ಚುನಾವಣಾ ಪ್ರಚಾರದ ಅಬ್ಬರದಲ್ಲಿ ರಂಗೇರಿದ್ದ, ನಾಡಿನ ಮಾದ್ಯಮಗಳ ಹಾಗೂ ಜನರ ಗಮನವನ್ನು ತನ್ನತ್ತ ಸೆಳೆದಿದ್ದ ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಇಂದು ಪ್ರಚಾರ ಕಾರ್ಯಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತ ಅಂಬರೀಶ್ ಅವರು ನಡೆಸಿದ ಬೃಹತ್ ಸಮಾವೇಶಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸುಮಲತ ಅಂಬರೀಶ್ ಅವರಿಗೆ ಜೈಕಾರ ಹಾಕಿದ್ದಾರೆ. ನಟ ಯಶ್ ಹಾಗೂ ದರ್ಶನ್ ಅವರ ನಂತರ ಸುಮಲತ ಅಂಬರೀಶ್ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸುಮಲತ ಅವರು ಆರಂಭದಲ್ಲಿಯೇ ನಾಲ್ಕು ವಾರಗಳ ಹಿಂದೆ ನಾನು ಇದೇ ಜಾಗದಲ್ಲಿ ‌ನಿಂತು ಮಾತಾಡಿದ್ದೆ, ಈಗ ಈ ನಾಲ್ಕು ವಾರಗಳ ಪಯಣದಲ್ಲಿ ಬಹಳಷ್ಟು ತಿಳಿದುಕೊಂಡೆ ಎಂದಿದ್ದಾರೆ.

ಅಲ್ಲಿ ನೆರೆದಿರುವ ಜನರನ್ನು ಉದ್ದೇಶಿಸಿ ನೀವೆಲ್ಲಾ ಸ್ವಾಭಿಮಾನದ ಪ್ರತೀಕ ಆಗಬೇಕು ಎಂದಿದ್ದಾರೆ. ಈ ನಾಲ್ಕು ವಾರದ ಪಯಣದಲ್ಲಿ ಮಂಡ್ಯದ ಜನರಲ್ಲಿ ದೇವರನ್ನು ಕಂಡೆ. ಅಂಬರೀಶ್ ಅವರು ಎಲ್ಲೋ ಹೋಗಿಲ್ಲ. ಅವರನ್ನು ನೀವೆಲ್ಲರೂ ನಿಮ್ಮಲ್ಲೇ , ಮಂಡ್ಯದಲ್ಲೇ ಜೀವಂತವಾಗಿರಿಸಿದ್ದೀರಿ. ನನಗೆ ಅವರು ಇಲ್ಲೇ ಇದ್ದಾರೆ ಅನ್ನುವ ಅನುಭೂತಿಯನ್ನು ನೀವು ನೀಡಿದ್ದೀರಿ ಎಂದು ಧನ್ಯವಾದ ಹೇಳಿದ್ದಾರೆ. ರಾಜಕೀಯಕ್ಕೆ ಬರಬೇಕೆಂಬುದು ನಾನು ಒಂದೇ ದಿನದಲ್ಲಿ ತೆಗೆದುಕೊಂಡ ನಿರ್ಧಾರವಲ್ಲ, ಬಹಳ ಆಲೋಚಿಸಿದ ನಂತರ ಮಾಡಿದ ನಿರ್ಧಾರವದು ಎಂದು ಅವರು ಹೇಳಿದ್ದಾರೆ.

ರಾಜಕೀಯ ಪ್ರವೇಶ ಮಾಡಬೇಕೆಂಬ ನಿರ್ಧಾರ ಮಾಡಿದಾಗ ನಾನು ಒಂಟಿ. ಆದರೆ ಈಗಲ್ಲ. ನನ್ನ ಬೆಂಬಲಕ್ಕೆ ಧೈರ್ಯವಾಗಿ ಕಾಂಗ್ರೆಸ್ ನಿಂದ ಉಚ್ಛಾಟಿಸಲ್ಪಟ್ಟರೂ ಸ್ವಾಭಿಮಾನವನ್ನು ಬಿಡುವುದಿಲ್ಲ ಎಂದು ಬಹಿರಂಗವಾಗಿ ‌ಬೆಂಬಲ ನೀಡಿದ ಕಾಂಗ್ರೆಸ್ ಶಾಸಕರು ಜೊತೆಗಿದ್ದಾರೆ. ಅವರಿಗೆ ಧನ್ಯವಾದಗಳು , ನಾನು ಗೆಲ್ಲಲಿ ಅಥವಾ ಸೋಲಲಿ ಆದರೆ ಅವರೊಂದಿಗೆ ಸದಾ ಇರುತ್ತೇನೆ ಎಂದ ಅವರು, ಗಂಡನನ್ನು ಕಳೆದುಕೊಂಡು ನಾನಿರುವ ಪರಿಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ನಿಂತು ಧೈರ್ಯ ನೀಡದೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಯಶ್ ಹಾಗೂ ದರ್ಶನ್ ನನ್ನ ಮಕ್ಕಳಂತೆ ನನ್ನ ಜೊತೆ ನಿಂತಿದ್ದಾರೆ. ಅದೇ ಅವರು ಮಾಡಿದ ತಪ್ಪಾ? ಅವರ ಬಗ್ಗೆ ಮನಸ್ಸಿಗೆ ಬಂದಂತೆಲ್ಲಾ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದ ಅವರು, ತಮ್ಮ ಅಭ್ಯರ್ಥಿ ಪ್ರಚಾರಕ್ಕೆ ಸಿಎಂ, ಮಾಜಿ ಪಿಎಂ, ನ್ಯಾಷನಲ್ ಕಾಂಗ್ರೆಸ್ ನ ಅಧ್ಯಕ್ಷರು, ಅಭ್ಯರ್ಥಿಯ ತಾಯಿ, ಅಂಕಲ್ ಎಲ್ಲಾ ಬರಬಹುದು ಆದರೆ ನನ್ನ ಪ್ರಚಾರಕ್ಕೆ ಯಾರಾದರೂ ಬಂದರೆ ಟೀಕೆ ಮಾಡುವುದು ಸೇಡಿನ ರಾಜಕಾರಣವಲ್ಲದೇ ಮತ್ತೇನು? ಎಂದ ಅವರು ರಾಜಕಾರಣದಲ್ಲಿ ನಾನು ರಾಕ್ಷಸತ್ವ ಕೂಡಾ ನೋಡಿದೆ ಎಂದಿದ್ದಾರೆ.

ನಾನು ಮಂಡ್ಯದ ಸೊಸೆ ಎಂಬುದು ವಾಸ್ತವ, ಜನರು ಅದನ್ನು ಒಪ್ಪಿದ್ದಾರೆ, ಪ್ರಚಾರಕ್ಕೆ ಹೋದ ಕಡೆ ಜನರು ಅವರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ,ಯಾವ ರೀತಿ ಸರ್ಕಾರ ಅವರನ್ನು ಕಡೆಗಣಿಸಿದ ಎಂದು ಹೇಳಿದ್ದಾರೆ ಎಂದರು ಸುಮಲತ ಅವರು. ಸಿಎಂ ಅವರಿಗೆ ಮಹಿಳೆ ಎಂಬ ಗೌರವವಿಲ್ಲ, ದೇಶದ ಸೈ‌ನಿಕರ ಬಗ್ಗೆ ಗೌರವವಿಲ್ಲ ಆದರೂ ತಾವು ಹೇಳಿದ್ದು ಸರಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅವರು ಟೀಕೆ ಮಾಡಿದ್ದಾರೆ.

ಒಬ್ಬ ಹೆಣ್ಣು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲೋದು ತಪ್ಪಾ? ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇ‌‌ನೆ ಹೊರತು ತಪ್ಪು ಮಾಡಿಲ್ಲ. ಆದರೆ ನನ್ನ ಒಬ್ಬಳ ವಿರುದ್ದ ಮುಖ್ಯಮಂತ್ರಿ, ಮಾಜಿ ಪ್ರಧಾ‌ನಿ, ಕಾಂಗ್ರೆಸ್ ಅಧ್ಯಕ್ಷರು,ಅವರ ಕಡೆಯ ಎಂಎಲ್ಎ ,ಎಂಪಿ ಗಳು ಹೀಗೆ ಇಷ್ಟು ಜನ ಕಣದಲ್ಲಿ ತಮ್ಮ ಅಭ್ಯರ್ಥಿಗಾಗಿ ಬಂದಿದ್ದಾರೆ. ಇದು ಅವರಿಗೆ ಒಬ್ಬ ಮಹಿಳೆ ಬಗ್ಗೆ ಎಷ್ಟು ಭಯ ಇದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕೆ ಮಾಡಿದ್ದಾರೆ. ಈ ಮೂಲಕ ರಾಷ್ಟ್ರೀಯ ನಾಯಕರನ್ನು ಕರೆತಂದು ಪ್ರಚಾರ ಮಾಡುತ್ತಿರುವ ಕುಮಾರಸ್ವಾಮಿ ಅವರಿಗೆ ಸುಮಲತ ಪರೋಕ್ಷವಾಗಿ ಗೆಲ್ಲುವಂತೆ ಸವಾಲ್ ಎಸೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here