ಶ್ರೀ ಕೃಷ್ಣ ಮಹಾಭಾರತದ ಅತಿ ಪ್ರಮುಖ ಪಾತ್ರಧಾರಿ, ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗಾಗಿ ಶ್ರೀ ಮಹಾವಿಷ್ಣು ಎತ್ತಿದ ದಶಾವತಾರಗಳಲ್ಲಿ ಒಂದು ಈ ದ್ವಾರಕಾಪತಿ ಶ್ರೀಕೃಷ್ಣ ನ ಅವತಾರವು ಒಂದು. ಭಗವಾನ್ ಶ್ರೀ ಕೃಷ್ಣನ ಬಗೆಗೆ ಹೇಳಲು, ಆತನ ಲೀಲೆಗಳನ್ನು ವರ್ಣಿಸಲು, ಆತನ ಮಹಿಮೆಗಳನ್ನು ಸಾರಲು, ಆತನ ಸಾಮರ್ಥ್ಯವನ್ನು ಕೊಂಡಾಡಲೂ ಇಡೀ ಜನ್ಮ ಸಾಲದೆಂದರೂ ತಪ್ಪಾಗುವುದಿಲ್ಲ. ಹುಟ್ಟಿನಿಂದ , ತನ್ನ ಅವತಾರ ಪರ್ಯಾವಸನಗೊಳಿಸುವ ವರೆಗೂ ಭಗವಾನ್ ಶ್ರೀಕೃಷ್ಣ ತನ್ನ ಲೀಲೆಗಳಿಂದ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡುತ್ತಿತ್ತು. ಆದರೆ ಇಂದು ನಾವು ಭಗವಾನ್ ಶ್ರೀಕೃಷ್ಣ ನ ಲೀಲೆಗಳ ಬಗ್ಗೆ ಹೇಳಲು ಹೊರಟಿಲ್ಲ ಬದಲಿಗೆ, ಈ ಗೋಪಿಕಾ ಮಾನಸ ಚೋರನ ಜೀವನ ಸಂಖ್ಯೆ 8 ರೊಂದಿಗೆ ಹೇಗೆ ಬೆಸೆದಿತ್ತು ಎಂಬ ರೋಚಕ ಮಾಹಿತಿ ನೀಡಲು ಹೊರಟಿದ್ದೇವೆ‌.

ಶ್ರೀಕೃಷ್ಣ ಪರಮಾತ್ಮನ ಜೀವನಕ್ಕೂ ಸಂಖ್ಯೆ ಎಂಟಕ್ಕೂ ಯಾವುದೋ ಒಂದು ರೀತಿಯ ಅವಿನಾಭಾವ ಸಂಬಂಧವಿದೆ ಅನ್ನುವ ರೀತಿಯಲ್ಲಿ ಬೆಸೆದುಕೊಂಡಿದೆ ಈ ಸಂಖ್ಯೆ. ಹಾಗಾದರೆ ಶ್ರೀಕೃಷ್ಣ ಹಾಗೂ ಸಂಖ್ಯೆ ಎಂಟರ ನಂಟನ್ನು ತಿಳಿಯೋಣ. ಮೊದಲನೆಯದಾಗಿ ಭಗವಾನ್ ಶ್ರೀಕೃಷ್ಣ ದೇವಕಿ ಹಾಗೂ ವಸುದೇವರ
8 ನೇ ಮಗನಾಗಿ ಭೂಮಿಯ ಮೇಲೆ ಜನ್ಮತಾಳಿದ. ಇನ್ನು ಭಗವಾನ್ ಕೃಷ್ಣನ ಜನನವಾಗಿದ್ದು 8ನೇ ಮನ್ವಂತರದ, ಅಷ್ಟಮಿಯ ದಿನವೇ ಎಂಬುದು ಕೂಡಾ ಸತ್ಯ. ಅದಕ್ಕೆ ಕೃಷ್ಣಾಷ್ಟಮಿ ಎಂದೇ ಆ ದಿನವನ್ನು ಸಂಭ್ರಮದಿಂದ ಆಚರಿಸಿ ಆನಂದಿಸುವರು ಭಕ್ತವೃಂದ.

ಎರಡನೆಯದಾಗಿ, ಶ್ರೀಕೃಷ್ಣ ಭಗವಾನನಿಗೆ ಅಷ್ಟ ಪತ್ನಿಯರು ಎಂಬುದು ಒಂದು ಪ್ರಮುಖ ವಿಷಯ ರುಕ್ಮಿಣಿ, ಜಾಂಭವತಿ, ಸತ್ಯಭಾಮೆ, ಮಿತ್ರವಿಂದ, ಲಕ್ಷ್ಮಣಾ, ಸತ್ಯ, ಭದ್ರ, ಕಾಳಿಂದಿ. ಈ ಎಂಟು ಜನ ಭಗವಂತನ ಕೃಷ್ಣ ಅವತಾರದಲ್ಲಿ ಆತನ ಅಷ್ಟಭಾರ್ಯೆಯರೇ ಎಂದು ಆರಾಧಿಸಲ್ಪಟ್ಟಿದ್ದಾರೆ. ಇನ್ನು ಶ್ರೀಕೃಷ್ಣ ಪರಮಾತ್ಮನ ಆಪ್ತ ಮಿತ್ರರ ಸಂಖ್ಯೆ ಕೂಡಾ ಎಂಟು, ಶ್ರೀಧಾಮ, ಸುಧಾಮ, ಸುಬಲ,ಸ್ತೋಕ ಕೃಷ್ಣ, ಅರ್ಜುನ, ವೃಷಬಂಧು,ಸುಭಗ್ , ಬಲಿ, ಪ್ರಾಣಭಾನು ಎಂಬವವರೇ ಆ ಅಷ್ಟ ಮಿತ್ರರು. ಈ ಹೆಸರುಗಳು ಆದಿ ಪುರಾಣದಲ್ಲಿ ನಮೂದಿತವಾಗಿವೆ. ಹೀಗೆ ಪತ್ನಿಯರು ಎಂಟು , ಆಪ್ತ ಮಿತ್ರರೂ ಎಂಟು ಭಗವಾನ್ ಶ್ರೀಕೃಷ್ಣ ಪರಮಾತ್ಮನಿಗೆ.

ಇನ್ನು ಪತ್ನಿಯರು ಹೊರತು ಪಡಿಸಿದರೆ, ಶ್ರೀಕೃಷ್ಣ ಪರಮಾತ್ಮನಿಗೆ ಇದ್ದ ಆಪ್ತ ಸಖಿಯರ ಸಂಖ್ಯೆ ಕೂಡಾ ಎಂಟು ಎಂದರೆ ಆಶ್ಚರ್ಯವಾಗುತ್ತದೆ. ಚಂದ್ರಾವಳಿ, ಭದ್ರಾ, ಶ್ಯಾಮಾ, ಶೈವ್ಯಾ, ಪಗ್ಯಾ, ರಾಧಾ, ಲಲಿತಾ, ವಿಶಾಖಾ ಎಂಬುವವರೇ ಆ ಅಷ್ಟ ಸಖಿಯರು. ಆದರೆ ಈ ಹೆಸರುಗಳು ಕೆಲವೆಡೆ ಬೇರೆಯಾಗಿ ನಮೂದಿಸಲಾಗಿದ್ದರೂ, ಸಾಮ್ಯತೆಯಂತೂ ಇದ್ದೇ ಇದೆ. ಇನ್ನು ಕೃಷ್ಣನ ಹೆಸರಿನಿಂದ ಆತನ ಮಹಿಮೆಗಳಿಂದ ಪಾವನವೆನಿಸಿರುವ ಕೃಷ್ಣ ನಗರಗಳೆಂದೇ ಖ್ಯಾತಿ ಪಡೆದಿರುವ ಪವಿತ್ರ ಎಂಟು ಸ್ಥಳಗಳಿವೆ. ಮಥುರಾ, ಗೋಕುಲ, ನಂದಗಾಂವ್, ಬೃಂದಾವನ, ಗೋವರ್ಧನ, ಬರ್ಸಾನಾ, ಮಧುವನ ಹಾಗೂ ದ್ವಾರಿಕಾ. ಈ ಅಷ್ಟನಗರಗಳು ಶ್ರೀಕೃಷ್ಣ ನು ನಡೆದಾಡಿದ ಪಾವನ ಭೂಮಿ ಎನಿಸಿದ್ದವು. ಒಟ್ಟಾರೆ ಶ್ರೀಕೃಷ್ಣ ಹಾಗೂ ಅಷ್ಟ ಅಂದರೆ ಎಂಟು ಈ ಸಂಖ್ಯೆಗೆ ಇರುವ ಸಂಬಂಧ ನಿಜವಾಗಿಯೂ ರೋಚಕ ಹಾಗೂ ಅದ್ಭುತ.

ಇ.ಸೋಮಶೇಖರ್
ಖ್ಯಾತ ಬರಹಗಾರರು, ಮತ್ತು
ಉಪನ್ಯಾಸಕರು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here