ರಾಜ್ಯದಲ್ಲಿ ಒಂದೆಡೆ ದಿನೇ ದಿನೇ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ದಿನವೂ ದಾಖಲಾಗುವುದು ಹೊಸ ಪ್ರಕರಣಗಳ ಸಂಖ್ಯೆ ಜನರಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಸರ್ಕಾರದ ಇಷ್ಟೆಲ್ಲಾ ಕ್ರಮಗಳ ಹೊರತಾಗಿಯೂ ಈ ಮಟ್ಟದಲ್ಲಿ ಕೊರೊನಾ ಹರಡುತ್ತಿರುವುದು ನೋಡಿದಾಗ ಕೊರೊನಾದ ಅಟ್ಟಹಾಸ ಮೆರೆಯುತ್ತಿರುವ ಹಾಗಿದೆ. ಆದರೆ ಇದರ ನಡುವೆಯೇ ಒಂದು ಸಮಾಧಾನಕರ ವಿಷಯ ಏನೆಂದರೆ ರಾಜ್ಯದಲ್ಲಿ ಸೋಂಕಿತರ ಗುಣಮುಖ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಒಟ್ಟಾರೆ ಶೇ 57 ರಷ್ಟು ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ ಎಂಬ ವಿಷಯವನ್ನು ತಿಳಿಸಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್.

ರಾಜ್ಯದಲ್ಲಿ ಇದುವರೆವಿಗೂ 7,507 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದಾರೆ. ಅಲ್ಲದೇ ಪ್ರಸ್ತುತ 5,472 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 5,66,542 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲಿ ಶೇಕಡ 2.21 ರಷ್ಟು ಮಂದಿಗೆ ಮಾತ್ರ ಸೋಂಕು ಕಂಡುಬಂದಿದೆ ಎಂದಿದ್ದು, ರಾಷ್ಟ್ರಮಟ್ಟದಲ್ಲಿ ಮರಣ ಪ್ರಮಾಣವು 3% ಇದ್ದು, ಇದು ನಮ್ಮ ರಾಜ್ಯದಲ್ಲಿ ಕೇವಲ 1.56 % ರಷ್ಟಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇನ್ನು ರಾಜ್ಯದ ರಾಜಧಾ‌ನಿಯಲ್ಲಿ ಜೂನ್ 23 ರಂದು 1556 ಇದ್ದ ಸೋಂಕು ಪ್ರಕರಣಗಳು ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕಳೆದ 5 ದಿನಗಳ ಅವಧಿಯಲ್ಲಿ ಕೋವಿಡ್ ಪ್ರಕರಣಗಳು ದುಪ್ಪಟ್ಟಾಗಿದೆ‌. ನೆನ್ನೆಯ ವೇಳೆಗೆ ರಾಜ್ಯದಲ್ಲಿ 3419 ಪ್ರಕರಣಗಳನ್ನು ಹೊಂದಿದೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ 25.92% ಪ್ರಕರಣಗಳು ಬೆಂಗಳೂರಿನಲ್ಲಿವೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಸೋಂಕಿತರಿಗೆ ಸರಿಯಾದ ರೀತಿಯ ಚಿಕಿತ್ಸೆ ಒದಗಿಸಲು ರಾಜ್ಯ ಸರ್ಕಾರವು ಸಜ್ಜಾಗಿದೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here