ಬಿಜೆಪಿ ಗೆದ್ದರೆ ಕಾಂಗ್ರೆಸ್‌ಗೇಕೆ ಹೊಟ್ಟೆಯುರಿ ? ಇವಿಎಂ ದೂಷಣೆ ಏಕೆ ? ೧೭ ರಾಜ್ಯಗಳಲ್ಲಿ ’ಶೂನ್ಯ’ ಸಂಪಾದಿಸಿದರೂ ಕೈ ಮುಖಂಡರು ಮಾತ್ರ ದುರಹಂಕಾರ ಬಿಟ್ಟಿಲ್ಲ ಎಂದು ಪ್ರಧಾನಿ ನರೇಂದ್ರಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಪ್ರಧಾನಿ, ಭಾರತ ವಯನಾಡಿನಲ್ಲಿ ಸೋತಿದೆಯೇ? ಭಾರತ ರಾಯ್ ಬರೇಲಿಯಲ್ಲಿ ಸೋತಿದೆಯೇ? ಕಾಂಗ್ರೆಸ್ ಸೋತರೆ ಭಾರತ ಸೋತಂತೆಯೇ? ದುರಹಂಕಾರಕ್ಕೂ ಒಂದು ಮಿತಿ ಇದೆ. ೧೭ ರಾಜ್ಯಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

ಬಿಜೆಪಿ ಮತ್ತು ಮಿತ್ರಪಕ್ಷಗಳು ಗೆದ್ದಾಗ ಮಾತ್ರ ವಿದ್ಯುನ್ಮಾನ ಮತಯಂತ್ರಗಳು(ಇವಿಎಂ)ಸರಿಯಿಲ್ಲ ಎಂದು ಹುಯಿಲೆಬ್ಬಿಸುವ ಪ್ರತಿಪಕ್ಷಗಳು, ಈ ಬಗ್ಗೆ ಚರ್ಚಿಸಲು ಚುನಾವಣೆ ಆಯೋಗ ಕರೆದಾಗ ಏಕೆ ಹಾಜರಾಗಲಿಲ್ಲ? ಎಂದು ಪ್ರಶ್ನಿಸಿದರು.
ಒಂದು ಅವಧಿಗೆ ಆಡಳಿತ ನಡೆಸಿದ ಸರ್ಕಾರವನ್ನೇ ದೇಶದ ಜನತೆ ಹೆಚ್ಚಿನ ಬಹುಮತದೊಂದಿಗೆ ೨ನೇ ಅವಧಿಗೆ ಅಧಿಕಾರಕ್ಕೆ ತಂದಿರುವ ನಿದರ್ಶನ ಅಪರೂಪದ್ದು. ದೀರ್ಘ ಸಮಯದ ಬಳಿಕ ಅಂತಹ ಜನಾದೇಶ ಸಿಕ್ಕಿದೆ ಎಂದ ಮೋದಿ ದೇಶದ ಜನತೆ ಸ್ಥಿರತೆಗೆ ಮತ ಹಾಕಿದ್ದಾರೆ ಎಂದರು.


ಜಾರ್ಖಂಡ್‌ನಲ್ಲಿ ನಡೆದ ಸಾಮೂಹಿಕ ಹಲ್ಲೆಯಿಂದ ಯುವಕ ಬಲಿಯಾಗಿರುವ ಪ್ರಕರಣ ನಿಜಕ್ಕೂ ನೋವು ತರಿಸಿದೆ. ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಸದಾ ದೂಷಣೆ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದೆ. ಜಾರ್ಖಂಡ್ ಈಗ ಗುಂಪು ಹಲ್ಲೆಯ ಕೇಂದ್ರ ಎಂದು ಕೆಲವರು ಹೇಳುತ್ತಿದ್ದಾರೆ. ಇದು ನಿಜಕ್ಕೂ ತಪ್ಪು. ಈ ರೀತಿಯ ಹೇಳಿಕೆಗಳಿಂದಾಗಿ ಇಡೀ ರಾಜ್ಯವನ್ನೇ ಅವಮಾನಿಸಲಾಗುತ್ತಿದೆ ಎಂದು ಮೋದಿ ತಿಳಿಸಿದರು.
ಬಿಜೆಪಿ ಗೆಲುವಿನಿಂದ ದೇಶ ಮತ್ತು ಪ್ರಜಾಪ್ರಭುತ್ವಕ್ಕೆ ಸೋಲು ಎನ್ನುವ ಮಹಾನ್‌ನಾಯಕರೇ ಜನಾದೇಶವನ್ನು ಪ್ರಶ್ನೆ ಮಾಡಿ ಎಂದು ತಿರುಗೇಟು ನೀಡಿದರು. ಬಿಹಾರದಲ್ಲಿ ಮಿದುಳುಜ್ವರಕ್ಕೆ ಮಕ್ಕಳು ಬಲಿಯಾಗುತ್ತಿರುವುದಕ್ಕೆ ನಾವೆಲ್ಲರೂ ಸಾಮೂಹಿಕ ಹೊಣೆ ಎಂದು ಮೋದಿ ಹೇಳಿದರು. ಇದೇ ವೇಳೆ ರಾಜ್ಯಸಭಾ ಸದಸ್ಯ ಮಾಜಿ ವಿತ್ತಸಚಿವ ಅರುಣ್‌ಜೇಟ್ಲಿ ಶೀಘ್ರ ಚೇತರಿಕೆಗೆ ಮೋದಿ ಹಾರೈಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here