ಅಯೋಗ್ಯ ಕನ್ನಡ ಚಿತ್ರ ಬಿಡುಗಡೆಯಾಗಿ‌‌ ಮೂರುವಾರ ಕಳೆದು ಭರ್ಜರಿ ಪ್ರದರ್ಶನದ ಮೂಲಕ ಯಶಸ್ಸಿನತ್ತ ದಾಪುಗಾಲು ಹಾಕಿದೆ. ಈ ಸಂದರ್ಭದಲ್ಲಿ ಚಿತ್ರ ತಂಡ, ತಮ್ಮ ನಾಯಕನೊಂದಿಗೆ ವಿಜಯ ಯಾತ್ರೆಯನ್ನು ನಡೆಸಿದೆ. ಆರಂಭದಲ್ಲಿ ಅದು ವಿಜಯಯಾತ್ರೆ ಆಗಿತ್ತು, ಈಗ ಅದು ವಿಜಯ ಯಾತ್ರೆಯ ಜೊತೆಗೆ ಸಾಮಾಜಿಕ ಕಳಕಳಿಯ ಮಾನವೀಯ ಯಾತ್ರೆ ಕೂಡಾ ಪರಿವರ್ತನೆ ಹೊಂದಿದೆ. ನಾಯಕ ನೀನಾಸಂ ಸತೀಶ್ ಅವರ ಅಯೋಗ್ಯ ತಂಡದ ವಿಜಯಯಾತ್ರೆಯ ಸಂದರ್ಭದಲ್ಲಿ ಸತೀಶ್ ಹಾಗೂ ಅವರ ತಂಡ ಹೊಸಪೇಟೆ ಗೆ ಭೇಟಿ ನೀಡಿ, ಕನ್ನಡ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಆ ಆತ್ಮೀಯ ಭೇಟಿ, ಸತೀಶ್ ಅವರ ಮಾತು, ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿದಿದೆ.

 

ಹೊಸಪೇಟೆಯ ರಾಜು ಎಂಬ ಕನ್ನಡದ ವೀರಾಭಿಮಾನಿ , ಚಿತ್ರತಂಡದ ಆಗಮನದ ಹಿನ್ನೆಲೆಯಲ್ಲಿ, ಬಹಳ ಪ್ರೀತಿಯಿಂದ ಅವರಿಗೆಲ್ಲಾ ಸುಮಾರು ಐವತ್ತರಿಂದ, ಅರವತ್ತು ರೊಟ್ಟಿ ಮಾಡಿ ಕಳುಹಿಸಿದ್ದಾರೆ ಹಾಗೂ ಚಿತ್ರತಂಡವನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಅವರ ಮನೆಗೆ ಬರುವವರೆಗೂ ಸತೀಶ್ ಅವರು ರಾಜು ಎಂದರೆ ಯಾರೋ ಶ್ರೀಮಂತ ವ್ಯಕ್ತಿ ಇರಬೇಕೆಂದು ಭಾವಿಸಿದ್ದರು, ಆದರೆ ಅವರ ಮನೆಗೆ ಬಂದಾಗ ತಿಳಿದಿದ್ದು, ರಾಜು ಹಾಗೂ ಅವರ ಕುಟುಂಬ ಹಾಗೂ ಕನ್ನಡದ ಬಗ್ಗೆ ಅಪಾರ ಪ್ರೀತಿ‌ ಹಾಗೂ ಅಭಿಮಾನವಿರುವ ಹಲವು ಕುಟುಂಬಗಳು ಕೊಳಗೇರಿಯಂತಹ ಸ್ಥಳದಲ್ಲಿ , ಮೂಲಭೂತ ಸೌಲಭ್ಯಗಳು ಇಲ್ಲದಂತಹ ಕಡೆ ವಾಸಿಸುತ್ತಿದ್ದಾರೆ ಎಂದು. ಆಗ ಸತೀಶ್ ಅವರು ಬಡತನದಲ್ಲಿದ್ದರೂ ರಾಜು ಚಿತ್ರತಂಡಕ್ಕಾಗಿ ತೋರಿದ ಆದರ ಹಾಗೂ ಆತಿಥ್ಯಕ್ಕೆ ಭಾವುಕರಾದರು.

ಅಲ್ಲದೆ ತಾನೊಬ್ಬ ನಾಯಕ ನಟ ಎನ್ನುವ ಯಾವುದೇ ಗತ್ತು ತೋರದೆ , ಸಾಮಾನ್ಯರಲ್ಲಿ ಸಾಮಾನ್ಯನಂತೆ ಅಲ್ಲಿ ಬಂದ ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದು ಮಾತ್ರವಲ್ಲದೆ, ಬಹಳ ತಾಳ್ಮೆಯಿಂದ ಎಲ್ಲರ ಜೊತೆಗೆ ಸೆಲ್ಫಿ ತೆಗೆಸಿಕೊಂಡು, ಅಲ್ಲಿನ ಕನ್ನಡಾಭಿಮಾನಿಗಳಿಗೆ ಸಂತೋಷ ತಂದು ಕೊಟ್ಟಿದ್ದಾರೆ. ಇನ್ನು ರಾಜು ಅವರ ಮನೆಯೊಳಗೆ ಕನ್ನಡದ ಮೇರು ನಟರಾದ ಡಾ..ರಾಜ್ ಕುಮಾರ್ ಹಾಗೂ ಇತರೆ ನಟರ ಫೋಟೋಗಳೇ ತುಂಬಿರುವುದನ್ನು ನೋಡಿ , ಅವರ ಕನ್ನಡ ಅಭಿಮಾನವನ್ನು ಮೆಚ್ಚಿ ಮಾತನಾಡಿದ್ದಾರೆ. ಅಂತಹ ಕನ್ನಡ ಅಭಿಮಾನಿಗಳಿದ್ದರೆ‌ ಕನ್ನಡ ಚಿತ್ರಗಳಿಗೆ ಜಯ ಖಂಡಿತ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಅದಾದ ನಂತರ ರಾಜು ಅವರ ಮನೆಯಿಂದ ಹೊರಡುವ ಮೊದಲು , ರಾಜು ಅವರು ಒಂದು ಸಣ್ಣ ಕೋಣೆಯಲ್ಲಿ, ಅಲ್ಲಿ ಸರಿಯಾದ ವಿದ್ಯುತ್ ಬಲ್ಬ್ ಕೂಡಾ ಇಲ್ಲದ ಸಣ್ಣ ಕೋಣೆ, ಅದರಲ್ಲಿ ರಾಜು ಕನ್ನಡದ ನಾಯಕ ನಟರ ಫೋಟೋಗಳನ್ನು ಇಟ್ಟು, ಆ ಚಿಕ್ಕ ಕೋಣೆಯನ್ನು ಕೇವಲ ಕನ್ನಡ ನಟರ ಫೋಟೋ ಗ್ಯಾಲರಿ ಮಾಡಿರುವುದನ್ನು ನೋಡಿ ಬಹಳ ಭಾವುಕರಾದರು. ಆಗ ಕನ್ನಡ ಎನ್ನುವುದು, ಅಭಿಮಾನ ಎನ್ನುವುದು ಒಂದು ಭಾವ, ಆಚರಣೆ ಅದು ಎಲ್ಲರಿಗೂ ಇರಬೇಕೆಂದರು. ಅಲ್ಲದೆ ರಾಜು ಹಾಗೂ ಇತರರು ವಾಸಿಸುತ್ತಿರುವ, ಮೂಲಭೂತ ಸೌಲಭ್ಯಗಳು ಇಲ್ಲದೆ, ಕಾಲುವೆಯ ಪಕ್ಕದಲ್ಲೆಲ್ಲೋ ಮನೆಗಳನ್ನು ಮಾಡಿಕೊಂಡಿರುವ ಆ ಜನರ ಸ್ಥಿತಿ ನೋಡಿ ವಿಚಲಿತರಾದರು. ಮನೆ ಚಿಕ್ಕದಾದರೂ ಕನ್ನಡಕ್ಕಾಗಿ ವಿಶಾಲ ಮನಸ್ಸಿರುವ ಆ ಜನರ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಅಷ್ಟಕ್ಕೆ ತಾನು ಬಂದ ಕೆಲಸ ಮುಗಿಯಿತೆಂದು ಅವರು ಅಂದು ಕೊಳ್ಳಲಿಲ್ಲ, ಕನ್ನಡದ ಹೆಸರು ಹೇಳಿಕೊಂಡು ಹಣ ಮಾಡಿಕೊಳ್ಳುವ ಜನರಿಗಿಂತ, ನಿಜವಾದ ಕನ್ನಡ ಅಭಿಮಾನ ಹೊಂದಿದ ಈ ಜನರ ಕಡೆ ನೋಡಿ, ಅವರಿಗೊಂದು ಸರಿಯಾದ ಸೂರು ಒದಗಿಸಿಕೊಡಿ ಎಂದು ಸರ್ಕಾರವನ್ನು ಕೇಳಿದ್ದಾರೆ. ಓಟಿಗಾಗಿ ಬಂದು ಅನಂತರ ಮರೆಯಾದ ನಾಯಕರಿಗಿಂತ ಹೆಚ್ಚಿನ ಕಳಕಳಿಯನ್ನು ಸತೀಶ್ ಅವರು ತೋರಿಸಿದ್ದಾರೆ. ಅಲ್ಲದೆ ರಾಜು ಅವರಿಗೆ , ತಾನು ಆ ಏರಿಯಾ ಎಂ.ಎಲ್.ಎ ಹಾಗೂ ಕಾರ್ಪೊರೇಟರ್ ಅವರ ಬಳಿ ಖುದ್ದು ಮಾತನಾಡುವುದಾಗಿ ಹಾಗೂ ತನ್ನಿಂದ, ಅಯೋಗ್ಯ ಚಿತ್ರ ತಂಡದಿಂದ ಏನು ಸಾಧ್ಯವಿದೆಯೋ ಅದನ್ನು ಮಾಡುವುದಾಗಿ ಹೇಳಿದರು. ಅಲ್ಲದೆ ಮೂಲಭೂತ ಸೌಲಭ್ಯಗಳಿಗಾಗಿ ರಾಜು ಅವರಿಗೆ ಹೋರಾಟ ಮಾಡಲು ಪ್ರೇರಣೆ ನೀಡಿದ್ದು ಮಾತ್ರವಲ್ಲದೆ, ಅವರು ಹೋರಾಟ ಮಾಡುವುದಾದರೆ ತಾನು ಸ್ವತಃ ಅವರ ಜೊತೆ ಕೈಜೋಡಿಸುವುದಾಗಿ ಮಾತು ನೀಡಿದ್ದಾರೆ ಸತೀಶ್ ಅವರು.

ಇದು ನಿಜವಾಗಲೂ ವಿಜಯಯಾತ್ರೆಯೇ ಹೌದು. ಚಿತ್ರತಂಡ ಕೇವಲ ತನ್ನ ವಿಜಯದ ಸಂಭ್ರಮ ಆಚರಿಸಿ ಸುಮ್ಮನಾಗಿಲ್ಲ, ಬದಲಿಗೆ ಕನ್ನಡ ಅಭಿಮಾನಿಗಳ ಜೀವನದಲ್ಲಿ ಬೆಳಕು ನೀಡುವ, ಅವರ ಬಾಳಿನಲ್ಲಿ ನೆಮ್ಮದಿಯನ್ನು ತರುವ ಪ್ರಯತ್ನಕ್ಕೆ ಕೈ ಹಾಕಿ, ಚಿತ್ರ ತಂಡದ ವಿಜಯ ಯಾತ್ರೆಗಳು , ಕೇವಲ ಮನೋರಂಜನೆ ಮಾತ್ರವಲ್ಲ ಬದಲಿಗೆ ಸಾಮಾಜಿಕ ಬದಲಾವಣೆಯ ಸಾಧನಗಳು ಆಗಬಹುದೆಂಬ ಹೊಸ ಇತಿಹಾಸಕ್ಕೆ ಬುನಾದಿಯನ್ನು ಹಾಕಿ ಬಂದಿದ್ದಾರೆ ನೀನಾಸಂ ಸತೀಶ್. ಅವರ ಈ ಪ್ರಯತ್ನ ಸರ್ಕಾರಕ್ಕೆ ತಿಳಿಯಲಿ, ಹೊಸಪೇಟೆಯ ಆ ಕನ್ನಡಿಗರಿಗೆ ಸೂಕ್ತ ಸೌಲಭ್ಯಗಳು ದೊರಯಲಿ ಎಂಬ ಸತೀಶ್ ಅವರ ಆಸೆ ಹಾಗೂ ಮಾನವೀಯ ಕಳಕಳಿ ಬಹುಬೇಗ ಸಾಕಾರವಾಗಲಿ ಎಂದು ಆಶಿಸೋಣ……..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here