ರಾಷ್ಟ್ರೀಯ ಕಾಂಗ್ರೆಸ್ ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸಂಕಷ್ಟ ಎದುರಾಗಿದೆ. ಸರ್ಕಾರವು ಅವ್ಯವಹಾರ ಹಾಗೂ ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಗಾಂಧಿ ಕುಟುಂಬಕ್ಕೆ ಸಂಬಂಧ ಪಟ್ಟಿರುವಂತಹ ಮೂರು ಟ್ರಸ್ಟ್​ಗಳ ತನಿಖೆ ನಿರ್ವಹಣೆಯನ್ನು ಮಾಡಲು ಕೇಂದ್ರ ಗೃಹ ಇಲಾಖೆ ಕಮಿಟಿಯೊಂದನ್ನು ನೇಮಕ ಮಾಡಿದೆ. ಈ ಕಮಿಟಿಯಲ್ಲಿ ಸಿಬಿಐ ನಿರ್ದೇಶಕರು, ಜಾರಿ ನಿರ್ದೇಶನದ ವಿಶೇಷ ನಿರ್ದೇಶಕರು ಕೂಡಾ ಇರುವುದು ವಿಶೇಷವಾಗಿದೆ. ಈ ವಿಷಯವನ್ನು ಗೃಹ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ರಾಜೀವ್​ ಗಾಂಧಿ ಫೌಂಡೇಷನ್, ರಾಜೀವ್​ ಗಾಂಧಿ ಚಾರಿಟಬಲ್ ಟ್ರಸ್ಟ್​ ಹಾಗೂ ಇಂದಿರಾ ಗಾಂಧಿ ಮೆಮೊರಿಯಲ್​ ಟ್ರಸ್ಟ್​​ ವಿರುದ್ಧ ಮನಿ ಲಾಂಡರಿಂಗ್​ ಆ್ಯಕ್ಟ್ ನಿಯಮ ಹಾಗೂ ಆದಾಯ ತೆರಿಗೆ ವಂಚನೆ ಆರೋಪಗಳು ಕೇಳಿ ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುವುದು ಎನ್ನಲಾಗಿದೆ. 1991 ರಲ್ಲಿ ಆರಂಭವಾದ ರಾಜೀವ್ ಗಾಂಧಿ ಟ್ರಸ್ಟ್ ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ , ಮಾಜಿ ಸಚಿವ ಚಿದಂಬರಂ ಅವರು ಟ್ರಸ್ಟಿಗಳಾಗಿದ್ದರು. ಸೋನಿಯಾ ಗಾಂಧಿಯವರು ಮೂರು ಟ್ರಸ್ಟ್ ಗಳ ಚೇರ್ ಪರ್ಸನ್ ಆಗಿದ್ದಾರೆ.

ಬಿಜೆಪಿ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ಕಳೆದ ಕೆಲವು ದಿನಗಳಿಂದಲೂ ಈ‌ ಟ್ರಸ್ಟ್ ಗಳ ವಿರುದ್ಧ ಆರೋಪಗಳನ್ನು ಮಾಡಿದ್ದರು ಹಾಗೂ ಈ ಫೌಂಡೇಶನ್ ಗೆ ವಿವಿಧ ಸಂದರ್ಭದಲ್ಲಿ ಬಂದಿರುವ ಹಣ ಹಾಗೂ ನೀಡಿದ ಸಂಸ್ಥೆಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದ್ದರು. ಅಲ್ಲದೇ ಕೆಲವರು ರಾಜೀವ್ ಗಾಂಧಿ ಟ್ರಸ್ಟ್ ಗೆ ಚೀನಾ ಕೂಡಾ ಹಣ ನೀಡಿದೆ ಎಂಬ ಆರೋಪವನ್ನು ಕೂಡಾ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಕೇಂದ್ರ ಗೃಹ ಇಲಾಖೆ ಇಂದು ತನಿಖೆಗೆ ಆದೇಶವನ್ನು ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here