ತನ್ನ ಸರಳ ಜೀವನ ಮತ್ತು ಜನಪರ ಕಾಳಜಿಯಿಂದ ಮಂಡ್ಯದ ಜನರಿಗೆ ಕೇವಲ  ಐದುರುಪಾಯಿಗೆ ಚಿಕಿತ್ಸೆ ನೀಡಿ ಐದು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಡಾ.ಎಚ್.ಸಿ.ಶಂಕರೇಗೌಡ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಂಬಲಿಗರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ವರಿಷ್ಠರು ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಜಿಪಂ ಸದಸ್ಯನಾಗಿ, ಉಪಾಧ್ಯಕ್ಷರಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನನ್ನ ನಿಲುವನ್ನು ಇನ್ನೆರಡು ದಿನದಲ್ಲಿ ಬಹಿರಂಗ ಪಡಿಸುತ್ತೇನೆ. ನಾನು ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ. ಮಂಡ್ಯದಲ್ಲಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.ಕೇವಲ ಐದು ರೂಪಾಯಿಗೆ ಬಡವರಿಗೆ ಚಿಕಿತ್ಸೆ ನೀಡಿ ಮಂಡ್ಯ ಜಿಲ್ಲೆಯಾದ್ಯಂತ ಜನಪ್ರಿಯತೆ ಪಡೆದಿರುವ ಡಾ.ಎಚ್.ಸಿ.ಶಂಕರೇಗೌಡರರಿಗೆ ಜೆಡಿಎಸ್ ಟಿಕೇಟ್ ನೀಡುವ ಬಗ್ಗೆ ಕೂಡ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ.ಈ ಬಗ್ಗೆ ಕುಮಾರಸ್ವಾಮಿ ಅವರು ಕೂಡ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.ಆದರೆ ಶಂಕರೇಗೌಡ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಒಲವು ಹೊಂದಿದ್ದು ಸ್ವಲ್ಪ ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಡಾ.ಶಂಕರೇಗೌಡರ ಬಗ್ಗೆ ತಿಳಿಯಬೇಕಾದ ಮಾಹಿತಿ…ಓದಿ..!

ವೈದ್ಯರೆಂದ ಮೇಲೆ ಅಲ್ಲಿ ಪರ್ಸ್ ಗಟ್ಟಿ ಇರಬೇಕೆಂಬ ನಿಯಮ ಸೃಷ್ಟಿಯಾಗಿದೆ. ವೈದ್ಯಕೀಯ ವೃತ್ತಿ ಬಹುತೇಕ ಕಮರ್ಶಿಯಲ್ ಮಯವಾಗಿದೆ. ಆದರೆ ನಾನು ಉಲ್ಲೇಖೀಸುವ ಡಾ. ಎಸ್.ಸಿ. ಶಂಕರೇ ಗೌಡ್ರು ಎಲ್ಲರಿಗಿಂತಲೂ ವಿಭಿನ್ನ. ವೈದ್ಯಲೋಕಕ್ಕೆ ಸವಾಲು. ಮಂಡ್ಯ ಪರಿಸರದಲ್ಲಿ “ಐದ್ರುಪಾಯ್ ಡಾಕ್ಟ್ರು” ಎಂದೇ ಪ್ರಸಿದ್ಧಿ.ಪಕ್ಕಾ ಗ್ರಾಮ್ಯ ಸೊಗಡಿನ ಶಂಕ್ರೇ ಗೌಡ್ರು ಚರ್ಮರೋಗ ತಜ್ಞರು. 1982 ರಲ್ಲಿ ಎಂಬಿಬಿಎಸ್ ಮಾಡಿ ಡಿವಿಡಿ ಪದವಿ ಪಡೆದ ಶಂಕ್ರಣ್ಣನಿಗೆ ಪ್ರಸ್ತುತ 61 ರ ಹರೆಯ. ಪದವಿ ಪಡೆದ ಬಳಿಕ ಮಂಡ್ಯದ ಆರ್.ಪಿ. ರಸ್ತೆಯಲ್ಲಿ ತಾರಾ ಕ್ಲಿನಿಕ್ ತೆರೆದರು.

ಅವರ ಕೈಗುಣಕ್ಕೆ ಜನ ಫಿದಾ ಆದರು. ಈಗಲೂ ಕೇವಲ ಐದು ರೂಪಾಯಿಗೆ ಚಿಕಿತ್ಸೆ ನೀಡುವ ಶಂಕ್ರೇಗೌಡರ ಬಳಿ ಬರುವ ಜನರಿಗೆ ಲೆಕ್ಕವಿಲ್ಲ. ಮಂಡ್ಯವಲ್ಲದೆ ಮೈಸೂರು, ಬೆಂಗಳೂರು, ತುಮಕೂರು, ರಾಮನಗರ, ಚೆನ್ನಪಟ್ಟಣ, ತಮಿಳ್ನಾಡು, ಆಂಧ್ರದ ಜನ ಕೂಡಾ ಹುಡ್ಕೊಂಡು ಬರ್ತಾರೆ ಎಂದರೆ ಇವರ ಖ್ಯಾತಿ ಹೇಗಿರ್ಬೇಡ? ಯಾರಲ್ಲೂ ಹೆಚ್ಚು ದುಡ್ಡು ಪಡೆಯೋಲ್ಲ. ಐದ್ರುಪಾಯಿಗಿಂತ ಜಾಸ್ತಿ ಕೊಟ್ರೆ ಗರಂ ಆಗ್ತಾರೆ. ಬಡ/ಅಶಕ್ತರು ಹಣವಿಲ್ಲದೆ ಬಂದ್ರೆ ಫ್ರೀ ಟ್ರೀಟ್ ಮೆಂಟ್ ಜೊತೆಗೆ ಔಷಧಿ ಕೂಡಾ ಉಚಿತ. ದಿನವೊಂದಕ್ಕೆ 250 ರಿಂದ 300 ಮಂದಿ ಶಂಕ್ರಣ್ಣನಿಗಾಗಿ ಸರದಿ ಸಾಲಲ್ಲಿ ನಿಲ್ತಾರೆ. ಕೇವಲ ಕಣ್ಣೋಟದಲ್ಲೇ ರೋಗಿಯ ಸಮಸ್ಯೆ ಅರಿತು ಚೀಟಿ ನೀಡುವುದು ಡಾ. ಶಂಕ್ರೇಗೌಡ್ರ ಸ್ಪೆಶಾಲಿಟಿ. ಅಷ್ಟು ಪರ್ಫೆಕ್ಟ್.

ಶಂಕ್ರೇಗೌಡ್ರು ಮೂಲತಃ ಕೃಷಿಕರು. ಶಿವಳ್ಳಿಯಲ್ಲಿ ಆರು ಎಕ್ರೆ ಜಮೀನಿದೆ. ದಿನನಿತ್ಯ ಬೆಳಗ್ಗಿನ ಜಾವ ಕೃಷಿ ಕೈಂಕರ್ಯ ಮುಗಿಸಿ ಶಿವಳ್ಳಿಯ ಗ್ರಾಮಸ್ಥರಿಗೆ ಮೆಡಿಕಲ್ ನ ಜಗಲಿಯಲ್ಲಿ ಕುಳಿತು ರೋಗಿಗಳನ್ನು ಪರಿಶೀಲಿಸುತ್ತಾರೆ. ಬಳಿಕ ಮಂಡ್ಯದ ತಾರಾ ಕ್ಲಿನಿಕ್ ಗೆ ಬಸ್ಸು ಹತ್ತಿ ಹೋಗುತ್ತಾರೆ. ತಿಂಗಳಲ್ಲಿ ಮೂರು ಭಾನುವಾರ ವಿವಿಧ ಹಳ್ಳಿಗಳಿಗೆ ತೆರಳಿ ಉಚಿತ ಶಿಬಿರ ನೆರವೇರಿಸಿ ಉಚಿತ ಔಷಧಿ ನೀಡ್ತಾರೆ. ಇದಕ್ಕೆ ಪತ್ನಿ ರುಕ್ಮಿಣಿ ಸಾಥ್ ಇದೆ. ಮಂಡ್ಯ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ, ಸದಸ್ಯರಾಗಿಯೂ ಸಾರ್ವಜನಿಕ ಸೇವೆಗೈದವರು ಶಂಕ್ರಣ್ಣ. ನೀರಿನ ಕೊರತೆಯ ಬಗ್ಗೆ ಸಂಘ ಕಟ್ಟಿ ಜಾಗೃತಿ ಮೂಡಿಸುವ ಕೆಲಸದಲ್ಲೂ ಶಂಕ್ರೇಗೌಡ್ರು ಮುಂದಿದ್ದಾರೆ. ವೈದ್ಯಕೀಯ ವ್ಯವಸ್ಥೆ ಕಮರ್ಷಿಯಲ್ ಆಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಐದ್ರುಪಾಯ್ ಡಾಕ್ಟ್ರಂತವರು ನಮ್ಮ ಮಧ್ಯೆ ಇರುವುದು ಸೋಜಿಗ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here