ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ, ದಕ್ಷ ಪೋಲಿಸ್ ಅಧಿಕಾರಿ, ಕರ್ನಾಟಕದ ಯುವಕರಿಗೆ ಸ್ಪೂರ್ತಿಯ ಸೆಲೆ, ಜೀವನದಿ ಸಾಮಾನ್ಯನೊಬ್ಬ ಅಸಾಮಾನ್ಯವಾದುದನ್ನು ಸಾಧಿಸಬಹುದೆಂಬ ಆದರ್ಶಕ್ಕೆ ಜೀವಂತ ಉದಾಹರಣೆ, ನ್ಯಾಯ, ನೀತಿಯ ಹಾಗೂ ಕಾನೂನಿನ ಸಂರಕ್ಷಣೆ ಎಂದಾಗ ಇವರತ್ತ ಜನ ನೋಡುವಂತೆ ಮಾಡುವ ಗಾಂಭೀರ್ಯವನ್ನು ಹೊಂದಿರುವ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್‌. ಇಂದು ಅವರ ಜನುಮ ದಿನ. ಇಂತಹ ದಕ್ಷ ಅಧಿಕಾರಿಯನ್ನು ಇಂದು ನಮ್ಮ ಬರವಣಿಗೆಯ ಮೂಲಕ ಹಾರೈಸುವ ಸಣ್ಣ ಪ್ರಯತ್ನ ನಮ್ಮದಾಗಿದೆ.

ಬಡ ಕುಟುಂಬವೊಂದರಲ್ಲಿ ಜನಿಸಿ, ತನ್ನ ಆಸೆ ಹಾಗೂ ಆಶಯಗಳನ್ನು ಪೂರೈಸಿಕೊಳ್ಳಲು ಕೂಲಿ ಕೆಲಸ ಮಾಡಿಕೊಂಡೇ , ವಿದ್ಯಾಭ್ಯಾಸ ಮಾಡಿದ ರವಿ.ಡಿ.ಚೆನ್ನಣ್ಣನವರ್‌ ಅವರ ಸಾಧನೆಯ ಹಾದಿ ಯಾವುದೇ ರೋಚಕ ಕತೆಗಳಿಗಿಂತ ಕಡಿಮೆಯೇನಿಲ್ಲ. ಕೂಲಿ ಕೆಲಸ ಮಾಡಿಕೊಂಡು ಐ.ಎ.ಎಸ್, ಐ.ಪಿ.ಎಸ್. ಗಳಾಗುವ ಕತೆಗಳೇನೇಕ ಚಲನ ಚಿತ್ರಗಳ ಕತೆಗಳಾಗಿವೆ‌. ಆದರೆ ರವಿ.ಡಿ.ಚೆನ್ನಣ್ಣನವರ ನಿಜ ಜೀವನವೇ ಆ ಕತೆಗಳ ಸಾರವೆಂದರೆ ತಪ್ಪಾಗದು. ಏಕೆಂದರೆ ಕೂಲಿ ಮಾಡಿ ಐ.ಪಿ.ಎಸ್.ಆದಂತಹವರು ರವಿ‌‌.ಡಿ.ಚೆನ್ನಣ್ಣನವರ್‌. ಆದರೆ ಅವರ ಈ ಸಾಧನೆಯ ಹಾದಿಯಲ್ಲಿನ ರೋಚಕ ಪಯಣದ ಬಗ್ಗೆ ಹಲವರಿಗೆ ತಿಳಿದೇ ಇಲ್ಲ.

೨೩ ಜುಲೈ ೧೯೮೫ ರಲ್ಲಿ ಗದಗ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಜನಿಸಿದ ಇವರ ತಂದೆ ದ್ಯಾಮಪ್ಪ ಚೆನ್ನಣ್ಣನವರ್‌ ಹಾಗೂ ತಾಯಿ ರತ್ನಮ್ಮ. ಮೂಲತಃ ಬಡ ಕುಟುಂಬದವರಾದರೂ, ಬಡತನ ಇವರ ಹಾದಿಯ ಮುಳ್ಳಾಗಲಿಲ್ಲ. ಬದಲಾಗಿ ಆ ಬಡತನ ಇವರಲ್ಲಿ ಜೀವನವನ್ನು ಧೈರ್ಯವಾಗಿ ಎದುರಿಸುವ, ಯಶಸ್ಸಿನ ಹಾದಿಯಲ್ಲಿ ನಡೆಯಲು ಪ್ರೇರಣೆಯನ್ನು ನೀಡಿತು. ಸರ್ಕಾರಿ ಶಾಲೆಯಲ್ಲಿ ಆರಂಭದ ಶಿಕ್ಷಣವನ್ನು ಆರಂಭಿಸಿದರು. ಶಿಕ್ಷಣದ ವೆಚ್ಚವನ್ನು ಭರಿಸುವುದಕ್ಕಾಗಿ ಹೋಟೆಲ್‌ಗಳಲ್ಲಿ ಕೆಲಸವನ್ನು ಮಾಡಿದವರು ರವಿ.ಡಿ.ಚೆನ್ನಣ್ಣನವರ್‌. ಈ ಬಗ್ಗೆ ಚೆನ್ನಣ್ಣನವರ್‌ ದೇಶಕ್ಕೆ ಪ್ರಧಾನಿ ಎಷ್ಟು ಮುಖ್ಯವೋ, ಕಸ ಗುಡಿಸುವವನು ಅಷ್ಟೇ ಮುಖ್ಯ. ಆದ್ದರಿಂದ ನಾನು ಯಾವುದೇ ಕೆಲಸ ಮಾಡಲು ಹಿಂಜರಿಯಲಿಲ್ಲ. ಏಕೆಂದರೆ ಕಾಯಕವೇ ಕೈಲಾಸ ಎಂದು ನಂಬಿದ್ದೇನೆ‌. ನಾನು ಬಾರ್ ಗಳಲ್ಲಿ ಕೆಲಸ ಮಾಡಿದ್ದೇನೆ ಆದರೆ ಎಂದಿಗೂ ಕುಡಿಯಲಿಲ್ಲ.‌ನನಗೆ ಕೆಲಸ ಅಷ್ಠೇ ಮುಖ್ಯವಾಗಿತ್ತು ಎಂಬ ಅವರ ಮಾತುಗಳು ಅವರ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ.

ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಮಾಡುವಾಗ, ತಮ್ಮ ವೆಚ್ಚ ಭರಿಸಲು ರವಿಯವರು ಅರೆಕಾಲಿಕ ಅಂದರೆ ಪಾರ್ಟ್ ಟೈಂ ಕೆಲಸಗಳನ್ನು ಮಾಡಿಕೊಂಡು ಓದುತ್ತಿದ್ದರು. ಧಾರವಾಡದಲ್ಲಿ ಪದವಿ ಮಾಡುವಾಗ ಕಾಲೇಜಿನ ನಂತರ ಸಂಜೆ ೬ ರಿಂದ ಮಧ್ಯರಾತ್ರಿ ೧೨ ರ ವರೆಗೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸಲು ಹೈದರಾಬಾದ್ ಗೆ ಹೋದ ಇವರು ಪರೀಕ್ಷೆ ಪಾಸಾಗುವವರೆಗೂ ಯಾವುದೇ ಸಿನಿಮಾ ನೋಡುವುದಿಲ್ಲ, ಯಾವುದೇ ಪಾರ್ಟಿಗಳಲ್ಲಿ ಭಾಗವಹಿಸುವುದಿಲ್ಲ ಎಂದು ತಮಗೆ ತಾವೇ ಪ್ರತಿಜ್ಞೆ ಮಾಡಿಕೊಂಡಿದ್ದರಂತೆ. ಗುರಿಯತ್ತ ತಲುಪುವ ದೃಢ ನಿರ್ಧಾರ ಅವರದಾಗಿತ್ತು. ಪ್ರತಿಯೊಂದು ಟೆಸ್ಟ್ ಗೂ ಹಾಜರಾಗುತ್ತಿದ್ದ ಅವರು, ಹೆಚ್ಚು ಅಂಕ ಪಡೆದವರ ಉತ್ತರ ಪತ್ರಿಕೆಗಳನ್ನು ಓದಿತ್ತಿದ್ದರಂತೆ. ಅವರ ಈ ಪ್ರಯತ್ನಗಳು ಅವರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ನೆರವಾಯಿತು.

೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷರಾಗಿ ವೃತ್ತಿಜೀವನವನ್ನು ಆರಂಭಿಸಿದ ರವಿ ಯವರು ಧಾರವಾಡ, ಹೊಸಪೇಟೆ,ಹಾಸನ, ದಾವಣಗೆರೆ, ಶಿವಮೊಗ್ಗ, ಮೈಸೂರಿನಲ್ಲಿ ಸೇವೆ ಸಲ್ಲಿಸಿದ ಇವರು ಸದ್ಯಕ್ಕೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೋಲಿಸ್ ಎಂದರೆ ಓಡಿಹೋಗುವ ಜನರು ರವಿ.ಡಿ.ಚೆನ್ನಣ್ಣನವರ್‌ ಅವರ ಹೆಸರನ್ನು ಕೇಳಿದರೆ ಬಹಳ ಪ್ರೀತಿ ಹಾಗೂ ಆತ್ಮೀಯತೆಯನ್ನು ಪ್ರದರ್ಶಿಸುತ್ತಾರೆ. ಕೇವಲ‌ ಪೋಲಿಸ್ ಮಾತ್ರವಾಗಿರದೆ, ಮಕ್ಕಳಿಗೆ ಹಾಗೂ ಯುವಕರಿಗೆ ತಮ್ಮ ಜೀವನದ ಸಂಘರ್ಷಗಳ ಬಗ್ಗೆ ಹೇಳುತ್ತಾ ಸ್ಪೂರ್ತಿ ತುಂಬಿಸುವ ಕೆಲಸವನ್ನು ಕೂಡಾ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇವರ ಕಾರ್ಯವೈಖರಿ ಹಾಗೂ ನಡೆ ನುಡಿಯ ಬಗ್ಗೆ ಹೆಚ್ಚು ಹೊಗಳಿಕೆಗೆ ಪಾತ್ರವಾಗಿದೆ.

ಇನ್ನು ಇವರ ಸಾಧನೆಗಳಂತೂ ಅನೇಕ. ಶಿವಮೊಗ್ಗದಲ್ಲಿ ಇವರು ಕಾರ್ಯನಿರ್ವಹಿಸುವಾಗ ಅಲ್ಲಿ ನಡೆದ ಹಿಂಸಾಚಾರವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು. ಮಹಿಳೆಯರ ರಕ್ಷಣೆಗಾಗಿ ಒನಕೆ ಓಬವ್ವ ಎಂಬ ಪ್ರತ್ಯೇಕ ಪಡೆಯನ್ನು ಆಯೋಜಿಸಿದ ಗೌರವ ಇವರಿಗೆ ಸೇರುತ್ತದೆ. ಪ್ರಥಮ‌ ಬಾರಿಗೆ ಪೋಲಿಸ್ ಸಿಬ್ಬಂದಿಗೋಸ್ಕರ ಪೋಲಿಸ್ ಕ್ಯಾಂಟೀನ್, ಪೋಲಿಸ್ ವೈದ್ಯಕೀಯ ಸೇವೆಗಳನ್ನು ಆರಂಭಿಸಿದ ಅಧಿಕಾರಿಯೂ ಇವರೇ. ಜನರಿಗೆ ಸುರಕ್ಷತೆಯ ತರಬೇತಿ ನೀಡಲು ಗ್ರಾಮ ವಾಸ್ತವ್ಯವನ್ನು ಹೂಡಿದ್ದರೆಂಬುದು ಅವರ ಆತ್ಮ ಸಮರ್ಪಣೆಯನ್ನು ತೋರಿಸುತ್ತದೆ. ನಮ್ಮೂರಲ್ಲೊಬ್ಬ ಸಾಧಕ ಎಂಬ ಯೋಜನೆಯನ್ನು ಕೇವಲ ರೈತರ ಸಹಾಯಕ್ಕಾಗಿಯೇ ಆರಂಭಿಸಿದ್ದು ರೈತರ ಪರ ಇವರ ಒಲವಿಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಸಹಾಯಕ್ಕಾಗಿ ಉಚಿತವಾಗಿ ಯುಪಿಎಸ್ಸಿ ತರಬೇತಿ ತರಗತಿಗಳನ್ನು ಕೂಡಾ ಆರಂಭಿಸಿದ್ದಾರೆ.

ಹೇಳುತ್ತಾ ಹೋದರೆ ರವಿ.ಡಿ.ಚೆನ್ನಣ್ಣನವರ್‌ ಅವರ ಬಗ್ಗೆ ಪದಗಳು, ಪುಸ್ತಕಗಳು ಸಾಲವು. ಏಕೆಂದರೆ ಅವರ ಜೀವನ ಒಂದು ಯಶೋಗಾಥೆ‌. ಅದು ಯಾವುದೇ ಕತೆಯಾಗಲೀ, ಊಹೆಯಾಗಲೀ ಅಥವಾ ಕಲ್ಪನೆಯಾಗಲೀ ಅಲ್ಲ‌. ಇದೊಂದು ವಾಸ್ತವ. ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯವಾದ ಸಾಧನೆಯ ಹಾದಿ. ಯಶಸ್ಸಿನ ಶಿಖರವನ್ನು, ಎಲ್ಲಾ ಅಡೆ ತಡೆಗಳನ್ನು ಮೀರಿ ಏರಿದ ಧೀರ ರವಿ. ಅವರ ಜೀವನ ಇಂದಿನ ಯುವಜನತೆಗೆ ಆದರ್ಶ. ಸಿನಿಮಾ ತಾರೆಯರು ತೆರಯ ಮೇಲೆ ಮಾಡುವ ನಕಲಿ ಸಾಧನೆಗಳನ್ನೆ ಮೆಚ್ಚಿ ಅವರನ್ನು ಆರಾಧಿಸುವ ಯುವ ಸಮೂಹ, ರವಿ‌.ಡಿ.ಚೆನ್ನಣ್ಣನವರ್‌ ಅಂತಹ ರಿಯಲ್ ಲೈಫ್ ಹೀರೋವನ್ನು ಆರಾಧಿಸುವ, ಅವರನ್ನು ಅನುಸರಿಸುವ ಪ್ರಯತ್ನ ಮಾಡಿದರೆ ನಿಜವಾಗಿಯೂ ಅದಕ್ಕೊಂದು ಅರ್ಥ ಹಾಗೂ ಸಾರ್ಥಕತೆ ಮೂಡುತ್ತದೆ.

ಇ.ಸೋಮಶೇಖರ್

Photos Credit :- Ravi D Channannanavar Fans Club

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here