ಶಿವಗಂಗೆಯ ಬೆಟ್ಟ ಹಲವು ಕಾರಣಗಳಿಂದ ಪ್ರಸಿದ್ಧಿ ಆಗಿದೆ.ಶಿವಗಂಗೆಯನ್ನು ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೋಕಿನ ಗಡಿಭಾಗದಲ್ಲಿದೆ ಶಿವಗಂಗೆ ಬೆಟ್ಟ.

ಬೆಂಗಳೂರಿನಿಂದ 58ಕಿಲೋ ಮೀಟರ್ ದೂರವಿದೆ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ನೆಲಮಂಗಲದ ಮೇಲೆ ಹಾದು ಡಾಬಸ್’ಪೇಟೆ ತಲುಪಿ ಅಲ್ಲಿಂದ ಎಡಗಡೆ ತಿರುಗಿ ಅಲ್ಲಿಂದ ಮತ್ತೆ 8 ಕೀಲೋ ಮೀಟರ್ ಹಸಿರು ಸಿರಿಯಲ್ಲಿ ಮುಂದೆ ಸಾಗಿದರೆ ನಿಮಗೆ ಶಿವಗಂಗೆ ಬೆಟ್ಟದ ದರ್ಶನವಾಗುತ್ತದೆ.

ತುಮಕೂರಿನಿಂದ 26ಕಿಲೋ ಮೀಟರ್ ಇದೆ.
ಇದೆ ಬೆಟ್ಟದಲ್ಲಿ ಕುಮುದ್ವತಿ ನದಿಯು ಹುಟ್ಟುವುದು ಇದು ಅರ್ಕಾವತಿ ನದಿಯ ಉಪನದಿಯಾಗಿದೆ.ಸಮುದ್ರ ಮಟ್ಟದಿಂದ 4 ,547 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಂಗಳೂರಿನಿಂದ ಪಶ್ಚಿಮ ದಿಕ್ಕಿನ ಕಡೆಯಿದೆ, ತುಮಕೂರಿನಿಂದ ಪೂರ್ವ ದಿಕ್ಕಿಗೆ ಇದೆ. ನೋಡಲು ಇದು ಶಂಖಾಕೃತಿಯ ಬೆಟ್ಟ ವಾಗಿದ್ದು. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ ಹಾಗೂ ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯನ್ನೂ ಪಡೆದಿದೆ.

ಪ್ರತಿ ವರ್ಷವು ಮಕರ ಸಂಕ್ರಾತಿಯ ಹಬ್ಬದ ದಿನದಂದೆ ಇಲ್ಲಿ ಜಾತ್ರೆ ನಡೆಯುತ್ತದೆ ಇದನ್ನು ಶಿವಗಂಗೆ ಜಾತ್ರೆ ಅಥವಾ ಶಿವಗಂಗೆ ಗಂಗಾಧರೇಶ್ವರನ ಜಾತ್ರೆ ಎನ್ನುವರು(ಬೆಂಗಳೂರಿನಲ್ಲಿಯೂ ಸಹ ಪ್ರಸಿದ್ಧ ಗವಿಗಂಗಾಧರೇಶ್ವರನ ದೇವಾಸ್ಥಾನವಿರುವುದರಿಂದ ಶಿವಗಂಗೆ ಗಂಗಾಧರೇಶ್ವರನ ಜಾತ್ರೆ ಎನ್ನುವರು).
ಇದು ವರ್ಷವಿಡೀ ಜಲಧಾರೆಯನ್ನು ಹೊಂದಿರುವ ಅದ್ಭುತ ಬೆಟ್ಟ.

ಇಲ್ಲಿರುವ ರಹಸ್ಯ ಸುರಂಗ ಮಾರ್ಗದಲ್ಲಿ ಸಾಗಿದರೆ ಶ್ರೀರಂಗಪಟ್ಟಣವನ್ನೂ ತಲುಪಬಹುದು ಹಾಗೂ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯಕ್ಕೂ ನೇರ ಸಂಪರ್ಕವಿದೆ ಆದರೆ ಇದು ಇಂದು ಶೀತಲವ್ಯಸ್ಥೆಯಲ್ಲಿದ್ದು ಮುಚ್ಚಿಹೋಗಿದೆ(ಭಕ್ತಾಧಿಗಳು ಸುರಂಗದೊಳಗೆ ಪ್ರವೇಶಿಸುವುದು ನಿಷೇಧಿಸಲಾಗಿದೆ, ಕಾರಣ ಉಸಿರಾಟದ ತೊಂದರೆಯಾಗಿ ಸಾವು ಸಂಭವಿಸಬಹುದು).


ಈ ಬೆಟ್ಟದಲ್ಲಿರುವ ಶಿವನ ದೇವಾಲಯದಿಂದ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಇಲ್ಲಿ ಒಂದು ನೀರಿನ ಬುಗ್ಗೆ ಇದ್ದು, ಅದು ಒಳಕಲ್ಲಿನ ಆಕೃತಿಯಲ್ಲಿದೆ ಆದ್ದರಿಂದ ಇದನ್ನು ಒಳಕಲ್ಲು ತೀರ್ಥ ಎಂದು ಪ್ರಸಿದ್ಧಿ ಪಡೆದಿದೆ, ಶಿವಗಂಗೆ ಬೆಟ್ಟಕ್ಕೆ ಯಾರೇ ಬಂದರು ಬೆಟ್ಟದ ತುತ್ತ ತುದಿಯ ಸುತ್ತುವ ಬಸವ ಇರುವಲ್ಲಿಗೆ ಹತ್ತಲಾಗದಿದ್ದವರು ಸಹ ಬೆಟ್ಟದ ಮಧ್ಯ ಭಾಗದಲ್ಲಿರುವ ಒಳಕಲ್ಲು ತೀರ್ಥಕ್ಕೆ ಭೇಟಿನೀಡಿ ಒಳಕಲ್ಲಿನ ಒಳಗೆ ಕೈಹಾಕಿ ಅದೃಷ್ಟ ಪರೀಕ್ಷಿಸುವರು ಅಥವಾ ಬೇಡಿದ ಕಾರ್ಯ ಇಡೇರುವುದೋ ಇಲ್ಲವೋ ಎಂದು ತಿಳಿದುಕೊಳ್ಳುವರು.

ನೀರು ಸಿಕ್ಕಿದರೆ ಬೇಡಿದ ಕಾರ್ಯ ಇಡೇರುವುದೆಂದು ಸಿಗದಿದ್ದರೆ ಬೇಡಿದ ಕಾರ್ಯ ಇಡೇರುವುದಿಲ್ಲವೆಂದು ತಿಳಿಯುವರು.ಒಳಕಲ್ಲು ತೀರ್ಥವೇ ಈ ಸ್ಥಳದ ಪ್ರಮುಖ ಆಕರ್ಷಣೆ.ಅರ್ಧಬೆಟ್ಟವನ್ನು ಹತ್ತಿದರೆ ಗುಹೆ ಸಿಗುತ್ತದೆ ಒಳಗೆ ಪ್ರವೇಶಿಸಲು 5 ರುಪಾಯಿಯ ಚೀಟಿ ಪಡೆಯಬೇಕು ಒಳಗೆ ಪ್ರವೇಶಿಸಿ ಒಳಕಲ್ಲು ತೀರ್ಥಕ್ಕೆ ತೆವಳುತ್ತ ಬಗ್ಗಿ ಸಾಗಬೇಕು.

ವರ್ಷದ 365ದಿನಗಳು ಈ ಒಳಕಲ್ಲಿನಲ್ಲಿ ನೀರು ಬತ್ತುವುದಿಲ್ಲ. ಸ್ಥಳೀಯರ ಪ್ರಕಾರ ಈ ನೀರಿನ ಬುಗ್ಗೆಯು ಪವಿತ್ರ ಗಂಗೆಯ ಒಂದು ಉಪಶಾಖೆಯಾಗಿದ್ದು, ಆ ಕಾರಣದಿಂದ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ.
ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತವೆ ಹಾಗೂ ಮದ್ಯಾಹ್ನ 12 ಘಂಟೆಯಿಂದ 3 ಘಂಟೆಯ ವರೆಗೂ ಅನ್ನ ದಾಸೋಹವು ನಡೆಯುತ್ತದೆ.

ಇನ್ನೋಂದು ಅಚ್ಚರಿ ಏನೆಂದರೆ ಬೆಟ್ಟದ ಮೇಲಿರುವ ದೇವಾಲಯದಲ್ಲಿರುವ ಶಿವನ ರೂಪವಾದ ಗಂಗಾಧರೇಶ್ವರನ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ. ಬೆಟ್ಟದ ಶಿವಲಿಂಗದ(ಗಂಗಾಧರೇಶ್ವರ) ಎದುರು ನಂದಿ ವಿಗ್ರಹವಿದೆ. ಎಡಕ್ಕೆ ಪಾರ್ವತಿ ದೇವಸ್ಥಾನ, ಮುಂಭಾಗದಲ್ಲಿ ಕೆಂಪೇಗೌಡರ ಖಜಾನೆ ಇದ್ದ ಗುಹೆಯಿದೆ.

ಅಲ್ಲಿಂದ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾ ಸ್ಥಂಭಗಳಿಂದ ನಿರ್ಮಾಣವಾದ ಕೆಂಪೇಗೌಡರ ಹಜಾರ, ಕಲ್ಯಾಣ ಮಂಟಪ, ಸಪ್ತ ಮಾತೃಕೆ, ನವಗ್ರಹ ವಿಗ್ರಹಗಳಿವೆ.
ಇದಲ್ಲದೆ ಕೆಂಪೆಗೌಡರು ಶಿವಗಂಗೆಯ ಗಂಗಾಧರೇಶ್ವರನ ಪರಮ ಭಕ್ತನಾಗಿದ್ದನು. ಆ ದೇಗುಲವನ್ನು ಅವರು ಒಂದು ನ್ಯಾಯಾಸ್ಥಾನ ಎಂದು ಪರಿಗಣಿಸಿದ ಬಗ್ಗೆ ಐತಿಹ್ಯಗಳಿವೆ. ಜತೆಗೆ ಅಲ್ಲಿರುವ ಕೆಂಪೇಗೌಡನ ಹಜಾರವಂತೂ ತುಂಬಾ ಪ್ರಸಿದ್ಧವಾದುದಾಗಿದೆ.

ಅಲ್ಲಿನ ಒಂದು ಕಂಬದ ಮೇಲಿರುವ ಉಬ್ಬುಶಿಲ್ಪವನ್ನು ಕೆಲವರು ಅದು ಕೆಂಪೇಗೌಡನದೇ ಚಿತ್ರ ಎಂದು ಇತಿಹಾಸಕಾರರು ಪ್ರಾಚ್ಯವಸ್ತು ಇಲಾಖೆಯವರು ಗುರುತಿಸಿದ್ದಾರೆ.ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳಿವೆ(ಬೆಟ್ಟದ ಎದುರಿಗೆ ಕೆನರಾ ಬ್ಯಾಂಕ್ ಇದೆ ಅದರ ಹಿಂಭಾಗದಲ್ಲಿ ಕಲ್ಯಾಣಿಯಿದೆ, ಅದರ ಸುತ್ತಲೂ ನೂರೆಂಟು ಲಿಂಗಗಳ ಸಂಕಿರ್ಣವಿದೆ).

ಸಮೀಪದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠವಿದೆ. ಮತ್ತೆ ಈ ಕ್ಷೇತ್ರದಲ್ಲಿ ಮೂರು ಕಾರ್ಯನಿರತವಾಗಿರುವ ಲಿಂಗಾಯತ ಮಠಗಳಿವೆ ಅವುಗಳೆಂದರೆ ಹೊನ್ನಮ್ಮ ಗವಿಮಠ, ಮೇಲನ ಗವಿಮಠ, ಲಕ್ಷ್ಮೀ ಪೀಠ ಈ ಶಿವಗಂಗೆ ಕ್ಷೇತ್ರದಲ್ಲಿ ಇವೆ.
ತಿಗಳ ಜನಾಂಗದ ಮಹಾಲಕ್ಷ್ಮೀ ಪೀಠವಿದೆ. ಪೂರ್ವಕ್ಕೆ ಬೃಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ ,ಹರಕೆ ಗಣಪ, ಪಾತಾಳಗಂಗೆಗೆ ಹೋಗುವ ಮಾರ್ಗದಲ್ಲಿ ಕ್ಷೇತ್ರದ ಅಧಿ ದೇವತೆ ಹೊನ್ನಾದೇವಿ ದೇವಸ್ಥಾನವಿದೆ.

ಬೆಟ್ಟದ ಬುಡದಲ್ಲಿ ಮನೆಗಳು ಅಂಗಡಿಗಳು ಹೋಟೆಲುಗಳಿವೆ ಮತ್ತು ಧರ್ಮಛತ್ರಗಳು ಸಮುದಾಯ ಭವನಗಳಿವೆ. ಎದುರಿಗೆ ಕೆನರಾ ಬ್ಯಾಂಕ್ ಇದೆ ಹಣದ ಅವಶ್ಯಕತೆ ಇದ್ದವರು ಎಟಿಎಂ ಮೊರೆ ಹೋಗಬಹುದು.

ಪ್ರತಿ ತಿಂಗಳ ಹುಣ್ಣಿಮೆ(ಪೌರ್ಣಮಿ)ಯ ಮುಂಜಾನೆ 4ಘಂಟೆಯ ನಂತರ ಬೆಟ್ಟವನ್ನು ಒಂದು ಸುತ್ತು ಪ್ರದಕ್ಷಿಣೆಯನ್ನು ಭಕ್ತಾದಿಗಳು ಹಾಕುವರು. ಇದಕ್ಕೆ ಯಾವುದೇ ಶುಲ್ಕಗಳಿಲ್ಲ ಹಾಗೂ ಯಾರಾದರೂ ಸಹ ಯಾವುದೇ ನೊಂದಣಿಯಿಲ್ಲದೆ ತಮ್ಮ ಇಚ್ಛೆಯನುಸಾರ ಪ್ರದಕ್ಷಿಣೆ ಹಾಕಬಹುದು, ಪ್ರದಕ್ಷಿಣೆ ಹಾಕುವ ಭಕ್ತಾದಿಗಳು ಸಂಘವನ್ನು ಸ್ಥಾಪಿಸಿ ಸದಸ್ಯತ್ವವನ್ನು ಮಾಡಿಕೊಂಡಿದ್ದಾರೆ. ಇಲ್ಲಿನ ಪ್ರಧಾನ ಅರ್ಚಕರು ಉತ್ತರ ಭಾರತದ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸವನ್ನು ಬಾಡಿಗೆ ಲೆಕ್ಕದಲ್ಲಿ ಕರೆದುಕೊಂಡು ಹೋಗುವರು.

ಶಿವಗಂಗೆ ಬೆಟ್ಟದ ವಿಶೇಷವೆಂದರೆ ಪೂರ್ವಕ್ಕೆ ವೃಷಭಾಕೃತಿ , ದಕ್ಷಿಣಕ್ಕೆ ಲಿಂಗಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿಯಂತೆ ಕಾಣುತ್ತದೆ. ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ಸಲ್ಲೇಖನ ವ್ರತ ಕೈಗೊಂಡು ಮುಕ್ತಿ ಪಡೆದ ಸಂಗತಿ ಕ್ರಿ.ಶ.1131 ರ ಶ್ರಾವಣ ಬೆಳಗೊಳದ ಶಾಸನದಲ್ಲಿ ಉಲ್ಲೇಖವಾಗಿದೆ. ಇನ್ನೊಂದು ಮಾಹಿತಿಯ ಪ್ರಕಾರ ಶಾಂತಲೆಯು ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆಯು ಮಾಡಿಕೊಂಡಳೆಂದು ಹೇಳಲಾಗುತ್ತಿದೆ ಶಾಂತಲೆ ಬಿದ್ದ ಬೆಟ್ಟದ ಒಂದು ಸ್ಥಳಕ್ಕೆ ಶಾಂತಲಾ ಡ್ರಾಪ್ ಎಂದು ಕರೆಯುವರು.

ಕಣಾದ ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದು ಬಂತು. ಅದನ್ನು ಕಂಡ ಮುನಿಗಳು “ಶಿವಗಂಗಾ” ಎಂದರು. ಅದೇ ಶಿವಗಂಗೆ ಕ್ಷೇತ್ರ ಆಗಿದೆ ಎಂದು ಸ್ಥಳ ಪುರಾಣ ಹೇಳುತ್ತದೆ.

ಬೆಂಗಳೂರು ನಿರ್ಮಾತೃ ಕೆಂಪೇಗೌಡ 1550 ರಲ್ಲಿ ಶಿವಗಂಗೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಮೇಲೆ. ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ಕಡಿದಾದ, ಎತ್ತರವಾದ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.
ದೇವಾಲಯದ ಹಜಾರಗಳನ್ನು ನಿರ್ಮಿಸಿದ್ದಾನೆ.
ಆ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಂತ್ರಜ್ಞಾನದ ವ್ಯವಸ್ಥೆಯೂ ಆಯಿತು.

ಅದು ಪವಿತ್ರ ಶೈವಕ್ಷೇತ್ರವಾಗುವಂತೆ ಶ್ರಮಿಸಿದ್ದು ಕೆಂಪೇಗೌಡ. ಅದು ಈಗ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಸಂಗಮವಾಗಿ ಹೆಸರಾಗಿದೆ.
ಹಲವು ಅಚ್ಚರಿಯ ಸಂಗತಿಗಳನ್ನು ಈ ಬೆಟ್ಟ ಹೊಂದಿದೆ. ಅದರಲ್ಲಿ ಒಂದು ಬೆಟ್ಟದ ತುದಿಯಲ್ಲಿ­ರುವ ಬೆಳ್ಳಿ ಗಂಟೆ. ಈ ಗಂಟೆ ಸಮರ್ಪಿಸಿದವರು ಕೆಂಪೇ ಗೌಡರು ಎಂದು ಹೇಳಲಾಗುತ್ತದೆ.
ಚಿನ್ನದ ಗಂಟೆಯು ಬೆಟ್ಟದ ಕಡಿದಾದ ಬೃಹತ್ ಬಂಡೆಯ ಕಲ್ಲಿಗೆ ಅಳವಡಿಸಲಾಗಿತ್ತು ಆದರೆ ಹೀಗೆ ಸುಮಾರು 25ವರ್ಷದ ಹಿಂದೆ ಕಳ್ಳರು ಕದ್ದಿದ್ದಾರೆ.

16 ನೇ ಶತಮಾನದಲ್ಲಿ ಗಂಗಾಧರೇಶ್ವರ ದೇವಾಲಯದ ನವರಂಗದ ಸಿಂಹದ್ವಾರ ನಿರ್ಮಿಸಲಾಯಿತು. ಇದೇ ಕಾರಣಕ್ಕೆ, ಈ ಬಾಗಿಲುವಾಡದ ಕೆಳಗಡೆ ಕೆಂಪೇಗೌಡ, ಆತನ ಪತ್ನಿ, ಪುತ್ರ ಪುತ್ರಿಯರ ಉಬ್ಬು ಶಿಲೆಗಳಿವೆ. ಶಿವಗಂಗೆ ಬೆಟ್ಟದ ಬುಡದಲ್ಲಿ ರಾಯಗೋಪುರ  ಕೆಂಪೇಗೌಡ ಗೋಪುರ  ಮತ್ತು ಬೆಟ್ಟದ ಮೇಲೆ “ಕೆಂಪೇಗೌಡ ಹಜಾರ” ನಿರ್ಮಾಣವಾಗಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here