ಶ್ರೀಗಳು ನಿನ್ನೆ ಶುಭ ಸೋಮವಾರ ಕೈಲಾಸದ ಕಡೆಗೆ ನಡೆದಿದ್ದಾರೆ. ಅವರು ಜೀವನ ಯಾತ್ರೆಯನ್ನು ಈ ಭೂಮಿಯ ಮೇಲೆ ಮುಗಿಸಿದ್ದಾರೆ. ಶತಾಯುಷಿಗಳಾಗಿ ಜೀವನದ ಜಂಜಾಟಗಳಿಂದ ನೊಂದ ಮನಸ್ಸುಗಳಿಗೆ ಸಾಂತ್ವನವನ್ನು ನೀಡುತ್ತಾ ಅವರು ನಡೆದ ಬಂದ ಹಾದಿಗೆ ಅಂತ್ಯವಿಲ್ಲ. ಆದರೆ ಪ್ರಕೃತಿ ನಿಯಮವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲವೆಂಬ ನಿತ್ಯ ಸತ್ಯವನ್ನು ಜಗತ್ತಿಗೆ ಸಾರಿದ ಅವರು ಮನುಕುಲದ ಮುಂದೆ ಒಂದು ವಿಶ್ವಮಾನವ ಸಂದೇಶವನ್ನು ಇಟ್ಟು, ಮಾನವ ಜೀವನದ ಪರಮಾರ್ಥವೇ ಮಾನವ ಸೇವೆ ಎಂಬ ಧ್ಯೇಯವನ್ನು ಇಟ್ಟುಕೊಂಡು ಬದುಕಲು ಕಲಿಯಿರಿ ಎಂದು ಹೇಳಿ ಹೋಗಿದ್ದಾರೆ. ಅವರನ್ನು ಕಡೆಯ ಬಾರಿ ನೋಡಲು ಬರುವವರಿಗೂ ತೊಂದರೆ ಆಗಬಾರದೆಂಬ ಅವರ ಆಶಯ ಈಗ ನಿಜವಾಗಿದೆ.

ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳು ಹಾಗೂ ಅವರಿಂದ ಜೀವನ ಕಟ್ಟಿಕೊಂಡವರು ಸಿದ್ಧಗಂಗೆಯ ಕಡೆ ದಾಪುಗಾಲು ಹಾಕಿದ್ದಾರೆ. ಹಾಗೆ ಬರುವ ಯಾರೊಬ್ಬರೂ ಹಸಿದ ಹೊಟ್ಟೆಯಿಂದ ಮರಳಬಾರದು ಎಂದು ಊಟದ ವ್ಯವಸ್ಥೆ ಮಾಡಲಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆಯುವುದು ಎಂದರೆ ಇದೇ ಅಲ್ಲವೇ? ಇಂತಹ ಮಾನವತಾವಾದಿ ಇನ್ನು ಸಿಗಲು ಸಾಧ್ಯವೇ? ಶಿವಕುಮಾರ ಸ್ವಾಮಿಗಳು ಯುಗದಲ್ಲಿ ಒಬ್ಬರಲ್ಲ, ಯುಗಕ್ಕೇ ಒಬ್ಬರು ಎನ್ನುವಂತೆ ಬದುಕಿ ಬಾಳಿದ್ದಾರೆ ಎನ್ನುವುದು ಖಚಿತ.

ಬರೋಬ್ಬರಿ ಹತ್ತರಿಂದ ಹನ್ನೆರಡು ಲಕ್ಷ ಭಕ್ತರಿಗೆ ಊಟದ ವ್ಯವಸ್ಥೆ ನಡೆದಿದೆ. ಒಂದು ತಿಂಗಳ ಹಿಂದಿನಿಂದಲೂ ದವಸ ಧಾನ್ಯ ಸಂಗ್ರಹ. ಇದೊಂದು ರೀತಿಯಲ್ಲೇ ವಿಶ್ವ ದಾಖಲೆ. ಈಗಾಗಲೇ ಐದರಿಂದ ಆರು ಲಕ್ಷ ಜನ ಶ್ರೀಗಳ‌ ದರ್ಶನ ಪಡೆದಿದ್ದು ಅವರೆಲ್ಲರಿಗೂ ಪ್ರಸಾದವಿತರಣೆ ನಡೆದಿದೆ. ಚಿತ್ರಾನ್ನ ಪಾಯಸ ಅಡುಗೆ ಮಾಡಿ ಬಡಿಸಲಾಗಿದೆ. ಸಿದ್ಧಗಂಗೆಯ ಪ್ರೌಢಶಾಲಾ ಮೈದಾನ ಸೇರಿ ಹಲವೆಡೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಹಸಿದ ಹೊಟ್ಟೆ ಗೆ ಅನ್ನ ನೀಡುವ ಅವರ ಕಾಯಕಕ್ಕೆ ಶರಣು ಶರಣು. ಇಂತಹ ಮಹಾಗುರು ಮತ್ತೊಮ್ಮೆ ಹುಟ್ಟಿ ಬರಲಿ.

ಸಿದ್ಧಗಂಗಾ ಮಠಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠ ಪಕ್ಕದ ರಾಗಿ ಹೊಲದಲ್ಲಿ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. 40 ಎಕರೆಯಲ್ಲಿ ಊಟದ ಕೌಂಟರ್ ಇರಲಿದೆ. ತುಮಕೂರಿನ ಬಸವೇಶ್ವರ ಶಾಲೆ ಮೈದಾನದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ 400 ಅಡುಗೆ ಭಟ್ಟರು, 3,000 ಸ್ವಯಂಸೇವಕರು ಪ್ರಸಾದ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪೊಲೀಸರು, ಸ್ವಯಂ ಸೇವಕರು, ಮಾಧ್ಯಮದವರ ಜತೆಗೆ ನಗರದ ವಿವಿಧೆಡೆಯ 35 ಕೌಂಟರ್​ನಲ್ಲಿ ಪ್ರಸಾದ ಹಾಗೂ ಕುಡಿಯುವ ನೀರು ವಿನಿಯೋಗವಾಗಲಿದೆ.

ಸಿದ್ಧಗಂಗಾ ಮಠಕ್ಕೆ ತೆರಳುವ ಮಾರ್ಗಮಧ್ಯ ಪ್ರಸಾದ ಸಿಗುವ ವ್ಯವಸ್ಥೆ ಮಾಡಲಾಗಿದೆ. 5 ಲಕ್ಷ ಜನರು ಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದ್ದು, ಅಡಕೆ ಹಾಗೂ ಬಾಳೆ ಎಲೆಯ ಪಿಂಡಿಗಳನ್ನು ವಿವಿಧೆಡೆಗಳಿಂದ ಭಕ್ತರು ತಂದು ಹಾಕುತ್ತಿದ್ದಾರೆ. ಹಳ್ಳಿ ಹಳ್ಳಿಗಳಿಂದ ತರಕಾರಿ, ಅಕ್ಕಿ, ಬೇಳೆ ಸೇರಿ ಅಡುಗೆ ಪದಾರ್ಥ ತಂದು ಸುರಿಯಲಾಗುತ್ತಿದೆ. ಎಷ್ಟು ಲಕ್ಷ ಜನರು ಬಂದರೂ ಯಾರಿಗೂ ತೊಂದರೆಯಾಗದಂತೆ ದಾಸೋಹ ನಡೆಸುವ ಶ್ರೀಮಠದ ಪರಂಪರೆ ಈ ಜನಸಾಗರದಲ್ಲಿಯೂ ಮುಂದುವರಿಯಲಿದೆ. ಮಠದ ಜತೆ ಜಿಲ್ಲಾಡಳಿತವೂ ನೆರವು ನೀಡಿದೆ. ಸಾವಿರಾರು ಸಂಖ್ಯೆಯ ಸ್ವಯಂಸೇವಕರು ಪ್ರಸಾದ ಹಾಗೂ ಕುಡಿಯುವ ನೀರು ಪೂರೈಸಲು ಸನ್ನದ್ಧರಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here