ನಟಿ ಶೃತಿ ಹರಿಹರನ್ ಮತ್ತೊಮ್ಮೆ ಸಿನಿಮಾ ಕ್ಷೇತ್ರದಲ್ಲಿನ ಲೈಂಗಿಕ ದೌರ್ಜನ್ಯದ ವಿಷಯವಾಗಿ ದನಿ ಎತ್ತಿದ್ದಾರೆ. ಅವರು ಸಿನಿಮಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ ತಡೆಯಲು ಆಂತರಿಕ ದೂರುಗಳ ಸಮಿತಿ (ಐಸಿಸಿ) ಹಾಗೂ ಬಲಿಷ್ಠವಾದ ಕಾನೂನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಮುಂದೆ ಬೇಡಿಕೆ ಇಟ್ಟಿದ್ದಾರೆ. ಯುನೈಟೆಡ್ ನೇಷನ್ಸ್ ವುಮೆನ್ ಮತ್ತು ಫೇಸ್​ಬುಕ್​ನ ಜಂಟಿ ಸಹಯೋಗದಲ್ಲಿ ಕಳೆದ ಭಾನುವಾರ ಆಯೋಜಿಸಲಾಗಿದ್ದ ‘ವಿ ದ ವುಮೆನ್’ ಕಾರ್ಯಕ್ರಮದಲ್ಲಿ ಮಾತನಾಡಿದ ಶೃತಿ ಹರಿಹರನ್ ಲೈಂಗಿಕ ದೌರ್ಜನ್ಯದ ವಿಷಯದ ಕುರಿತಾಗಿ ಮಾತನಾಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣ ತಡೆಯಲು ಆರಂಭವಾದ ಮೀ ಟೂ ಅಭಿಯಾನದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ.

ಮೀಟೂ ನಂತರ ತನಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಕೈತಪ್ಪಿದ ಬಗ್ಗೆ ಹೇಳಿದ ಅವರು, ಅದರಿಂದ ನಾನು ಕುಗ್ಗಲಿಲ್ಲ ಬದಲಿಗೆ ಮಹಿಳೆಯ ಮೇಲೆ ಎಸಗುವ ಲೈಂಗಿಕ ದೌರ್ಜನ್ಯದ ಇನ್ನಷ್ಟ ಗಟ್ಟಿಯಾಗಿ ಧ್ವನಿ ಎತ್ತಲು ಮತ್ತಷ್ಟು ಶಕ್ತಿ ಬಂದಿದೆ ಎಂದು ಹೇಳಿದ್ದಾರೆ. ಲೈಂಗಿಕ ಶೋಷಣೆಯ ವಿಚಾರದಲ್ಲಿ ನ್ಯಾಯಾಂಗ ಪರಿಭಾಷೆಯು ಬದಲಾಗ ಬೇಕಿದ್ದು, ಪ್ರಸ್ತುತ ಇರುವ ಪರಿಚ್ಛೇದಗಳು ಸಂತ್ರಸ್ತರಿಗೆ ಅನುಕೂಲವಾಗಿಲ್ಲ ಹಾಗೂ ಹೋರಾಟ ನಡೆಸಿದರೂ ನ್ಯಾಯ ಸಿಗುವುದೋ ಇಲ್ಲೋ ಗೊತ್ತಿಲ್ಲ. ಆದರೆ ತಪ್ಪು ಮಾಡಿದವರನ್ನು ಕೋರ್ಟ್​ಗೆ ಎಳೆದಿದ್ದೇನೆ ಎಂಬ ತೃಪ್ತಿಯಿದೆ ಎಂದಿದ್ದಾರೆ.

ಇಂದು ಲೈಂಗಿಕ ಶೋಷಣೆ ನಡೆಸಿದವರ ವಿರುದ್ಧ ಯಾರು ಧ್ವನಿ ಎತ್ತುವರೋ ಅವರೇ ತೊಂದರೆ ಅನುಭವಿಸುವ ಪರಿಸ್ಥಿತಿ ಇದ್ದು, ನಾನು ಮಾಡಿದ ಆರೋಪಗಳ ಕುರಿತು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಕೇವಲ ಸ್ಪರ್ಶಿಸಿದ  ಪ್ರಸಂಗಗಳನ್ನು ಮಾತ್ರ ಹೇಳಲು ತಿಳಿಸಿದರು. ಈ ಅಸಭ್ಯ ಮಾತೂ ಕೂಡಾ ಒಂದು ಶೋಷಣೆಯೇ ಎನಿಸುತ್ತದೆ ಎಂದಿದ್ದಾರೆ. ಇನ್ನು ಇದೀಗ ನಾತಿಚರಾಮಿ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದರಿಂದ ಮುಂದೆ ನಟಿಸಲು ಅವಕಾಶಗಳು ಸಿಗಲಿವೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದು ಶ್ರುತಿ ಹರಿಹರನ್ ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here