ಕಾಂಗ್ರೆಸ್ ಅಧ್ಯಕ್ಷೆಯಾದಂತಹ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ತೆರಳಿದ್ದ ಮಾಜಿ ಸಚಿವ ಕಾಂಗ್ರೆಸ್ ನಾಯಕ‌ ಡಿ.ಕೆ.ಶಿವಕುಮಾರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗದೆ ವಾಪಸಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವು ತನ್ನ ಕೈ ತಪ್ಪಿಹೋಗಬಹುದೆಂದ ಆತಂಕದಿಂದ ಡಿಕೆಶಿ ಅವರು ಎಐಸಿಸಿ ನಾಯಕರಾದ ಅಹ್ಮದ್ ಪಟೇಲ್ ಮತ್ತು ಕೆ.ಸಿ. ವೇಣುಗೋಪಾಲ್ ಅವರ ಮುಖಾಂತರ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತಾ ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ಇದ್ದರು‌. ಆದರೆ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ವಾಪಸಾಗಿದ್ದಾರೆ.

ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾದ ಕಾರಣ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಆಗ ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆ ಹಾಗೂ ಮಾತುಕತೆ ನಡೆದು ಡಿಕೆಶಿ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನುವಂತೆ ಇತ್ತು. ಆದರೆ ಸಿದ್ಧರಾಮಯ್ಯನವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅಥವಾ ಲಿಂಗಾಯತ ಸಮುದಾಯಕ್ಕೆ ಸೇರಿದ ಎಂ.ಬಿ.ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಡಿಕೆಶಿ ದೆಹಲಿಗೆ ತೆರಳಿದ್ದರು. ಆದರೆ ಐದು ದಿನಗಳ ಪ್ರಯತ್ನದ ನಂತರವೂ ಕೂಡಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಭೇಟಿ ಸಾಧ್ಯವಾಗದ ಕಾರಣ ಅವರು ವಾಪಸ್ಸು ಬಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದ್ದು, ಡಿಕೆಶಿ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದೋ, ಇಲ್ಲವೋ ಎಂಬುದು ಸದ್ಯಕ್ಕೆ ಒಂದು ಉತ್ತರವಿಲ್ಲದ ಪ್ರಶ್ನೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here