ರಸ್ತೆಯಲ್ಲಿ ಸಂಚರಿಸುವಾಗ ಅಕ್ರಮ ಫ್ಲೆಕ್ಸ್ ಒಂದು ಬಿದ್ದ‌ ಕಾರಣ ರಸ್ತೆಯಲ್ಲಿ ಟೆಕ್ಕಿಯೊಬ್ಬರಿಗೆ ಅಪಘಾತ ವಾಗಿ ಮೃತರಾದ ವಿಷಯ ಈಗಾಗಲೇ ದೇಶಾದ್ಯಂತ ಸುದ್ದಿಯಾಗಿದೆ‌. ಚೆನ್ನೈನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಶುಭಶ್ರೀ ಸೆಪ್ಟೆಂಬರ್ 12 ರಂದು ಆಫೀಸಿನಿಂದ ಮನೆಗೆ ಬರುವಾಗ ರಸ್ತೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಒಂದು ಅವರ ಮೇಲೆ ಬಿದ್ದ ಪರಿಣಾಮ ತನ್ನ ದ್ವಿಚಕ್ರವಾಹನದ ಮೇಲಿಂದ ಆಯತಪ್ಪಿ ಬಿದ್ದು, ಹಿಂದೆ ವೇಗವಾಗಿ ಬರುತ್ತಿದ್ದ ಟ್ರಕ್ಕೊಂದು ಆಕೆಯ ಮೇಲೆ ಹರಿದ ಪರಿಣಾಮ ಆಕೆ ಸಾವನ್ನಪ್ಪಿದ್ದಳು‌. ಆಕೆಯ ಸಾವು ಅವರ ಮನೆಯ ವಾತಾವರಣವನ್ನು ಕಂಗೆಡಿಸಿರುವುದು ಮಾತ್ರವಲ್ಲದೆ , ತಂದೆ ತಾಯಿ ಇಬ್ಬರೂ ಒಬ್ಬಳೇ ಮಗಳನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಸದಾ ಚಟುವಟಿಕೆಯಿಂದ ಇರುತ್ತಿದ್ದ ಶುಭಶ್ರೀ ತನ್ನ ನೆರೆ ಹೊರೆಯವರ ಮನಸ್ಸನ್ನು ಮಾತ್ರವಲ್ಲದೆ, ತಾನು ಕೆಲಸ ಮಾಡುವ ಕಡೆ ಕೂಡಾ ಎಲ್ಲರ ಪ್ರೀತಿ ಪಾತ್ರಳಾಗಿದ್ದಳು. ಬಹಳ ಲವಲವಿಕೆಯಿಂದ ಇರುತ್ತಿದ್ದ ಆಕೆಯ ತಂದೆ ತಾಯಿಗೆ ಸೆಪ್ಟೆಂಬರ್ 12 ರಂದು ಎಂದಿನಂತೆ ಆಫೀಸಿಗೆ ಹೋದ ಮಗಳು ಮರಳಿ ಬಾರದ ಲೋಕಕ್ಕೆ ಹೋಗಿ ಬಿಡುವಳೆಂದ ಕಲ್ಪನೆ ಕೂಡಾ ಇರಲಿಲ್ಲ. ಮನೆಯಲ್ಲಿ ಸದಾ ಮಗಳ ನಗುವನ್ನೇ ಕಂಡಿದ್ದ ಅವರಿಗೆ ಮಗಳ ಸಾವು ತುಂಬಲಾರದ ನಷ್ಟವನ್ನು ನೀಡಿ ಹೋಗಿದೆ. ಮಗಳ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಆಕೆಯ ತಂದೆಯ ದುಃಖ ಎಲ್ಲರ ಮನಸ್ಸನ್ನು ಕದಲಿಸುವಂತೆ ಇತ್ತು.

ಮಗಳೇ, ಈ ಬೆಂಕಿಯುರಿಯನ್ನು ಹೇಗೆ ಸಹಿಸುತ್ತೀಯಾ?’ ಎಂದು ಶುಭಶ್ರಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಚಿತೆಯಲ್ಲಿ ಉರಿಯುತ್ತಿದ್ದ ಶುಭಶ್ರಿಯ ಶವವನ್ನು ಕಂಡು ತಂದೆ ರವಿ ಅವರು ಕಣ್ಣೀರಿಡುತ್ತಾ ಹೇಳುತ್ತಿದ್ದ ಮಾತು ನೆರೆದಿದ್ದವರನ್ನೂ ಭಾವುಕರನ್ನಾಗಿಸಿತ್ತು‌. ಇಂತಹ ಒಂದು ಸಾವಿಗೆ ಕಾರಣವಾದ ಸರ್ಕಾರವನ್ನು ಪ್ರಶ್ನಿಸುವ ಜಾಗೃತಿ ಜನರಲ್ಲಿ ಮೂಡಬೇಕಾಗಿದೆ‌. ಅಂತಹ ಪರಿಸ್ಥಿತಿ ಇನ್ನಾವ ತಂದೆಗೂ ಬರದಂತೆ ಇನ್ನಾದರೂ ಸರ್ಕಾರವು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here