ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ದ 204 ಕೋಟಿ ರೂಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ತನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆಂದು ಡಿ.ಕೆ.ಶಿವಕುಮಾರ್ ಅವರು ಕನಕಪುರದ ಸೀನಿಯರ್​ ಸಿವಿಲ್​ ಜಡ್ಜ್​ ಹಾಗೂ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಯತ್ನಾಳ್ ಅವರ ವಿರುದ್ದ ಮಾನನಷ್ಟ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಡಿಕೆಶಿ ಅವರ ಅರ್ಜಿ ಅಂಗೀಕಾರ ಮಾಡಿದ್ದಾರೆ ನ್ಯಾಯಾಧೀಶರು. ಅಲ್ಲದೆ ಬಸನಗೌಡ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಬರುವ ಸೆಪ್ಟೆಂಬರ್​ 18ಕ್ಕೆ ಈ ದೂರಿಗೆ ಸಂಬಂಧಿಸಿದ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಜೂನ್ 23 ರಂದು ಬಸನಗೌಡ ಪಾಟೀಲ್ ಅವರು ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್​ ಅವರು ತಮ್ಮ ವಿರುದ್ಧ ದಾಖಲಾಗಿರುವ ಐಟಿ, ಇಡಿ ಪ್ರಕರಣಗಳಿಂದ ಬಿಡುಗಡೆ ಹೊಂದಲು, ತನಗೆ ಸಹಾಯ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರದ ಸಚಿವರುಗಳ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಹೇಳಿಕೆಯನ್ನು ನೀಡಿದ್ದರು. ಹಾಗೇನಾದರೂ ಪ್ರಕರಣಗಳಿಂದ ಮುಕ್ತಿ ನೀಡಿದರೆ, ತಾನು ಬಿಜೆಪಿ ಸರ್ಕಾರ ರಚನೆಗೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲವೆಂದು ಹೇಳಿದ್ದಾರೆ ಎಂಬುದಾಗಿ ಯತ್ನಾಳ್ ಡಿಕೆಶಿ ಅವರ ಬಗ್ಗೆ ಹೇಳಿದ್ದರು.

ಯತ್ನಾಳ್​ ಅವರು ನೀಡಿರುವ ಈ ಹೇಳಿಕೆಗೆ ಎಲೆಕ್ಟ್ರಾನಿಕ್​ ಮತ್ತು ಪ್ರಿಂಟ್ ಮೀಡಿಯಾಗಳಲ್ಲಿ ಪ್ರಸಾರವಾಗಿದ್ದು, ಅವರು ನೀಡಿದ ಹೇಳಿಕೆ ತನ್ನ ವರ್ಚಸ್ಸಿಗೆ ಹಾಗೂ ಪ್ರಾಮಾಣಿಕತೆಗೆ ಧಕ್ಕೆಯುಂಟು ಮಾಡಿದ್ದು, ಅವರು ಮಾಡಿರುವ ಈ ಆರೋಪ ಆಧಾರ ರಹಿತವಾಗಿರುವುದು ಮಾತ್ರವಲ್ಲದೇ ಇದು ಬೇಜವಾಬ್ದಾರಿಯಿಂದ ನೀಡಿರುವ ಹೇಳಿಕೆಯಾಗಿದ್ದು ನನಗೆ ಮಾನ ಹಾನಿಯುಂಟು ಮಾಡಿದೆಯೆಂದು ಡಿ.ಕೆ. ಶಿವಕುಮಾರ್​ ಅವರು ತಾವು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here