ಕಾಂಗ್ರೆಸ್​ ಅಥವಾ ಜೆಡಿಎಸ್​ನ ಯಾವುದೇ ಶಾಸಕರು ನನ್ನ ಭೇಟಿಗೆ ಸಮಯ ಕೇಳಿರಲಿಲ್ಲ. ಅವರು ವಿಧಾನಸೌಧಕ್ಕೆ ಬರುವ ವಿಷಯ ನನಗೆ ಗೊತ್ತೇ ಇರಲಿಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದ್ದಾರೆ.ತಮ್ಮ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರಮೇಶ್​ ಕುಮಾರ್​ ಒಟ್ಟು 11 ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರಿಂದ ರಾಜೀನಾಮೆ ಪಡೆದು ಸ್ವೀಕೃತಿ ಪತ್ರ ನೀಡುವಂತೆ ಆಪ್ತ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಶಾಸಕರು ನನಗೆ ರಾಜೀನಾಮೆ ಪತ್ರ ನೀಡಿ, ಯಾವ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.

ಸಂಬಂಧಿಕರೊಬ್ಬರಿಗೆ ಹುಷಾರಿಲ್ಲದ ಕಾರಣ ನಾನು ಜಯದೇವ ಆಸ್ಪತ್ರೆಗೆ ತೆರಳಿದ್ದೆ. ಈಗ ಮನೆಗೆ ಆಗಮಿಸಿದ್ದೇನೆ. ನನಗೂ ಪಕ್ಷಕ್ಕೂ ಸಂಬಂಧವಿಲ್ಲ. ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸೋಮವಾರ ಪೂರ್ವನಿಗದಿತ ಕಾರ್ಯಕ್ರಮವಿದೆ. ಹಾಗಾಗಿ ಮಂಗಳವಾರ ರಾಜೀನಾಮೆ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ನನಗೆ ಮುಖ್ಯಮಂತ್ರಿಯಾಗಲಿ, ವಿರೋಧ ಪಕ್ಷದ ನಾಯಕರಾಗಲಿ ಯಾರು ದೊಡ್ಡವರಲ್ಲ. ನನ್ನನ್ನು ವಿಧಾನಸಭೆಯ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸಂವಿಧಾನಬದ್ದವಾಗಿ ಸ್ಪೀಕರ್ ಸ್ಥಾನಕ್ಕೆ ಎಲ್ಲಿಯೂ ಕಳಂಕ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನನಗೆ ಯಾರ ಒತ್ತಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.ರಾಜೀನಾಮೆ ಎಂಬುದು ಹುಡುಗಾಟಿಕೆ ಪ್ರಶ್ನೆ ಅಲ್ಲ. ಎರಡರಿಂದ 3 ಲಕ್ಷ ಮತದಾರರು ನಮ್ಮನ್ನು ಆಯ್ಕೆ ಮಾಡುತ್ತಾರೆ. ಅವರ ಅಭಿಪ್ರಾಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಜನಪ್ರತಿನಿಧಿಗಳ ಕರ್ತವ್ಯ. ಪ್ರಸ್ತುತ ಬೆಳವಣಿಗೆಗಳ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಯಾರೊಬ್ಬರು ನನ್ನ ಬಳಿ ಮಾತನಾಡಿಲ್ಲ. ನನಗೆ ಎಲ್ಲರ ಬಗ್ಗೆಯೂ ಗೌರವವಿದೆ ಎಂದು ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here