ರೂಪ್ ಕುಂಡ

ಭಾರತದ ಉತ್ತರಾಖಂಡದ ಬೆಟ್ಟಸಾಲುಗಳ ನಡುವೆ ಇದೆ ಒಂದು‌ ಸುಂದರವಾದ ಸರೋವರ. ಪ್ರತಿ ಚಳಿಗಾಲದಲ್ಲೂ ಈ ಸರೋವರದ ನೀರು, ಮಂಜುಗಡ್ಡೆಯ ರೂಪ ಪಡೆದು , ಇಡೀ ಸರೋವರ ಘನೀಕರಿಸುತ್ತದೆ. ಬೇಸಿಗೆಯಲ್ಲಿ ಮಂಜು ಕರಗಿ ಸರೋವರವು ಮತ್ತೆ ತನ್ನ ಅಂದವನ್ನು ಮರಳಿ ಪಡೆಯುತ್ತದೆ. ಬಹು ಸುಂದರವಾದ ಈ ಸರೋವರವು ರೂಪ್ ಕುಂಡ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಹಿಮಾಲಯ ಪರ್ವತಗಳ ಸಾಲಿನಲ್ಲಿ ತೀವ್ರ ಚಳಿಗೆ ನದಿ, ಸರೋವರಗಳ ನೀರು , ಘನೀಕರಿಸುವುದು ಸಹಜ.

ಆದರೆ ವಿಷಯ ಅದಲ್ಲ. ರೂಪ್ ಕುಂಡ ತನ್ನಲ್ಲಿ ಒಂದು ಉತ್ತರವಿಲ್ಲದ‌ ರಹಸ್ಯವೊಂದನ್ನು ಅಡಗಿಸಿಕೊಂಡಿದೆ.1942 ರಲ್ಲಿ ಬ್ರಿಟಿಷ್ ಅರಣ್ಯ ಪಾಲಕನೊಬ್ಬ ಬೇಸಿಗೆಯ ಸಮಯದಲ್ಲಿ ಅಸಾಧಾರಣವಾದ, ನಂಬಲು ಅಸಾಧ್ಯವಾದ, ಭಯಾನಕ ದೃಶ್ಯವನ್ನು ಈ ಸರೋವರದಲ್ಲಿ ಕಂಡ. ಬೇಸಿಗೆಯಾದ್ದರಿಂದ ಹಿಮಕರಗಿ, ಶುದ್ಧ ನೀರಿನಿಂದ ಕಂಗೊಳಿಸುತ್ತಿದ್ದ ಸರೋವರದ ಬಳಿಗೆ ಹೋದವನಿಗೆ ಆ ಸರೋವರದ ನೀರಿನಲ್ಲಿ ಕಂಡದ್ದು ‌ಅಸ್ಥಿ ಪಂಜರಗಳು ಹಾಗೂ ಮೂಳೆಗಳ ರಾಶಿ.

ಒಮ್ಮೆಲೆ ಆತ ದಿಗ್ಭ್ರಾಂತನಾಗಿಹೋದ. ಅಲ್ಲಿಂದ‌ ಈ ಸರೋವರದ ಇನ್ನೊಂದು ರೂಪ ಜನರ‌‌ ಮುಂದೆ ಬಂದಿತು. ಹಾಗೂ ಕುತೂಹಲ ಕೇಂದ್ರವಾಯಿತು. ಅಂದಿನಿಂದ ಈ‌ ಸರೋವರವನ್ನು ಅಸ್ಥಿಪಂಜರದ ಸರೋವರವೆಂದೂ ಕರೆಯಲಾರಂಭಿಸಿದರು.ಹೀಗೆ ಇದ್ದಕ್ಕಿದ್ದಂತೆ ಪ್ರಸಿದ್ಧಿ ಪಡೆದ ಈ ಸರೋವರ ಬಗ್ಗೆ ಎಲ್ಲರಲ್ಲೂ ಕುತೂಹಲ ಕೆರಳಿಸಿತು.

ಎಲ್ಲರಲ್ಲೂ ಹುಟ್ಟಿಕೊಂಡ ಪ್ರಶ್ನೆ ಒಂದೇ, ಅದು ಆ ಅಸ್ಥಿ ಪಂಜರಗಳು ಅಲ್ಲಿಗೆ ಬಂದದ್ದಾದರೂ ಎಲ್ಲಿಂದ‌ ಹಾಗೂ ಹೇಗೆ ಎಂಬುದು. ಇದರ ಬಗ್ಗೆ ಮೊದಲ ಹಂತದ ಸಮೀಕ್ಷೆ ಹಾಗೂ ಅಧ್ಯಯನದ‌ ನಂತರ ತಜ್ಞರು, “ಈ ಅಸ್ಥಿ ಪಂಜರ ಹಾಗೂ ಮೂಳೆಗಳು ಜಪಾನಿನ ಸೈನಿಕರದೆಂದೂ, ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಜಪಾನ್ ಸೈನಿಕರು ಭಾರತವನ್ನು ಈ ಮಾರ್ಗದ ಮೂಲಕ‌‌ ಪ್ರವೇಶಿಸಲು ಪ್ರಯತ್ನ ನಡೆಸುವ ಸಂದರ್ಭದಲ್ಲಿ ಆದ ಹಿಮಪಾತಕ್ಕೆ ಸಿಲುಕಿ ಮರಣ ಹೊಂದಿದರು” ಎಂದು ಘೋಷಿಸಿತು.

ಈ ಉತ್ತರವನ್ನು ಜನ ನಂಬಲು ಸಾಧ್ಯವಿಲ್ಲ ಎನಿಸಿದರೂ , ಬೇರಾವ ಪುರಾವೆಗಳಿಲ್ಲದ ಕಾರಣ ಒಪ್ಪಲೇ ಬೇಕಾಯಿತು. ಆದರೆ ವಿಷಯ ಅಲ್ಲಿಗೆ ಮುಗಿಯಲಿಲ್ಲ. ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯು ಮೊದಲು ನೀಡಲಾದ ತಜ್ಞರ ವರದಿಯನ್ನು ತಪ್ಪೆಂದು ಹೇಳುತ್ತಾ , ಆ ಅಸ್ಥಿಪಂಜರಗಳು ಹಾಗೂ ಮೂಳೆಗಳು ಎರಡನೇ ಮಹಾಯುದ್ಧದ ಕಾಲದ್ದಲ್ಲ, ಅದಕ್ಕಿಂತ ಬಹಳಷ್ಟು ಶತಮಾನಗಳಷ್ಟು ಹಳೆಯದು ಎಂದು ವಾಸ್ತವಾಂಶವನ್ನು ತೆರೆದಿಟ್ಟಿತು.

ಅಲ್ಲದೆ ಎರಡನೇ ಸಮೀಕ್ಷೆಯ ಪ್ರಕಾರ ಅಲ್ಲಿ ದೊರತ ಅಸ್ಥಿಪಂಜರಗಳು ಹಾಗೂ ಮೂಳೆಗಳು ಎರಡು ವಿಭಿನ್ನ ಪಂಗಡಗಳಿಗೆ ಸಂಬಂಧಿಸಿದ್ದರಿಂದ ಹಾಗೂ ಪುರಾತನವಾದುದೆಂದು ಸಾಬೀತಾದ್ದರಿಂದ ಅದು ಜಪಾನ್ ಯೋಧರದ್ದಲ್ಲ ಎಂಬದು ಖಚಿತವಾಯಿತು. ಹಾಗಾದರೆ ಅವು ಯಾರದ್ದೆಂಬ ಚರ್ಚೆಗೆ ಮತ್ತೊಮ್ಮೆ ಜೀವ ಬಂದಿತು.

ನಂತರ ನಡೆದ ಸಂಶೋಧನೆಗಳಿಂದ‌ ಅವು ಜಸಧಾವಲನೆಂಬ ಅರಸ ಸಂತಾನ‌‌ ಪ್ರಾಪ್ತಿಯನ್ನು ಬಯಸಿ , ತನ್ನ ರಾಜ ಪರಿವಾರ ಹಾಗೂ ಪರಿಜನರೊಂದಿಗೆ ನಂದಾದೇವಿ ಯಾತ್ರೆಯನ್ನು ಈ ಮಾರ್ಗವಾಗಿ ಕೈಗೊಂಡ.ಆಗ ಉಂಟಾದ ಹಿಮಪಾತದಿಂದ ಎಲ್ಲರೂ ಮೃತ್ಯು ವಶರಾದರು ಎಂದು. ಈ ವಾದವನ್ನು ಒಪ್ಪದ ಕೆಲವರು 9ನೇ ಶತಮಾನದಲ್ಲಿ

ಇಲ್ಲಿ ಸಂಭವಿಸಿದ ಹಿಮಪಾತದಿಂದ , ಯಾತ್ರೆ ಮಾಡುತ್ತಿದ್ದ ಭಕ್ತ ಸಮೂಹ ಮೃತರಾದರೆಂದು ಅವರದೇ ಅಲ್ಲಿನ ಅಸ್ಥಿಪಂಜರಗಳು ಹಾಗೂ ಮೂಳೆಗಳೆಂದು ವಾದವನ್ನು ಮುಂದಿಟ್ಟರು.ಒಟ್ಟಾರೆ ಸತ್ಯಾಸತ್ಯತೆಗಳೇನೇ ಆದರೂ ರೂಪ ಕುಂಡದ ಅಸ್ಥಿಪಂಜರಗಳು ಹಾಗೂ ಅಲ್ಲಿನ ಮೂಳೆಗಳ

ರಾಶಿಯು ಎಲ್ಲರಲ್ಲೂ ಪ್ರಶ್ನೆಗಳನ್ನು ಮೂಡಿಸಿ , ಒಂದು ರಹಸ್ಯವಾಗಿಯೇ ಉಳಿದಿದೆ. ಪರ್ವತಾ ರೋಹಿಗಳಿಗೆ ಇದು ಆಕರ್ಷಣೆಯ ಕೇಂದ್ರವಾಗಿ ಎಲ್ಲರನ್ನೂ ಒಮ್ಮೆ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಇ.ಸೋಮಶೇಖರ್, ಆಂಗ್ಲ ಉಪನ್ಯಾಸಕ,ವಿಷನ್ ಅಕಾಡೆಮಿ ,ಪ್ರಗತಿ ಪಿಯು ಕಾಲೇಜು ಚಿಂತಾಮಣಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here