ರಾಜ್ಯ ಉಪಚುನಾವಣೆ ಬಿಜೆಪಿ ಪಾಲಿಗೆ ನಿರ್ಣಾಯಕವಾಗಿತ್ತು. ಏಕೆಂದರೆ ಸುಭದ್ರ ಸರ್ಕಾರ ಸ್ಥಾಪನೆಗೆ ಇದು ಪೂರಕವಾಗಿತ್ತು‌. ಈಗ ಉಪ ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರ ರಾಜ್ಯದಲ್ಲಿ ಉಪಚುನಾವಣೆಗಳು ನಡೆದಂತಹ ಕ್ಷೇತ್ರಗಳಲ್ಲಿ ಬಹುತೇಕ ಕಮಲವು ಅರಳಿದೆ, ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ವಿಜಯದ ನಗೆಯನ್ನು ಬೀರಿದೆ. ಈ ಮೂಲಕ ಕೊನೆಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೇಫ್ ಆಗಿದೆ. 224 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 117 ಸದಸ್ಯ ಬಲವನ್ನು ಹೊಂದುವ ಮೂಲಕ ತಾನು ಬಹುಮತವನ್ನು ಉಳಿಸಿಕೊಂಡು , ಬಹು ಮತ ಇಲ್ಲದ ಸರ್ಕಾರ ಎಂಬ ವಿಪಕ್ಷಗಳ ಟೀಕೆಗಳಿಂದ ದೂರ ಉಳಿಯಲು ಸಾಧ್ಯವಾಗಿದೆ.

ಮೈತ್ರಿ ಸರ್ಕಾರದ ಪತನಾನಂತರ ಕೇವಲ 105 ಶಾಸಕರ ಬೆಂಬಲದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ, ಹಲವು ಬೆಳವಣಿಗೆಗಳು, ರಾಜಕೀಯ ಹೈಡ್ರಾಮಾಗಳ ನಂತರ ಬಹುಮತ ಸಾಬೀತು ಪಡಿಸಲು ಯಶಸ್ವಿಯಾಗಿತ್ತು. ಆದರೆ ಅಲ್ಪ ಮತದ ಸರ್ಕಾರಕ್ಕೆ ಆಯುಷ್ಯ ಕಡಿಮೆ ಎಂಬುದನ್ನು ಅರಿತು, ಮೈತ್ರಿ ಸರ್ಕಾರದ ಶಾಸಕರಿಂದ ರಾಜೀನಾಮೆ ನೀಡಿಸಿ ಬಿಜೆಪಿಯಿಂದ ಚುನಾವಣೆ ಕಣಕ್ಕಿಳಿಸಲು ಸಜ್ಜಾಯಿತು. ಆ ಪ್ರಯತ್ನ ಕೂಡಾ ಸಫಲವಾಗಿದೆ. 17 ಶಾಸಕರು ರಾಜೀನಾಮೆ ನೀಡಿದರು. ಅದರಲ್ಲಿ 15 ಕ್ಷೇತ್ರಗಳಿಗೆ ಚುನಾವಣೆ ನಡೆದು ಈಗ ಬಿಜೆಪಿ 12 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರ ಮತ್ತು ರಾಯಚೂರಿನ ಮಸ್ಕಿಯನ್ನು ಎರಡು ಕ್ಷೇತ್ರಗಳಲ್ಲಿ ಚುನಾವಣೆ ನಡೆಯದ ಕಾರಣ, ವಿಧಾನ ಸಭೆಯ ಸಂಖ್ಯಾ ಬಲ ಇದ್ದು, ಈಗಾಗಲೇ ಬಿಜೆಪಿಗೆ 117 ಶಾಸಕರ ಬೆಂಬಲವಿದ್ದು, ಪಕ್ಷೇತರ ಅಭ್ಯರ್ಥಿಯ ಬೆಂಬಲ ದೊರೆತರೆ ಬಿಜೆಪಿಯ ಸಂಖ್ಯಾ ಬಲ 118 ಆಗುತ್ತದೆ. ಒಟ್ಟಾರೆ ಬಿಜೆಪಿ ತನ್ನ ಟಾರ್ಗೆಟ್ ರೀಚ್ ಆಗಲು ಮಾಡಿದ ಪ್ರಯತ್ನಗಳ ಫಲ ಉಪಚುನಾವಣೆಯ ಫಲಿತಾಂಶದ ನಂತರ ಸ್ಪಷ್ಟವಾಗಿ ದೊರೆತಿದೆ.

ಕರ್ನಾಟಕ ರಾಜ್ಯ ಉಪಚುನಾವಣಾ ಪರ್ವ ಫಲಿತಾಂಶದ ನಂತರ ಮುಗಿದಿದೆ‌. ಉಪಚುನಾವಣೆ ನಡೆದ ಕ್ಷೇತ್ರಗಳಲ್ಲಿ ಸಾಕಷ್ಟು ಜಿದ್ದಾಜಿದ್ದಿನ, ಬಹಳಷ್ಟು ಪೈಪೋಟಿ ಇದ್ದ ಕ್ಷೇತ್ರ ಎಂದರೆ ಅದು ಹೊಸಕೋಟೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದವರು ಎಂಟಿಬಿ ನಾಗರಾಜ್ ಅವರು. ಎಂಟಿಬಿ ಅವರನ್ನು ಚುನಾವಣಾ ಕಣದಲ್ಲಿ ಗೆಲ್ಲಿಸಲೇಬೇಕೆಂಬ ಗುರಿಯಿಂದ ಬಿಜೆಪಿ ನಾಯಕರು ಹರ ಸಾಹಸವನ್ನು ಪಟ್ಟಿದ್ದು ಕೂಡಾ ವಾಸ್ತವ. ಪಕ್ಷೇತರ ಅಭ್ಯರ್ಥಿಯಾಗಿ ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೇಗೌಡ ಅವರು ಸ್ಪರ್ಧಿಸಿ ಎಂಟಿಬಿ ಅವರ ವಿರುದ್ಧ ಜಯ ಸಾಧಿಸಿದ್ದಾರೆ.

ಒಂದೆಡೆ ಬಿಜೆಪಿ ಎಂಟಿಬಿ ಅವರನ್ನು ಗೆಲ್ಲಿಸುವ ಯತ್ನದಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಶರತ್ ಬಚ್ಚೇಗೌಡರನ್ನು ಗೆಲ್ಲಿಸಲು ಜೆಡಿಎಸ್ ಕೂಡಾ ತನ್ನ ಬೆಂಬಲವನ್ನು ಅವರಿಗೆ ಸೂಚಿಸಿತ್ತು. ಒಟ್ಟಾರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದ ಶರತ್ ಬಚ್ಚೇಗೌಡ ಅವರು ಜಯ ಸಾಧಿಸಿದ್ದಾರೆ.
ಚುನಾವಣೆಗೆ ಮುನ್ನ ಪ್ರಚಾರದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ನವರು ಎಂಟಿಬಿ ಗೆದ್ದರೆ ಅವರು ಮಂತ್ರಿಯಾಗಲಿದ್ದಾರೆ ಎಂಬ ಮಾತನ್ನು ಕೂಡಾ ಹೇಳಿದ್ದರು‌.

ಏನೇ ಹೇಳಿದರೂ ಕೂಡಾ ಚುನಾವಣೆ ಯಲ್ಲಿ ಮಾತ್ರ ಮತದಾರರು ಪಕ್ಷೇತರ ಅಭ್ಯರ್ಥಿಗೆ ತಮ್ಮ ಬೆಂಬಲವನ್ನು ನೀಡಿ ಜಯಶಾಲಿಯನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿ ಇತರೆ ಕಡೆಗಳಲ್ಲಿ ಅರಳಿದ ಕಮಲವನ್ನು ಹೊಸಕೋಟೆ ಯಲ್ಲಿ ಅರಳಿಸುವಲ್ಲಿ ಕಮಲ ನಾಯಕರು ವಿಫಲರಾಗಿದ್ದಾರೆ. ಎಂಟಿಬಿ ಅವರಿಗೆ ಇದೊಂದು ಅನಿರೀಕ್ಷಿತ ಸೋಲು ಎನ್ನುವಂತಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here