ದೇಶದ್ರೋಹದ ಆರೋಪವನ್ನು ಹೊತ್ತಿರುವ ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಗೆ ಇಂದು ರಾಜ್ಯದ ಮಾಜಿ ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯನವರು ಭೇಟಿ ನೀಡುತ್ತಿರುವ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಸಿದ್ಧರಾಮಯ್ಯನವರ ಈ ನಿರ್ಧಾರದ ಕುರಿತಾಗಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಇದು ಚರ್ಚೆಗೆ ಕೂಡಾ ಕಾರಣವಾಗಿರುವುದು ಸುಳ್ಳಲ್ಲ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಾ ಇದೇ ಶಾಹೀನ್ ಶಿಕ್ಷಣ ಸಂಸ್ಥೆಯ ಶಾಲಾ ಸಿಬ್ಬಂದಿಯು ತಮ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಒಂದು ನಾಟಕವನ್ನು ಶಾಲಾ ಮಕ್ಕಳಿಂದ ಮಾಡಿಸಿ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

ಆ ನಾಟಕದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡಲಾಗಿತ್ತು. ಈ ಶಾಲಾ ಕಾರ್ಯಕ್ರಮದಲ್ಲಿ ನಡೆದ ನಾಟಕದ ವಿಡಿಯೋ ವೈರಲ್ ಆಗಿತ್ತು ಕೂಡಾ. ಇದಾದ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಜನವರಿ 26 ರಂದು ನ್ಯೂ ಟೌನ್ ನಲ್ಲಿ ಶಾಲೆಯ ವಿರುಧ್ಧ ದೂರನ್ನು ದಾಖಲಿಸಿದ್ದರು. ಅದಾದ ಬಳಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾಬಾನು ಮತ್ತು ನಾಟಕ ಮಾಡಿದ ವಿದ್ಯಾರ್ಥಿನಿ ತಾಯಿ ನಶೀಮಾ ಬಾನು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಈ ಪ್ರಕರಣ ರಾಜಕೀಯ ಸ್ವರೂಪ ಪಡೆದ ಮೇಲೆ, ಅನೇಕ ನಾಯಕರು ಶಾಲೆಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಅದೇ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಕೂಡಾ ಇಂದು ವಿಶೇಷ ವಿಮಾನದ ಮೂಲಕ ಬೀದರ್ ಗೆ ಆಗಮಿಸಿ, ಶಾಲೆಗೆ ತೆರಳಿ ಅಲ್ಲಿ ಸುದ್ದಿ ಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ ಅವರೊಂದಿಗೆ ಕಾಂಗ್ರೆಸ್ ನ ಸ್ಥಳೀಯ ನಾಯಕರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here