ವಿಧಾನ ಮಂಡಲದ ಅಧಿವೇಶನದ ಕಾರ್ಯ ಕಲಾಪವನ್ನು ನೇರ ಪ್ರಸಾರ ಮಾಡದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಒಳಗೆ ಮಾದ್ಯಮಗಳ ಕ್ಯಾಮೆರಾಗಳನ್ನು ನಿಷೇಧ ಮಾಡಿದ್ದಾರೆ. ಸರ್ಕಾರದ ಈ ನಿರ್ಣಯವನ್ನು ಖಂಡಿಸಿರುವ ಕಾಂಗ್ರೆಸ್ ಶಾಸಕಾಂಗದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಟೀಕಿಸಿದ್ದು, ಅದರ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ತಮ್ಮ ಆಕ್ರೋಶ, ಅಸಮಾಧಾನವನ್ನು ಹೊರ ಹಾಕಿದ್ದು, ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತಾ, ಹಲವು ವಿಷಯಗಳನ್ನು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಎನ್ನುವುದಕ್ಕೆ ವಿಧಾನಮಂಡಲದ ಕಲಾಪದ ಪ್ರತ್ಯಕ್ಷ ವರದಿ‌ ಮಾಡದಂತೆ‌ ಟಿವಿ ಚಾನೆಲ್‌ಗಳ ಮೇಲೆ ಹೇರಿರುವ ನಿರ್ಬಂಧವೇ ಸಾಕ್ಷಿ. ವಿಧಾನಮಂಡಲದ ಕಲಾಪದ ವರದಿಗೆ ಸರ್ಕಾರಿ ಚಾನೆಲ್ ಚಂದನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ಋಣದಲ್ಲಿರುವ ಆ ಚಾನೆಲ್ ವಿರೋಧ ಪಕ್ಷಗಳ ಸದಸ್ಯರ ಮುಖಗಳನ್ನು ಮರೆಮಾಚಿ ಕೇವಲ ಸಭಾಧ್ಯಕ್ಷರ ಮುಖಾರವಿಂದ ತೋರಿಸಿ ಭಜನೆ ಮಾಡುತ್ತಿರುವುದು ವಿಷಾದನೀಯ. ಸದನದೊಳಗೆ ತಮ್ಮ ಸದಸ್ಯರು ನೀಲಿಚಿತ್ರ ನೋಡುತ್ತಾರೆಂಬ ಭಯ ಬಿಜೆಪಿಗೆ ಇದ್ದರೆ ಅವರಿಗೆ ಬುದ್ದಿ ಹೇಳಬೇಕೇ ಹೊರತು, ಅದಕ್ಕಾಗಿ ಟಿವಿ ಚಾನೆಲ್‌ನವರ ಕ್ಯಾಮೆರಾ ನಿರ್ಬಂಧಿಸುವುದಲ್ಲ.

 

 

ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಟಿವಿ ಚಾನೆಲ್‌ಗಳ ಕ್ಯಾಮೆರಾಗಳನ್ನು ನಿರ್ಬಂಧಿಸುವಂತೆ ಕೆಲವರು ಒತ್ತಾಯಿಸಿದ್ದರು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ನಾನು ಒಪ್ಪಿರಲಿಲ್ಲ. ಟಿವಿ ಚಾನೆಲ್‌ಗಳ ಕ್ಯಾಮೆರಾಗಳಿಗೆ ಏಕಪಕ್ಷೀಯವಾಗಿ ನಿರ್ಬಂಧ ಹೇರಿರುವ ಸಭಾಧ್ಯಕ್ಷರ ಮಾಧ್ಯಮ ವಿರೋಧಿ ನಡವಳಿಕೆಯ ವಿರುದ್ಧ ಮಾಧ್ಯಮ ಮಿತ್ರರು ನಡೆಸುವ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಅವರು ಮಾದ್ಯಮ ವಿರೋಧಿ ಸರ್ಕಾರ ಎಂಬ ಹ್ಯಾಷ್ ಟ್ಯಾಗ್ ಹಾಕಿ ಬರೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here