮನು ಸೂರ್ಯವಂಶಸ್ಥ. ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ರಾಮನವಮಿಯಂದು ಮುಖ್ಯವಾಗಿರುತ್ತದೆ. ಶ್ರೀ ರಾಮ ಚಂದ್ರನ ಸ್ತೋತ್ರಗಳನ್ನು ಹೇಳುವುದು ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸಲಾಗುತ್ತದೆ. ಅಲ್ಲದೆ ರಾಮ, ಸೀತಾ, ಲಕ್ಷ್ಮಣ ಹಾಗೂ ಹನಮನ ಮೂರ್ತಿಗಳನ್ನು ಮೆರವಣಿಗೆ ಕೂಡಾ ಮಾಡಲಾಗುತ್ತದೆ.

ರಾಮನವಮಿಯಂದು ದಕ್ಷಿಣದಲ್ಲಿ ವಿಶೇಷವಾಗಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಶ್ರೀ ರಾಮನವಮಿಗೆ ಅದರದೇ ಆದ ಮಹತ್ವ ಹಾಗೂ ಪ್ರಾಮುಖ್ಯತೆ ಇದೆ. ನಮ್ಮಲ್ಲಿ ರಾಮನವಮಿಯಂದು ಜಾತಿ, ಧರ್ಮದ ಕಟ್ಟಳೆಗಳನ್ನು ಮೀರಿ ಎಲ್ಲರಿಗೂ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕವನ್ನು ಹಂಚುವ ಮೂಲಕ ಸೌಹಾರ್ದ ವನ್ನು ಮೆರೆಯಲಾಗುತ್ತದೆ. ಶ್ರೀರಾಮನು ಮೆರೆದ ಧ್ಯೇಯಗಳನ್ನು , ಆತನ ಗುಣಗಳನ್ನು ಎಲ್ಲೆಡೆ ಆಚರಣೆಗೆ ತಂದರೆ ನಾಡು ರಾಮ ರಾಜ್ಯವಾಗುವುದರಲ್ಲಿ ಸಂದೇಹವಿಲ್ಲ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here