ಕುಂಕುಮಕ್ಕೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಅದಕ್ಕೆ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಶುಭ ಸಮಾರಂಭಗಳಲ್ಲಂತೂ ಅರಿಶಿನ ಹಾಗೂ ಕುಂಕುಮ ಇಲ್ಲದೇ ಯಾವುದೇ ಕಾರ್ಯವೂ ನಡೆಯುವುದಿಲ್ಲ. ಈ ಎರಡು ಮಂಗಳ ದ್ಯವ್ಯಗಳು ಇಲ್ಲದೇ ಹಿಂದೂ ಧರ್ಮದ ಯಾವುದೇ ಧಾರ್ಮಿಕ ವಿಧಿ ವಿಧಾನಗಳೂ ನಡೆಯುವುದಿಲ್ಲ. ಇನ್ನು ಅರಿಶಿನ ಹಾಗೂ ಕುಂಕುಮ ಎರಡಕ್ಕೂ ವಿಶೇಷ ಮಹತ್ವ ಇದ್ದು, ಇದರಲ್ಲಿ ಕುಂಕುಮದ ಸ್ಥಾನ ಏನು, ಅದರ ಧಾರ್ಮಿಕ ಮಹತ್ವ ಏನೆಂದು ತಿಳಿಯೋಣ. ಕುಂಕುಮ ಕೇವಲ ಕೆಂಪು ಬಣ್ಣವಲ್ಲ ಬದಲಾಗಿ ಇದು ಯಾವುದೇ ಒಳ್ಳೆ ಕೆಲಸದ ಶುಭಾರಂಭದ ದ್ಯೋತಕವಾಗಿದೆ. ಕುಂಕುಮವಿಲ್ಲದೇ ನವರಾತ್ರಿ ಉತ್ಸವವಾಗಲೀ, ಹನುಮಂತನ ಪೂಜೆಯಾಗಲೀ ಇಲ್ಲ.

ಕುಂಕುಮ ಎಂಬದು ಸಂತಸದ ಸಂಕೇತವಾಗಿದ್ದು, ಸಂತಸವಿಲ್ಲದ ಶುಭಕಾರ್ಯ ಇರುವುದು ಸಾಧ್ಯವೇ ಇಲ್ಲ. ಕುಂಕುಮವು ಶ್ರೀ ಮಹಾಲಕ್ಷ್ಮಿದೇವಿಯ ಸೌಂದರ್ಯ ಸಾಧನವೆಂದೇ ತಿಳಿಯಲಾಗಿದ್ದು, ಇದೇ ಕಾರಣದಿಂದಾಗಿ ದೀಪಾವಳಿ ಸಮಯದಲ್ಲಿ ಕುಂಕುಮದಿಂದ ಶ್ರೀ ಮಹಾಲಕ್ಷ್ಮಿ ದೇವಿಯ ಪಾದಗಳನ್ನು ಮಾಡಿ ಆರಾಧನೆ ಕೂಡಾ ಮಾಡಲಾಗುತ್ತದೆ. ಮಾತೆ ಮಹಾಲಕ್ಷ್ಮಿ ಮಾತ್ರವಲ್ಲದೇ ದೇವಿ ಶಕ್ತಿಯ ಅಲಂಕಾರದಲ್ಲೂ ಕುಂಕುಮ ಪ್ರಧಾನವೆಂದು ನಂಬಿಕೆಯಿರುವುದರಿಂದಲೇ ನವರಾತ್ರಿ ಸಂದರ್ಭದಲ್ಲಿ ಕುಂಕುಮಕ್ಕೆ ದೇವಿಯ ಆರಾಧನೆಯಲ್ಲಿ ವಿಶೇಷ ಸ್ಥಾನವಿದೆ.

ಪುರಾತನ ಕಾಲದಿಂದಲೂ ಭಾರತದಲ್ಲಿ ಹಿಂದೂ ಸ್ತ್ರಿಯರು ಕುಂಕುಮವನ್ನು ಸಿಂಧೂರ ಹಾಗೂ ಹಣೆಯಲ್ಲಿ ತಿಲಕದಂತೆ ಬಳಸಿಕೊಂಡು ಬರುತ್ತಿದ್ದು, ಇದು ಪತಿಯ ದೀರ್ಘಯುಷ್ಯದ ಸಂಕೇತ ಕೂಡಾ ಆಗಿದೆ. ಹಣೆಗೆ ಕುಂಕುಮ ಇಡುವ ಜೊತೆಗೆ , ಬೈತಲೆಯ ನಡುವೆ ಸಿಂಧೂರವನ್ನು ಇಡುತ್ತಾರೆ. ಇದು ಮುತ್ತೈದೆಯರಿಗೆ ಒಂದು ಪ್ರಮುಖವಾದ ಅಲಂಕಾರವೂ ಹೌದು. ಬೈತಲೆಯ ನಡುವೆ ಕುಂಕುಮವನ್ನು ಕಂಡರೆ ಆಕೆ ವಿವಾಹಿತೆ ಎಂಬುದರ ಸಂಕೇತವೇ ಆಗಿದೆ. ಅಲ್ಲದೆ ಕುಂಕುವ ಹಾಗೂ ಅದೃಷ್ಟದ ಸಂಕೇತವೆಂಬ ಪ್ರತೀತಿ ಕೂಡಾ ಇದ್ದು ಅದನ್ನು ಸ್ತ್ರೀಯರು ಹಣೆಯಲ್ಲಿ ಧರಿಸಿ ನಡೆಯುವರು.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here