ಸಾಹಸ ನಿರ್ದೇಶಕ ರವಿವರ್ಮ ಇದೇ ಮೊದಲ ಬಾರಿಗೆ ನಿರ್ದೇಶನದ ಜವಬ್ದಾರಿ ಹೊರಲು ಸಜ್ಜಾಗಿದ್ದಾರೆ. ಮೊದಲ ಸಿನಿಮಾದಲ್ಲೆ ಡಾ.ಶಿವರಾಜ್​ಕುಮಾರ್ ಜತೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಏಪ್ರಿಲ್ 24ರ ಡಾ. ರಾಜ್​ಕುಮಾರ್ ಜನ್ಮದಿನದಂದು ಆ ಚಿತ್ರ ಮುಹೂರ್ತ ಮುಗಿಸಿಕೊಳ್ಳಲಿದೆ. ಇದೀಗ ಆ ಗ್ಯಾಪ್​ನಲ್ಲಿಯೇ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡಿದ್ದಾರಂತೆ ನಿರ್ದೇಶಕರು.

ಬಹುಭಾಷೆಯಲ್ಲಿ ಗುರುತಿಸಿಕೊಳ್ಳುತ್ತಿರುವ ಕನ್ನಡತಿ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದಾರೆ ಎನ್ನುತ್ತಿವೆ ಮೂಲಗಳು. ‘ಯೂ-ಟರ್ನ್’ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದ ಶ್ರದ್ಧಾ, ಆ ಬಳಿಕ ‘ಆಪರೇಷನ್ ಅಲಮೇಲಮ್ಮ’ ಚಿತ್ರದಲ್ಲಿ ನಟಿಸಿದರು. ತಮಿಳು ಚಿತ್ರರಂಗಕ್ಕೂ ಪರಿಚಿತಗೊಂಡರು.

ಸದ್ಯ ಕನ್ನಡದಲ್ಲಿ ‘ನೀನಾಸಂ’ ಸತೀಶ್ ನಾಯಕನಾಗಿ ನಟಿಸುತ್ತಿರುವ ‘ಗೋದ್ರಾ’ ಚಿತ್ರದಲ್ಲೂ ನಟಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಶ್ರದ್ಧಾಗೆ ‘ರುಸ್ತುಂ’ ಸಿನಿಮಾ ಕಥೆ ಇಷ್ಟವಾಗಿದ್ದು, ನಟಿಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಶ್ರದ್ಧಾಗಿದು ಕನ್ನಡದಲ್ಲಿ ದೊಡ್ಡ ಪ್ರಾಜೆಕ್ಟ್. ಅಲ್ಲದೆ, ಭಿನ್ನ ಶೈಲಿಯ ಚಿತ್ರಗಳಲ್ಲಿ ನಟಿಸಿದ ಅವರಿಗೆ ‘ರುಸ್ತುಂ’ ಮೊದಲ ಕಮರ್ಷಿಯಲ್ ಸಿನಿಮಾ. ಆ ಒಂದು ಕಾರಣಕ್ಕೆ ಅವರ ಪಾತ್ರದ ಬಗ್ಗೆಯೂ ಸಹಜವಾಗಿ ಕುತೂಹಲ ವ್ಯಕ್ತವಾಗಿದೆ.

ಆದರೆ ಅವರ ಆಯ್ಕೆ ಹಾಗೂ ಪಾತ್ರದ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ. ಇದಷ್ಟೇ ಅಲ್ಲ ತಮಿಳಿನಲ್ಲಿಯೂ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಶ್ರದ್ಧಾ, ಟಾಪ್ ನಟರೊಂದಿಗೆ ತೆರೆಹಂಚಿಕೊಳ್ಳಲಿದ್ದಾರೆಂಬ ಸುದ್ದಿ ನಿತ್ಯ ಕೇಳಿಬರುತ್ತಿದೆ.

ಸದ್ದಿಲ್ಲದೆ, ಬಾಲಿವುಡ್ ಅವಕಾಶವನ್ನೂ ಗಿಟ್ಟಿಸಿಕೊಂಡಿರುವ ಅವರು, ತಿಗ್ಮಾನ್ಶು ಧುಲಿಯಾ ನಿರ್ದೇಶನದ ‘ಮಿಲನ್ ಟಾಕೀಸ್’ ಚಿತ್ರದಲ್ಲಿ ಅಲಿ ಫೈಸಲ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ‘ರುಸ್ತುಂ’ ಸಿನಿಮಾದಲ್ಲಿ ಬಾಲಿವುಡ್​ನ ಅನಿಲ್ ಕಪೂರ್, ಮನೋಜ್ ಬಾಜಪೇಯ್, ಸಂಜಯ್ ದತ್, ಸುನೀಲ್ ಶೆಟ್ಟಿ ಪೈಕಿ ಓರ್ವ ಸ್ಟಾರ್ ನಟ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಆ ಬಗ್ಗೆಯೂ ಮಾತುಕತೆ ನಡೆದಿರುವುದರಿಂದ ಯಾರ ಆಗಮನವಾಗುತ್ತದೆ ಎಂಬುದು ಅಂತಿಮವಾಗಿಲ್ಲ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಲಿದ್ದು, ‘ಮಫ್ತಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ನವೀನ್​ಕುಮಾರ್ ಇಲ್ಲಿಯೂ ಮುಂದುವರಿಯಲಿದ್ದಾರೆ.ಇದೇ ಏಪ್ರಿಲ್24 ರಂದು ರುಸ್ತುಂ ಚಿತ್ರದ ಮುಹೂರ್ತ ನಡೆಯಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here