ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಪರಿಹಾರ ಕೊಡಿ ಅಂತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎದುರು ಗಟ್ಟಿ ದನಿಯಲ್ಲಿ ಮಾತನಾಡುವಷ್ಟು ಧೈರ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಲ್ಲ. ಅದಕ್ಕಾಗಿ ದೆಹಲಿಗೆ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲಿ, ನಾನೇ ಕೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರೆಗಿನ ಅನುಭವದ ಪ್ರಕಾರ ರಾಜ್ಯದ ಹಿತಾಸಕ್ತಿ ರಕ್ಷಣೆಯ ಪರ ಗಟ್ಟಿಯಾಗಿ ನಿಂತು ನರೇಂದ್ರ ಮೋದಿ ಅವರ ಜೊತೆ ಮಾತನಾಡಿ ಹೆಚ್ಚು ಪರಿಹಾರ ಪಡೆಯುವ ಶಕ್ತಿ ಯಡಿಯೂರಪ್ಪ ಅವರಿಗೆ ಇಲ್ಲವೇ, ಸಚಿವರಿಗಿಲ್ಲವೇ ಇದಕ್ಕಾಗಿ, ಹೆಚ್ಚಿನ ಪರಿಹಾರ‌ಕೋರಲು ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ‌ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದ್ದಾರೆ.ಮೋದಿ ಅವರ ಜೊತೆಗಿನ ರಾಜ್ಯದ ಸಚಿವರವ ಸಭೆ ಕಾಟಾಚಾರದ ಕಸರತ್ತು ಆಗಬಾರದು.

ಯಡಿಯೂರಪ್ಪ ಅವರು ತಕ್ಷಣ ಅಧಿಕಾರಿಗಳ ತಂಡವನ್ನು ಅತಿವೃಷ್ಟಿ ಪೀಡಿತ ಪ್ರದೇಶಕ್ಕೆ ಕಳಿಸಿ ನಷ್ಟದ ಅಧ್ಯಯನ ಮಾಡಿಸಿ ಮೋದಿ ಅವರಿಗೆ ಕಳಿಸಿಕೊಟ್ಟು ನ್ಯಾಯಯುತ ಪರಿಹಾರ ಪಡೆಯುವ ಪ್ರಯತ್ನ ಮಾಡಬೇಕು’ ಎಂದಿದ್ದಾರೆ.ರಾಜ್ಯದ‌‌ ಅತಿವೃಷ್ಟಿ ಪರಿಸ್ಥಿತಿಯ ಸಮೀಕ್ಷೆಗೆ ಈ ಬಾರಿಯಾದರೂ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಬೇಕು ಮತ್ತು ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ತಕ್ಷಣ ಕಳಿಸಬೇಕು. ಇಂದಿನ ಸಭೆಯಲ್ಲಿ ರಾಜ್ಯದ ಸಚಿವರು ಪ್ರಧಾನಿಯವರಲ್ಲಿ ಈ ಒತ್ತಾಯ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

15ನೇ ಹಣಕಾಸು ಆಯೋಗ ರಾಜ್ಯಕ್ಕೆ ರೂ.5495 ಕೋಟಿ ವಿಶೇಷ ಅನುದಾನದ ಶಿಫಾರಸು ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಡ್ಡಗಾಲು ಹಾಕಿ ಆ ಅನುದಾನ ರಾಜ್ಯಕ್ಕೆ ಸಿಗದಂತೆ ಮಾಡಿದ್ದಾರೆ. ಈ ಅನ್ಯಾಯವನ್ನು ಕೂಡಾ ರಾಜ್ಯದ ಸಚಿವರು ಇಂದಿನ‌ ಸಭೆಯಲ್ಲಿ ಮೋದಿ ಅವರ ಗಮನಕ್ಕೆ ತರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಪಿಎಂ ಕಿಸಾನ್ ಯೋಜನೆಗೆ ರಾಜ್ಯ ಸರ್ಕಾರ ಗುರುತಿಸಿರುವ ರೈತ ಫಲಾನುಭವಿಗಳ ಸಂಖ್ಯೆ ಕೇವಲ 52 ಲಕ್ಷ ಮಾತ್ರ.

ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರವೇ ರಾಜ್ಯದಲ್ಲಿರುವ ಒಟ್ಟು ರೈತ ಕುಟುಂಬಗಳ ಸಂಖ್ಯೆ 82 ಲಕ್ಷ. ಈ ಮಾಹಿತಿಯನ್ನು ಬಚ್ಚಿಟ್ಟು ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡಿದೆ ಎಂದು ಹೇಳಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಘೋಷಿಸಿರುವ ಒಂದು ಲಕ್ಷ ಕೋಟಿ ರೂಪಾಯಿ ಕೃಷಿ ಪ್ಯಾಕೇಜ್, ಕಳೆದ ಮೇ ತಿಂಗಳಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಘೋಷಿಸಿದ್ದ ಕೋವಿಡ್ ಪರಿಹಾರ ಯೋಜನೆಯ ಭಾಗವಾಗಿದೆ. ಅದನ್ನೇ ಹೊಸ ಪ್ಯಾಕೇಜ್ ಎಂದು ಬಿಂಬಿಸಿ ಪ್ರಧಾನಿಯವರು ರೈತರ ದಾರಿ ತಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕಳೆದ ವರ್ಷ ಮುಖ್ಯಮಂತ್ರಿ ಅವರು ಅತಿವೃಷ್ಟಿಯ ವರದಿ ಕಳಿಸಿರುವುದು ಆಗಸ್ಟ್ ವರೆಗಿನ ಹಾನಿ ಬಗ್ಗೆ ಮಾತ್ರ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅತಿವೃಷ್ಟಿ ವರದಿ ಕಳಿಸದೆ ಸರ್ಕಾರ ನೊಂದ ಜನತೆಗೆ ಮೋಸ ಮಾಡಿದೆ. ‌ಈ ಬಾರಿ ಪರಿಹಾರವನ್ನು ಕೇಳುವಾಗ ಇದನ್ನು ಮೋದಿ ಅವರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾರೆ.ಕಳೆದ ವರ್ಷದ ಅತಿವೃಷ್ಟಿಯ ಅಂದಾಜು ನಷ್ಟ 1,00,000 ಕೋಟಿ ರೂ.
ರಾಜ್ಯ ಸರ್ಕಾರದ ವರದಿ ಪ್ರಕಾರ ನಷ್ಟ 50,000 ಕೋಟಿ ರೂ.
ಪರಿಹಾರ ಕೇಳಿದ್ದು 35,000 ಕೋಟಿ ರೂ.
ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 1860 ಕೋಟಿ ರೂ. ಮಾತ್ರ.
ರಾಜ್ಯದ ಸಚಿವರು ಹಳೆಯ ಬಾಕಿಯನ್ನೂ ಕೇಳುವ ಧೈರ್ಯ ಮಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here