ಕೊರೊನಾ ಭೀತಿಯ ನಡುವೆ ರಾಜ್ಯ ಸರ್ಕಾರವು ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡು ನಿನ್ನೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಆರಂಭಿಸಿದೆ‌.‌‌‌ ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದೆ ಕೂಡಾ. ಆದರೂ ಇನ್ನೂ ಐದು ವಿಷಯಗಳ ಪರೀಕ್ಷೆ ಇದ್ದು, ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರತಿ ದಿನವೂ ಕೂಡಾ ಒಂದು ಸಮರದಂತೆ ಬಹಳ ಜಾಗರೂಕತೆಯಿಂದ ನಡೆಸುವ ಪರಿಸ್ಥಿತಿಯಲ್ಲಿ ನಡೆಯುತ್ತಿದೆ. ವಿದ್ಯಾರ್ಥಿಗಳು ಬಹಳ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಲು ಸಿದ್ಧವಾಗಿರುವುದು ಒಂದು ಉತ್ತಮ ಬೆಳವಣಿಗೆ ಎಂದು ನಿನ್ನೆ‌ ಸುದ್ದಿಯಾಗಿದ್ದು ಕೂಡಾ ಹೌದು.

ಇದೆಲ್ಲದರ ನಡುವೆ ನಿನ್ನೆ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ನಿಜಕ್ಕೂ ಕೊರೊನಾ ಎದುರಿಸಿ ಪರೀಕ್ಷೆ ಬರೆಯುವ ಧೈರ್ಯ ಮಾಡಿದ್ದು ಒಂದು ಸಾಧನೆ ಎನಿಸಿದರೆ, ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಮತ್ತೊಂದು ಸ್ಪೂರ್ತಿಯನ್ನು ನೀಡುವ, ಅಂಗವೈಕಲ್ಯ ತನ್ನ ಸಾಧನೆಗೆ ಅಡ್ಡಿಯಲ್ಲ ಎಂದು ಪರೀಕ್ಷೆ ಬರೆದ ಮಾದರಿ ವಿಶೇಷ ಚೇತನನಾದ ವಿದ್ಯಾರ್ಥಿಯೊಬ್ಬನ ಫೋಟೋ ಹಾಗೂ ವಿವರವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ವಿದ್ಯಾರ್ಥಿಯ ಬಗ್ಗೆ ಸಚಿವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸಚಿವರು ತಮ್ಮ ಟ್ವೀಟ್ ನಲ್ಲಿ ‘ಬಂಟ್ವಾಳ‌ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ‌ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ‌ ಸಾರ್ಥಕ‌ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ.’ ಎಂದು ಬರೆದು ಆ ವಿದ್ಯಾರ್ಥಿಯ ಫೋಟೋ ಹಂಚಿಕೊಂಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here