ಕರ್ನಾಟಕದಲ್ಲಿ ಈ ಸಲದ ಬೇಸಿಗೆ ಹತಾಶೆಯ ಪರಮಾವಧಿ ದಾಟಿದೆ. ಅದಕ್ಕೆ ಮುಖ್ಯ ಕಾರಣ ಎಲ್ಲೆಲ್ಲೂ ನೀರಿಗಾಗಿ ಎದ್ದಿರುವ ಹಾಹಾಕಾರ. ಕುಡಿಯಲು ನೀರಿಲ್ಲದೆ ಜನರು ಪಡುತ್ತಿರುವ ಕಷ್ಟ ಮಾತ್ರ ಅಷ್ಟಿಷ್ಟಲ್ಲ. ಬೇಸಿಗೆಯ ಬಿಸಿಗೆ ಜಲ ಮೂಲಗಳು ಬತ್ತಿ ಹೋಗಿವೆ. ಇದರ ಪರಿಣಾಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕೂಡಾ ಹೊರತಾಗಿಲ್ಲ ಎಂಬಂತೆ ಇತಿಹಾಸದಲ್ಲೇ ಮೊದಲ ಬಾರಿಗೆ ಧರ್ಮಸ್ಥಳದಲ್ಲಿ ಕೂಡಾ ನೀರಿನ ಅಭಾವ ತಲೆದೋರಿದೆ. ಅಲ್ಲಿಗೆ ಕೆಲಕಾಲ ಪ್ರವಾಸಿಗರು ಬರಬೇಡಿ ಎಂದು ಹೆಗ್ಗಡೆಯವರು ಮನವಿ ಕೂಡಾ ಮಾಡಿದ್ದರು. ಹೀಗೆ‌ ಧರ್ಮಸ್ಥಳದಲ್ಲೇ ನೀರಿನ ಕೊರತೆ ಇರುವಾಗಲೇ, ಅಲ್ಲಿ ಲಭ್ಯವಿರುವ ನೀರನ್ನು ಸರಿದೂಗಿಸಿಕೊಂಡು ಬರುತ್ತಿರುವ ಹೆಗ್ಗಡೆಯವರು ಈಗ ಒಂದು ಅತ್ಯುತ್ತಮ ಸೇವೆ ಮಾಡಿ ಜನಾದರಣೆ ಗಳಿಸಿದ್ದಾರೆ..

ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಕೂಡಾ ಪ್ರತಿ ಬೇಸಿಗೆಯಲ್ಲೂ ಕೂಡಾ ನೀರಿಗಾಗಿ ಪರಿತಪಿಸುವ ಜಿಲ್ಲೆಯಾಗುತ್ತದೆ. ಈ ಬಾರಿ ಕೂಡಾ ಜಿಲ್ಲೆಯ ಸುಮಾರು ಮುನ್ನೂರು ಹಳ್ಳಿಗಳಲ್ಲಿ ನೀರಿಗಾಗಿ ಜನರು ಬವಣೆ ಪಡುವಂತಾಗಿದೆ. ಜನರಿಗೆ, ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಸರ್ಕಾರ ಕೊರೆಸಿರುವ‌‌ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಸರ್ಕಾರದ ಕಾರ್ಯಾಚರಣೆ ಅಲ್ಲಿನ ಜನರಿಗೆ ಸಾಕಾಗುವ ಪ್ರಮಾಣದಲ್ಲಿ ಇಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಭಾಗದ ಜನರಿಗೆ ನೆರವು ನೀಡಲು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಮುಂದಾಗಿದ್ದಾರೆ. ಅವರು ಇಲ್ಲಿನ ಜನರ ನೀರಿನ ಬವಣೆಯನ್ನು ತಗ್ಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಚಿಕ್ಕಬಳ್ಳಾಪುರದ ಜಿಲ್ಲಾಡಳಿತದ ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ತನ್ನ ಕೈ ಜೋಡಿಸುವ ಮೂಲಕ ಜಿಲ್ಲೆಯ ಸುಮಾರು 37 ಹಳ್ಳಿಗಳಿಗೆ ವಾರಕ್ಕೆರಡು ಬಾರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಖಾಸಗಿಯವರು ಬಳಿ ನೀರಿದ್ದರೂ ತಮ್ಮ ಅಗತ್ಯಗಳಿಗೆ ಬೇಕಿರುವ ಕಾರಣ ನೀಡಿ ಸಾಮಾನ್ಯ ಜನರಿಗೆ ನೀರು ಕೊಡಲು ಸಿದ್ಧರಿಲ್ಲ. ಇಂತಹ ಸಂದರ್ಭದಲ್ಲಿ ಜನರ ಸಂಕಷ್ಟ ಅರಿತು ಅವರಿಗೆ ನೀರು ನೀಡಲು ಮುಂದಾಗಿರುವ ಹೆಗ್ಗಡೆಯವರ ನಿಸ್ವಾರ್ಥ ಸೇವೆಗೆ ಅಲ್ಲಿನ ಜನರು ಮಾತ್ರವಲ್ಲದೆ , ಎಲ್ಲಾ ಜನತೆ ಅವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here