ಲೋಕಸಭಾ ಚುನಾವಣೆಗೂ ಮುನ್ನ ಎಚ್. ವಿಶ್ವನಾಥ್ ಅವರ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ.ಈಗ ಈ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಿರುಗೇಟು ನೀಡಿ ತಮಗೆ ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಜೆಡಿಎಸ್ ನ್ ವಿಶ್ವನಾಥ್ ಅವರು ಮಾತನಾಡುತ್ತಾ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಈಗ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ “ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ.

ಮೊದಲು ಜಿ.ಟಿ.ದೇವೇಗೌಡ,ಈಗ ವಿಶ್ವನಾಥ್… ಮುಂದೆ ಯಾರು ಗೊತ್ತಿಲ್ಲ.ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು” ಎಂದು ಸಿದ್ದು ಸಲಹೆ ನೀಡಿದ್ದಾರೆ.ಇನ್ನೊಂದು ಟ್ವೀಟ್ ನಲ್ಲಿ “ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು.ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ.” ಎಂದು ಸಿದ್ದರಾಮಯ್ಯ ವಿಶ್ವನಾಥ್ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈಗ ಉಭಯ ಪಕ್ಷಗಳು ಬಹಿರಂಗವಾಗಿ ಮಾತನಾಡುತ್ತಿರುವುದು ಈಗ ಸರ್ಕಾರದ ಭವಿಷ್ಯವನ್ನು ಮತ್ತೆ ತೂಗೊಯ್ಯಾಲೆಯಲ್ಲಿಟ್ಟಿದೆ. ಜೆಡಿಎಸ್ ನಾಯಕ ವಿಶ್ವನಾಥ್ ಅವರು ಮೈಸೂರಿನಲ್ಲಿ ಮಾತನಾಡುತ್ತಾ “ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿ ಏನು ಮಾಡಿದ್ದಾರೆ? ಕೆಲವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಅಂತಾ ಚಮಚಾಗಿರಿ ಮಾಡುತ್ತಿದ್ದಾರೆ. ದೇವರಾಜ ಅರಸು ಅವರನ್ನು ಜನ ಈಗಲೂ ನೆನೆಯುತ್ತಾರೆ. ಯಾಕೆಂದರೆ ಅವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಅವರ ರೀತಿ ಆಡಳಿತ ಕೊಟ್ಟರಾ?. “ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಆಡಳಿತ ಇತ್ತು. 5 ವರ್ಷ ಪೂರೈಸಿದ ಸಿಎಂ ನಾನು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ 130 ಇದ್ದ ಸಂಖ್ಯಾಬಲ 78 ಕ್ಕೆ ಏಕೆ ಕುಸಿಯಿತು,” ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೇ ಮುಂದುವರೆದು “ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಇನ್ನೂ ನಾಲ್ಕು ವರ್ಷ ಎಚ್​​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್​​ಗೆ ಕರೆತಂದದ್ದು ನಾವು. ಆದರೆ ಅವರು ಮಾಡಿದ್ದೇನು? ನಮ್ಮಂತಹ ಶ್ರೀಸಾಮಾನ್ಯರು ಅವರ ಕಣ್ಣಿಗೆ ಕಾಣಲ್ಲ ಬಿಡಿ, ಎಂದು ಹೇಳಿದ್ದರು.ಈ ಹೇಳಿಕೆ ಈಗ ಕಾಂಗ್ರೆಸ್ ನಾಯಕರ ಕೆಂಗಣ್ಣು ಕೆಂಪಾಗಿಸಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here