ಭಾರತದಲ್ಲಿ ಅನೇಕ ಪುರಾತನ ಅಥವಾ ಪ್ರಾಚೀನ ಮಂದಿರಗಳಿವೆ. ಸಹಸ್ರ ವರ್ಷಗಳಷ್ಟು ಹಳೆಯದಾದ ಮಂದಿರಗಳು ಕೂಡಾ ಇನ್ನೂ ಗಟ್ಟಿಯಾಗಿವೆ. ಇನ್ನು ಪುರಾತನ ಮಂದಿರಗಳಲ್ಲಿ ಅನೇಕ ಮಂದಿರಗಳು ತಮ್ಮಲ್ಲಿ ಯಾವುದೋ ಒಂದು ನಿಗೂಢತೆಯನ್ನು, ಗೌಪ್ಯತೆಯನ್ನು ಅಡಗಿಸಿಕೊಂಡು, ಸದಾ ಒಂದು ರಹಸ್ಯದ ಗೂಡಾಗಿ ಉಳಿದಿವೆ. ಭಕ್ತರು ಇಂತಹ ದೇವಾಲಯಗಳಲ್ಲಿ ಬಹಳ ಭಕ್ತಿ ಶ್ರದ್ಧೆಯಿಂದ ದೇವರನ್ನು ಆರಾಧನೆ ಮಾಡುತ್ತಾರೆ. ಅಂತಹ ರಹಸ್ಯಗಳನ್ನು ಒಳಗೊಂಡ ಒಂದು ಮಂದಿರ ಮಾತೆ ಸುಗಾಲಿ ದೇವಿಯ ಮಂದಿರ.‌ ರಾಜಸ್ಥಾನದ ಔವಾ ಜಿಲ್ಲೆಯಲ್ಲಿರುವ ಈ ದೇವಾಲಯ ತನ್ನದೇ ಆದ ವಿಶೇಷವನ್ನು ಹೊಂದಿದೆ.

ಎಲ್ಲಾ ಶಕ್ತಿ ದೇವತೆಗಳಂತೆ ಇದು ಕೂಡಾ ಒಂದು ಶಕ್ತಿ ದೇವಿಯ ದೇವಾಲಯ. ಆದರೆ ಇಲ್ಲಿನ ದೇವಿಯ ವಿಗ್ರದಲ್ಲಿ ಒಂದು ವಿಶೇಷ ಇದೆ. ಅದೇನೆಂದರೆ ದೇವಿಯ ಕೊರಳ ಭಾಗ ಓರೆಯಾಗಿದೆ. ಅಂದರೆ ವಿಗ್ರಹದಲ್ಲಿ ದೇವಿಯ ಕೊರಳು ಓರೆಯಾಗಿರುವುದರಿಂದ ಅಲ್ಲಿಂದ ಶಿರದವರೆಗೂ ಆ ಭಾಗ ಒಂದು ದಿಕ್ಕಿಗೆ ಬಾಗಿದಂತೆ ಕಾಣುತ್ತದೆ. ನಿಜಕ್ಕೂ ಅದೊಂದು ಅದ್ಭುತ ಎನಿಸುತ್ತದೆ. ಇನ್ನು ಈ ಕೊರಳ ಭಾಗವನ್ನು ಸರಿ ಪಡಿಸಲು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿ, ಮತ್ತೆ ಆ ಭಾಗ ಓರೆಯಾಗುತ್ತದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತರು.

ಅಲ್ಲದೆ ಹಳೆದ ಮೂರ್ತಿಯ ಬದಲಿಗೆ ಹೊಸದಾಗ ಮೂರ್ತಿಯನ್ನೇ ಮಾಡಿಸಿ ಇಟ್ಟರೂ, ಅದರಲ್ಲೂ ಕೂಡಾ‌ ದೇವಿಯ ಕೊರಳ ಭಾಗ ಓರೆಯಾದುದನ್ನು ನೋಡಿ ಈಗ ಅದು ದೇವಿಯ ಇಚ್ಛೆ ಎಂದು ಸುಮ್ಮನಾಗಿದ್ದಾರೆ. ಸ್ಥಳ ಪುರಾಣದ ಪ್ರಕಾರ ಭಾರತದ ಸ್ವತಂತ್ರ ಸಂಗ್ರಾಮ ವೇಳೆಯಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರು ಈ ಆಲಯದಲ್ಲಿ ದೇವಿಯ ದರ್ಶನ ಮಾಡಲು ಬರುತ್ತಿದ್ದರೆಂದು, ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬನು ಹೊಡೆದ ಗುಂಡು ದೇವಿಯ ವಿಗ್ರಹದ ಕೊರಳ ಭಾಗಕ್ಕೆ ತಗುಲಿ, ಅಂದಿನಿಂದ ಅದು ಹಾಗೇ ಉಳಿದಿದೆ ಎಂದು ಹೇಳಲಾಗಿದೆ. ಮೂಲ ವಿಗ್ರಹದ ಸ್ಥಾನಕ್ಕೆ ಹೊಸ ವಿಗ್ರಹ ತಂದರೂ ಅದರ ಕೊರಳು ಓರೆಯಾದುದು ನಿಜಕ್ಕೂ ವಿಸ್ಮಯವೇ ಅಲ್ಲವೇ?

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here