ಬಾಹುಬಲಿ 1 ಮತ್ತು ಬಾಹುಬಲಿ 2 ಸೃಷ್ಟಿಸಿದ ಇತಿಹಾಸ ಭಾರತೀಯ ಚಿತ್ರರಂಗ ಎಂದಿಗೂ ಮರೆಯುವಂತದ್ದಲ್ಲ. ದಕ್ಷಿಣ ಭಾರತದ ಒಂದು ಪ್ರಾದೇಶಿಕ ಸಿನಿಮಾ ವಿಶ್ವ ಚಿತ್ರ ಜಗತ್ತಿನ ಗಮನ ಸೆಳೆದಿದ್ದು, ಭಾರತೀಯ ಚಿತ್ರಗಳು ಕೂಡಾ ಹಾಲಿವುಡ್ ಸಿನಿಮಾಗಳಿಗೆ ಸವಾಲೊಡ್ಡಲು ಸಾಧ್ಯವಿದೆ ಎಂದು ತೋರಿಸಿದ ಚಿತ್ರ ಬಾಹುಬಲಿ. ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕ ರಾಜಮೌಳಿ ಈ ಸಿನಿಮಾದ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿಸಿದವರು. ಈಗ ರಾಜಮೌಳಿ ಹಾಗೂ ಟಾಲಿವುಡ್ ಮತ್ತೊಂದು ದಾಖಲೆ ನಿರ್ಮಿಸುವತ್ತ ಸಾಗುತ್ತಿರುವಂತೆ ಕಂಡು ಬರುತ್ತಿದೆ‌.

ರಾಜಮೌಳಿ ಅವರ ನಿರ್ದೇಶನದಲ್ಲಿ ಬಾಹುಬಲಿ ನಂತರ ಆರಂಭವಾದ ಸಿನಿಮಾ RRR. ಟಾಲಿವುಡ್ ನ ಟಾಪ್ ಹೀರೋಗಳಾದ ರಾಮ್ ಚರಣ್ ತೇಜ ಮತ್ತು ಜೂ.ಎನ್ಟಿಆರ್ ಅಭಿನಯದ ಮಲ್ಟಿ ಸ್ಟಾರರ್ ಸಿನಿಮಾ ಹೊಸ ದಾಖಲೆ ನಿರ್ಮಾಣಕ್ಕೆ ಸಜ್ಜಾಗುತ್ತಿದೆ. ಈ ಇಬ್ಬರು ಕೂಡಾ ಟಾಲಿವುಡ್ ನ ಸ್ಟಾರ್ ಕುಟುಂಬದವರು , ಇಬ್ಬರು ನಟರಿಗೂ ಅಪಾರ ಅಭಿಮಾನಿ ಬಳಗವಿದ್ದು ಈಗ ಸಿನಿಮಾಗಾಗಿ ಎಲ್ಲಾ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜಾ ಅವರ ಜೋಡಿಯಾಗಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಇದ್ದರೆ, ಎನ್ಟಿಆರ್ ಅವರಿಗೆ ಬ್ರಿಟನ್ ನ ನಟಿ ಒಲಿವಿಯಾ ಅವರು ಜೋಡಿಯಾಗಿದ್ದಾರೆ ಎಂದು ತಿಳಿಸಲಾಗಿತ್ತು.

ಈ ಸಿನಿಮಾದಲ್ಲಿ ಖಳನಟರಾಗಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಹಾಲಿವುಡ್ ನಟ ರೇ ಸ್ಟೀವನ್ಸನ್ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾ ಏಕಕಾಲಕ್ಕೆ ಇಂಗ್ಲೀಷ್ ಸೇರಿ ಹತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎನ್ನಲಾಗಿದೆ. ಈ ಮೂಲಕ ರಾಜಮೌಳಿ ಮತ್ತೊಮ್ಮೆ ವಿಶ್ವ ಸಿನಿಮಾ ಜಗತ್ತೇ ಭಾರತದತ್ತ ನೋಡುವಂತೆ ಮಾಡಲು ಸಜ್ಜಾಗುತ್ತಿದ್ದಾರೆ. ಈ ಸಿನಿಮಾ ಮುಂಬರುವ ಜುಲೈ 30, 2020 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಒಟ್ಟಾರೆ ದಕ್ಷಿಣದ ಮತ್ತೊಂದು ಚಿತ್ರ ಮತ್ತೊಮ್ಮೆ ದಾಖಲೆಗಳನ್ನು ಬರೆಯಲು ಸಜ್ಜಾಗುತ್ತಿದೆ ಎಂಬುದು ಮಾತ್ರ ಸ್ಪಷ್ಟ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here