2008ರ ಮುಂಬಯಿ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ವೀರಮರಣವಪ್ಪಿದ್ದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಜನಿಸಿದ ದಿನ ಮಾರ್ಚ್ 15, 1977. ಸಂದೀಪ್ ನಮ್ಮನ್ನು ಬಿಟ್ಟು ವೀರ ಮರಣ ಅಪ್ಪಿದ ದಿನ ಇಂದು(26-11-2008). ಸಂದೀಪ್ ಪುಣ್ಯ ಸ್ಮರಣೆ ದಿನ ಅವರನ್ನು ನೆನೆಯುತ್ತ ಅವರ ಬಗ್ಗೆ ಮಾಹಿತಿ ತಿಳಿಯೋಣ….

ಉನ್ನಿಕೃಷ್ಣನ್ ಬಳಿ ನಯಾಪೈಸೆ ಹಣವಿರಲಿಲ್ಲ. ಏಕೆಂದರೆ, ಆತ ಸೇನೆಯಲ್ಲಿ 9 ವರ್ಷ ಉನ್ನತ ಹುದ್ದೆಯಲ್ಲಿದ್ದು ಪಡೆದಿದ್ದ ಸಂಬಳವನ್ನೆಲ್ಲ ಬಡವರಿಗೆ ಖುರ್ಚು ಮಾಡಿದ್ದ..!ಇನ್ನೂ ಮೂವತ್ತರ ಹರೆಯದಲ್ಲಿದ್ದ ಮೇಜರ್‌ ಸಂದೀಪ್‌ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಸುಮಾರು ಐದೂವರೆ ವರ್ಷಗಳೇ ಆಗಿವೆ. ಸಂದೀಪ್‌ ಒಬ್ಬ ಎನ್‌ಎಸ್‌ಜಿ ಕಮಾಂಡೊ, ಮೇಜರ್‌ ಆಗಿ ಮುಂಬಯಿ ದಾಳಿಯಲ್ಲಿ ಉಗ್ರರೊಂದಿಗೆ ಸೆಣಸಾಡಿ ಮಡಿದ ಎಂಬುದಷ್ಟೇ ಗೊತ್ತು. ಆದರೆ, ಖಡಕ್‌ ಸೇನಾಧಿಕಾರಿಯಾಗಿದ್ದ ಮೇಜರ್‌ ಸಂದೀಪ್‌ನ ಇನ್ನೊಂದು ಮುಖ, ಅವನ ಸೇವಾ ಮನೋಭಾವದ ಬಗ್ಗೆ ಹೊರ ಜಗತ್ತಿಗೆ ಗೊತ್ತೇ ಇಲ್ಲದ ಮೈ ರೋಮಾಂಚನವಾಗುವ ಬಹಳಷ್ಟು ವಿಷಯಗಳಿವೆ.

 

ಇವೆಲ್ಲವನ್ನು ಸಂದೀಪ್‌ ತಾಯಿ ಧನಲಕ್ಷ್ಮಿ ಉನ್ನಿಕೃಷ್ಣನ್‌ ಹಂಚಿಕೊಂಡಿದ್ದು ಹೀಗೆ…..ಸಂದೀಪ್‌ 1995ರಲ್ಲಿ ಎನ್‌ಡಿಎ ಪರೀಕ್ಷೆ ಬರೆದು ಕೆಡೆಟ್‌ ಆಗಿ ಪುಣೆಯಲ್ಲಿ ಸೇನೆ ಸೇರಿಕೊಂಡಿದ್ದ. ರಾಜಸ್ಥಾನ, ಜಮ್ಮು-ಕಾಶ್ಮೀರ, ಹೈದರಾಬಾದ್‌ನಲ್ಲಿ ಸೇವೆ ಸಲ್ಲಿಸಿ ಬಳಿಕ ಎನ್‌ಎಸ್‌ಜಿ ಕಮಾಂಡೊ, ಮೇಜರ್‌ ಆಗಿ ಹರಿಯಾಣದ ಮನೇಸರ್‌ನ ಎನ್‌ಎಸ್‌ಜಿ ಮುಖ್ಯ ಕಚೇರಿಗೆ ನಿಯೋಜನೆಗೊಂಡಿದ್ದ. 9 ವರ್ಷ ಸೇನೆಯಲ್ಲಿದ್ದ ಅವನು ಯಾವತ್ತು ಮನೆಗೆ ದುಡ್ಡು ಕಳುಹಿಸುತ್ತಿರಲಿಲ್ಲ. ಕೈತುಂಬಾ ಸಂಬಳ ಪಡೆಯುತ್ತಿದ್ದರೂ, ನಾವು ಆ ಬಗ್ಗೆ ಕೇಳುತ್ತಿರಲಿಲ್ಲ. ಹೀಗಾಗಿ, ಅವನ ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣ ಉಳಿತಾಯ ಮಾಡಿರಬಹುದು ಎಂದು ಭಾವಿಸಿದ್ದೆವು. ಆದರೆ, ಮುಂಬಯಿ ದಾಳಿಯಲ್ಲಿ ಮಡಿದ ನಂತರವೇ ನಮಗೆ ಗೊತ್ತಾಗಿದ್ದು, ಅವನ ಬಳಿ ನಯಾಪೈಸೆಯೂ ಸಂಪಾದನೆ ಇರಲಿಲ್ಲ ಎನ್ನುವುದು

 

9 ವರ್ಷ ಸೇನೆಯಿಂದ ಪಡೆದ ಹಣವೆಲ್ಲ ಎಲ್ಲಿದೆ ಎಂದು ವಿಚಾರಿಸಿದಾಗಲೇ ಸತ್ಯ ಗೊತ್ತಾಗಿದ್ದು ! ಸಂದೀಪ್‌ ಸಂಬಳವನ್ನೆಲ್ಲ ಬಡವರಿಗೆ ದಾನ ಮಾಡುತ್ತಿದ್ದ. ಅಷ್ಟೇಅಲ್ಲ, ತಿಂಗಳ ಸಂಬಳದಲ್ಲಿ ಒಂದಷ್ಟು ಹಣವನ್ನು ತನ್ನ ಬೆಟಾಲಿಯನ್‌ನಲ್ಲಿದ್ದ ಬಡ ಯೋಧರು ಮತ್ತು ಅವರ ಕುಟುಂಬದ ನೆರವಿಗೆ ಕಳುಹಿಸುತ್ತಿದ್ದ. ಸಂದೀಪ್‌ ಸಾವಿನ ನಂತರ ನಾವು ಎನ್‌ಎಸ್‌ಜಿ ಘಟಕಕ್ಕೆ ಹೋಗಿದ್ದೆವು. ಆಗ, ಅವನಿಂದ ಸಹಾಯ ಪಡೆಯುತ್ತಿದ್ದ ಅನೇಕ ಯೋಧರು ನಮ್ಮಲ್ಲಿ ಈ ವಿಷಯ ಹೇಳಿಕೊಂಡಾಗ ನಮಗೆ ಆಶ್ಚರ್ಯವಾಯಿತು. ‘ನಾವೆಲ್ಲ ಈಗ ಈ ಸ್ಥಿತಿಯಲ್ಲಿದ್ದರೆ, ಅದಕ್ಕೆ ಸಂದೀಪ್‌ ಸಾಬ್‌ ಕಾರಣ’ ಎಂದು ಅಲ್ಲಿನವರು ಹೇಳಿದಾಗ ರೋಮಾಂಚನವಾಗಿತ್ತು.

 

ಆದರೆ, ತನಗೆ ಬರುತ್ತಿದ್ದ ಹಣವನ್ನೆಲ್ಲ ದಾನ ಮಾಡುತ್ತಿದ್ದ ಬಗ್ಗೆ ಸಂದೀಪ್‌ ಯಾವತ್ತೂ ನಮ್ಮ ಬಳಿ ಹೇಳಿರಲಿಲ್ಲ. ಅವನು ಕೆಲವೊಂದು ಎನ್‌ಜಿಓಗಳಿಗೆ ದೇಣಿಗೆ ಕೊಡುತ್ತಿದ್ದ ಎನ್ನುವುದು ಕೂಡ ಈಗ ನಮಗೆ ಗೊತ್ತಾಗುತ್ತಿದೆ. ಏಕೆಂದರೆ, ಅವನಿಂದ ನೆರವು ಪಡೆದ ಅನೇಕ ಸಂಸ್ಥೆಗಳಿಂದ ನಮ್ಮ ಮನೆಗೆ ಈಗ ಆ ಬಗ್ಗೆ ಪತ್ರಗಳು ಬರತೊಡಗಿವೆ. ಆದರೆ, ಅವನ ಸಾಮಾಜಿಕ ಕಾಳಜಿ ಬಗ್ಗೆ ಗೊತ್ತಿತ್ತೇ ಹೊರತು ದೇಶ ಸೇವೆ ಜತೆಗೆ ಇಷ್ಟೊಂದು ಜನ ಸೇವೆಯನ್ನೂ ಮಾಡುತ್ತಿದ್ದ ವಿಚಾರ ತಿಳಿದಿರಲಿಲ್ಲ.

ಹೇಳದೆ ಮನೆಗೆ ಬರುತ್ತಿದ್ದ !

ಸಂದೀಪ್‌ ರಜೆ ಪಡೆದು ಮುಂಚಿತ ಫೋನ್‌ ಮಾಡಿ ತಿಳಿಸಿ ಮನೆಗೆ ಬರುತ್ತಿರಲಿಲ್ಲ. ಒಮ್ಮೆ ಇದ್ದಕ್ಕಿದ್ದಂತೆ ಮನೆಗೆ ಬಂದಿದ್ದಾಗ ಯಾಕೆ ಮೊದಲೇ ಹೇಳದೆ ಈ ರೀತಿ ಬಂದು ಹೋಗುತ್ತಿಯಾ ಎಂದು ಕೇಳಿದ್ದೆ ? ಆಗ ಅವನು ಹೇಳಿದ್ದು ‘ಅಮ್ಮ, ನಾನು ಅಲ್ಲಿ ದೊಡ್ಡ ಆಫೀಸರ್‌. ನನ್ನ ತಂಡದ ಯೋಧರ ಕೆಲವು ಕುಟುಂಬಗಳು ತುಂಬಾ ತೊಂದರೆಯಲ್ಲಿವೆ. ಹೀಗಾಗಿ, ಅವರಿಗೆಲ್ಲ ಬೇಕೆಂದಾಗ ರಜೆ, ಹಣದ ನೆರವು ಕೊಟ್ಟು, ಅವರ ಮನೆಯ ಸಮಸ್ಯೆಗಳಿಗೆ ಸ್ಪಂದಿಸುವಷ್ಟರಲ್ಲಿ ನನಗೆ ಹೇಳಿದ ಸಮಯಕ್ಕೆ ರಜೆ ಹಾಕಿ ಮನೆಗೆ ಬರಲು ಕಷ್ಟವಾಗುತ್ತದೆ. ಹೀಗಾಗಿ, ಏಕಾಏಕಿ ರಜೆ ಹಾಕಿ ಬಂದು ಹೋಗುತ್ತೇನೆ’ ಎಂದಿದ್ದ.

ಕಾರು ಕಲಿಸಿ ಹೋಗಿದ್ದ

2008ರ ಆಗಸ್ಟ್‌ನಲ್ಲಿ 40 ದಿನ ರಜೆ ಹಾಕಿ ಮನೆಗೆ ಬಂದಿದ್ದು ಅವನ ಕೊನೆ ಭೇಟಿ. ಆಗ ಬಂದವನು ಅಮ್ಮ ಕಾರು ಡ್ರೈವಿಂಗ್‌ ಕಲಿಯಬೇಕೆಂದು ತುಂಬಾ ಹಠ ಮಾಡಿದ್ದ. ಅವನ ಹಠಕ್ಕೆ ಮಣಿದು ಕಾರು ಓಡಿಸುವುದನ್ನು ಕಲಿತಿದ್ದೆ. ಪ್ರತಿ ಸಲ ಮನೆಗೆ ಬರುವಾಗ ವಿಮಾನದಲ್ಲಿ ಬಂದು ಹೋಗುತ್ತಿದ್ದ. ಆದರೆ, ಆ ಸಲ ಆ.11ಕ್ಕೆ ವಾಪಸ್‌ ಹೋಗಿದ್ದು ರೈಲಿನಲ್ಲಿ. ಏಕೆಂದರೆ, ವಿಮಾನಕ್ಕೆ ದೇವನಹಳ್ಳಿವರೆಗೆ ಹೋಗಬೇಕು. ಆದರೆ, ಇಲ್ಲೇ ಪಕ್ಕದಲ್ಲಿ ರೈಲು ನಿಲ್ದಾಣ ಇರುವ ಕಾರಣ 5 ನಿಮಿಷ ಮೊದಲು ಹೊರಟರೆ ಸಾಕು. ಅಷ್ಟೊತ್ತು ಮನೆಯಲ್ಲಿರಬಹುದಲ್ಲ’ ಎನ್ನುತ್ತ ಮನೆಬಿಟ್ಟು ಹೋದ ಸಂದೀಪ್‌ ವಾಪಸ್‌ ಬಂದಿಲ್ಲ.

ಸಂದೀಪ್‌ ಬಾಹರ್‌ ಗಯಾ !ಜಾರ್ಖಂಡ್‌ ಮೂಲದ ಸೋಹನ್‌ ಎಂಬಾತ ಮೇಜರ್‌ ಸಂದೀಪ್‌ನ ಆಪ್ತ ಸಹಾಯಕನಾಗಿದ್ದ. ಸೋಹನ್‌ ಸುಮಾರು 8 ವರ್ಷ ಸಂದೀಪ್‌ ಜತೆಗಿದ್ದು ಅವನ ಎಲ್ಲ ಕೆಲಸಗಳಿಗೆ ನೆರವಾಗುತ್ತಿದ್ದವನು.

ಮುಂಬಯಿ ದಾಳಿ ಆಪರೇಷನ್‌ಗೆ ಸಂದೀಪ್‌ ಹೊರಟಿದ್ದಾಗ, ಒಂದು ಜತೆ ಬಟ್ಟೆ ಹಾಗೂ ಶೂ ಅನ್ನು ಬ್ಯಾಗ್‌ನಲ್ಲಿ ಇಟ್ಟು ಕಳುಹಿಸಿದ್ದು ಇದೇ ಸೋಹನ್‌. ಅಷ್ಟೇ ಅಲ್ಲ, ‘ಮನೆಯಿಂದ ಅಮ್ಮ ಫೋನ್‌ ಮಾಡಿದರೆ, ಹೊರಗಡೆ ಹೋಗಿದ್ದಾರೆ ಎಂದಷ್ಟೇ ಹೇಳು’ ಎಂಬ ಸೂಚನೆಯನ್ನೂ ಕೊಟ್ಟು ಸಂದೀಪ್‌ ಎನ್‌ಎಸ್‌ಜಿ ಘಟಕದಿಂದ ಹೊರಟಿದ್ದ.ಟಿವಿಯಲ್ಲಿ ಮುಂಬಯಿ ದಾಳಿ ಆಪರೇಷನ್‌ ನೋಡಿದ ತಾಯಿ ಧನಲಕ್ಷ್ಮಿ ಸಂದೀಪ್‌ ಫೋನ್‌ಗೆ ನ.26ರಂದು ಕರೆ ಮಾಡಿದ್ದರು. ಆಗ ಫೋನ್‌ ಎತ್ತಿಕೊಂಡ ಸೋಹನ್‌ ‘ಸಂದೀಪ್‌ ಸಾಬ್‌ ಬಹರ್‌ ಗಯಾ’ ಎಂದಷ್ಟೇ ಹೇಳಿದ್ದ.

ಸಂದೀಪ್‌ಗೆ ಸೋಹನ್‌ ಅಂದರೆ ತುಂಬಾ ಪ್ರೀತಿ. ಬಡತನದಿಂದ ಬಂದಿದ್ದ ಸೋಹನ್‌ ಕುಟುಂಬಕ್ಕೆ ಮೇಜರ್‌ ಸಂದೀಪ್‌ ಆಧಾರಸ್ತಂಭವಾಗಿದ್ದ. ಸಾಯುವುದಕ್ಕೂ ಒಂದು ತಿಂಗಳು ಮೊದಲು ಫೋನ್‌ ಮಾಡಿ ‘ಅಮ್ಮ ಸೋಹನ್‌ಗೆ ಮದುವೆಯಂತೆ. ಅವನ ಮದುವೆಯನ್ನು ನಾವೇ ಮಾಡಿಸೋಣ’ ಎಂದು ತಾಯಿಗೆ ಹೇಳಿದ್ದ. ಆದರೆ, ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ. ಆದರೆ, ಸಂದೀಪ್‌ ಇಚ್ಛೆಯಂತೆ, ಆ ಬಳಿಕ ಅವನ ಅಪ್ಪ-ಅಮ್ಮ ಜಾರ್ಖಂಡ್‌ಗೆ ಹೋಗಿ ಸೋಹನ್‌ನ ಮದುವೆ ಮಾಡಿಸಿದ್ದಾರೆ. ಆ ದಿನ ಮನೆಗೆ ಹೋಗಿದ್ದಾಗ, ಅವನ ತಾಯಿಯತ್ತ ಕೈತೋರಿಸಿ ‘ಅಮ್ಮ ಬದುಕಿದ್ದರೆ ಅದಕ್ಕೆ ಸಂದೀಪ್‌ ಸಾಬ್‌ ಕಾರಣ’ ಎಂದು ಸಂದೀಪ್‌ ತಂದೆ-ತಾಯಿಯನ್ನು ಸೋಹನ್‌ ತಬ್ಬಿಕೊಂಡು ಅತ್ತಿದ್ದರಂತೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here