ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ನಿನ್ನೆ ಮೂರು ಜನ ಸುಮಲತ ಹೆಸರಿನ ಮಹಿಳೆಯರು ನಾಮಪತ್ರವನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ , ಪಕ್ಷೇತರವಾಗಿ ಚುನಾವಣಾ ಕಣಕ್ಕಿಳಿದಿರುವ ಸುಮಲತ ಅಂಬರೀಶ್ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಖಡಕ್ಕಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮೂರಲ್ಲ ನೂರು ಜನ ಸುಮಲತ ನಾಮಪತ್ರ ಹಾಕಿದರೂ ಅವರು ಗೆಲ್ಲೋಕೆ ಸಾಧ್ಯವಿಲ್ಲ. ಮಂಡ್ಯ ಜನರು ಮೂಢರಲ್ಲ, ಮೌಡ್ಯ ಅವರಲ್ಲಿ ಇಲ್ಲ, ಅವರಿಗೆಲ್ಲಾ ಸುಮಲತ ಅಂಬರೀಶ್ ಯಾರು ಎಂಬುದು ಗೊತ್ತಿದೆ ಎಂದು ಅವರು ಹೇಳಿದ್ದಾರೆ. ಮಂಡ್ಯದ ಬೂಕನಕೆರೆಯಲ್ಲಿ ಬುಧವಾರ ಮಾತನಾಡಿದ ಅವರು ಜೆಡಿಎಸ್ ನದು ಮೋಸದ ರಾಜಕಾರಣ ಎಂದು ಟೀಕೆ ಮಾಡಿದ್ದಾರೆ.

ನಾನು ಒಂಟಿಯಲ್ಲ. ನನ್ನ ಪರವಾಗಿ ನನ್ನ ಮಕ್ಕಳಿದ್ದಾರೆ. ನಟ ದರ್ಶನ್ ಗೆ ಜೈಕಾರ ಹಾಕಿದವರಿಗೆ ಲಾಠಿ ಚಾರ್ಜ್ ಮಾಡಲಾಗಿದೆ. ಏಪ್ರಿಲ್ ಹದಿನೆಂಟರಂದು ನಿಮ್ಮ ಕೈಯಲ್ಲಿ ಲಾಠಿ ಇರುತ್ತದೆ ಅದನ್ನು ಅಂದು ಉಪಯೋಗಿಸಿ. ಮೋಸ, ಕುತಂತ್ರ ಹಾಗೂ ಸುಳ್ಳುಗಳು ಎಷ್ಟು ದಿನ ಇರುತ್ತದೆ ನೋಡೋಣ ಎಂದು ಗುಡುಗಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸುವ ಮೂಲಕ ಯಾರು ಯಾರನ್ನು ಎದುರು ಹಾಕಿಕೊಳ್ಳುತ್ತಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ಒಬ್ಬ ಮಾಜಿ ಪ್ರಧಾನಿ, ಒಬ್ಬ ಸಿಎಂ, ಎಂಟು ಮಂದಿ ಶಾಸಕರು, ಮೂರು ಎಂಎಲ್ ಸಿಗಳು ಹಾಗೂ ಮೂರು ಮಂತ್ರಿ ಗಳನ್ನು ನಾನು ಎದುರು ಹಾಕಿಕೊಂಡಿದ್ದೇನೆ.

ಕಾಂಗ್ರೆಸ್ ನ ಧೀಮಂತ ನಾಯಕರು ಕೂಡಾ ತನ್ನನ್ನು ಎದುರು ಹಾಕಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಮಂಡ್ಯ ಜನ ಮಠ್ಠಾಳರಲ್ಲ ಅವರಿಗೆ ಸ್ವಾಭಿಮಾನ ಇದೆ. ಅವರನ್ನೆಲ್ಲಾ ನಂಬಿ ತಾನು ಈ ಸಾಹಸಕ್ಕೆ ಕೈ ಹಾಕಿರುವುದಾಗಿ ಹೇಳಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯ ಮೇಲೆ ಯಾರು ಯಾರು ಯಾರನ್ನು ಬೈದುಕೊಂಡಿದ್ದರೋ ಅವರೇ ಈಗ ಜೋಡೆತ್ತುಗಳಾಗಿದ್ದಾರೆ ಎಂದು ಹೇಳುತ್ತಾ, ಯಾವ ಜೋಡೆತ್ತುಗಳು ಚುನಾವಣೆಯಲ್ಲಿ ಗೆಲ್ಲುವುದು ನೋಡೋಣ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here