ರಾಜ್ಯದಲ್ಲಿ ಉಂಟಾಗಿರುವ ಭಾರೀ ಮಳೆ ಹಾಗೂ ಅದರಿಂದ ಎದುರಾಗಿರುವ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ ಹಾಗೂ ಸುರೇಶ್ ಕುಮಾರ್ ಅವರಿಗೆ ಸರಣಿ ಟ್ವೀಟ್ ಗಳ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.‌ ಅವರು ತಮ್ಮ ಟ್ವೀಟ್ ಗಳಲ್ಲಿ, ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಕಾರಣದಿಂದಾಗಿಯೇ ಈ ಬಾರಿಯ ಅತಿವೃಷ್ಟಿಗೆ ರಾಜ್ಯಸರ್ಕಾರ ಕೈಕಾಲು ಬಿಡುತ್ತಿದೆ. ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದೆ, ಎಂದಿನಂತೆ ಸರ್ಕಾರದಿಂದ ಉತ್ತರ ಇಲ್ಲ.

ಈಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ.
ಕಳೆದ ವರ್ಷದ ಪ್ರವಾಹದಿಂದ ಹಾನಿಗೊಳಗಾದ ರಸ್ತೆ,ಸೇತುವೆ, ಸರ್ಕಾರಿ ಕಟ್ಟಡಗಳೆಷ್ಟು?
ಅವುಗಳಲ್ಲಿ ಎಷ್ಟು ಪೂರ್ಣವಾಗಿ ದುರಸ್ತಿಗೊಂಡಿವೆ? ಖರ್ಚಾಗಿರುವ ಹಣ ಎಷ್ಟು? ಬಾಕಿ ಉಳಿದಿರುವ ಕಾಮಗಾರಿಗಳೆಷ್ಟು?ಈಗಲಾದರೂ ಈ ವಿವರ ನೀಡುವಿರಾ ಗೋವಿಂದ ಕಾರಜೋಳ ಅವರೇ?
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ನೀಡಿದ ಪರಿಹಾರ ಎಷ್ಟು? ಕಟ್ಟಿದ ಹೊಸ ಮನೆಗಳೆಷ್ಟು? ಪ್ರತಿಬಾರಿ ನೆರೆ ನೀರಿನಲ್ಲಿ ಮುಳುಗುವ ಮನೆಗಳೆಷ್ಟು? ಎಷ್ಟು ಕುಟುಂಬಗಳು ಶೆಡ್‌ನಲ್ಲಿವೆ?
ಎಷ್ಟು ಕುಟುಂಬಗಳು ಬಾಡಿಗೆ ಮನೆಯಲ್ಲಿವೆ?
ಈ‌ ಮಾಹಿತಿ ನೀಡುವಿರಾ ಶ್ರೀ ವಿ. ಸೋಮಣ್ಣ ಅವರೇ?

ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಅಂಗನವಾಡಿ ಕಟ್ಟಡಗಳೆಷ್ಟು?
ಅವುಗಳಲ್ಲಿ ದುರಸ್ತಿವಾಗಿರುವುದೆಷ್ಟು? ಪುನರ್ ನಿರ್ಮಾಣವಾಗಿದ್ದೆಷ್ಟು? ಇವುಗಳ ದುರಸ್ತಿ-ಪುನರ್ ನಿರ್ಮಾಣಕ್ಕೆ ಖರ್ಚಾದ ಹಣ ಎಷ್ಟು?
ದಯವಿಟ್ಟು ವಿವರ ನೀಡುವಿರಾ? ಶಶಿಕಲಾ ಜೊಲ್ಲೆ ಅವರೇ? ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು? ಎಷ್ಟು ಕಟ್ಟಡಗಳನ್ನು ದುರಸ್ತಿ ಪಡಿಸಲಾಗಿದೆ ಮತ್ತು ಪುನರ್ ನಿರ್ಮಿಸಿಗೊಳ್ಳಲಾಗಿದೆ? ದುರಸ್ತಿಗೆ ಬಾಕಿ ಉಳಿದಿರುವುದು ಎಷ್ಟು? ಇದಕ್ಕಾಗಿ ಖರ್ಚಾದ ಹಣ ಎಷ್ಟು? ಈಗಲಾದರೂ ವಿವರ ನೀಡಬಹುದೇ, ಸುರೇಶ್ ಅವರೇ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here