ನಿರ್ದೇಶಕರಾದ ಸೂರಿ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಎಂದ ತಕ್ಷಣವೇ ನೆನಪಾಗುವ ಚಿತ್ರ ಟಗರು. ಈ ಚಿತ್ರದ ದೊಡ್ಡ ಯಶಸ್ಸು ಎಲ್ಲರಿಗೂ ತಿಳಿದದ್ದೇ.‌ ಇದೇ ಚಿತ್ರದಲ್ಲಿ ನಟಿಸಿದ್ದ ಧನಂಜಯ್ ಅವರಿಗೆ ಡಾಲಿ ಎಂಬ ಹೆಸರೇ ಬಂದು ಬಿಟ್ಟಿತ್ತು. ಇನ್ನು ಟಗರು ಚಿತ್ರವನ್ನು ನಿರ್ಮಾಣ ಮಾಡಿದವರು ಕೆ.ಪಿ‌.ಶ್ರೀ ಕಾಂತ್. ಈಗ ಟಗರು ಬ್ಲಾಕ್‌ಬಸ್ಟರ್ ನಿರ್ದೇಶಕ ಹಾಗೂ ನಿರ್ಮಾಪಕರ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಇವರೊಂದಿಗೆ ಡಾಲಿ ಧನಂಜಯ್ ಅವರು ಕೂಡಾ ಸೇರಿ, ಚಿತ್ರೀಕರಣ ಆರಂಭಿಸಿರುವ ಹೊಸ ಸಿನಿಮಾದ ಹೆಸರು “ಪಾಪ್ ಕಾರ್ನ್ ಮಂಕಿ ಟೈಗರ್” ನಿಜವಾಗಿಯೂ ಹೆಸರೇ ಸಿನಿ ರಸಿಕರನ್ನು ತಮ್ಮತ್ತ ಸೆಳೆಯುವಂತಿದೆ.

ಈ ಚಿತ್ರದ ವಿಶೇಷವೆಂದರೆ ನಿರ್ದೇಶಕ ಸೂರಿಯವರು ಈ ಚಿತ್ರದಲ್ಲಿ ಅನೇಕ ರಂಗಭೂಮಿ ಕಲಾವಿದರಿಗೆ ಪ್ರಾಶಸ್ತ್ಯವನ್ನು ನೀಡಿದ್ದಾರೆ. ಟಗರು ಚಿತ್ರದಲ್ಲಿ ಖಳ ನಟನಾಗಿ ಶಿವಣ್ಣನವರ ಮುಂದೆ ನಟಿಸಿ ಮೆಚ್ಚುಗೆ ಗಳಿಸಿದ ಡಾಲಿ ಧನಂಜಯ್  ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಆದ್ದರಿಂದ ಸಹಜವಾಗಿಯೇ ಧನಂಜಯ್ ಅವರ ಎದುರಿಗೆ ಎಂತಹ ವಿಲನ್ ಇರುತ್ತಾರೆಂಬುದು ಎಲ್ಲರಲ್ಲೂ ನಿರೀಕ್ಷೆಗಳನ್ನು ಹುಟ್ಟು ಹಾಕಿರುವುದು ಮಾತ್ರವೇ ಅಲ್ಲದೆ ಕುತೂಹಲವನ್ನು ಕೂಡಾ ಕೆರಳಿಸಿದೆ. ಅದಕ್ಕಾಗಿ ನಿರ್ದೇಶಕ ಸೂರಿಯವರು ಕೂಡಾ ವಿಲನ್ ಪಾತ್ರಕ್ಕಾಗಿ ಒಬ್ಬ ದಕ್ಷ ನಟನ ಹುಡುಕಾಟದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅದೂ ಅಲ್ಲದೆ ಈ ಚಿತ್ರದಲ್ಲಿ ವಿಲನ್ ಪಾತ್ರಧಾರಿಯನ್ನು ಹೊಸ ಮ್ಯಾನರಿಸಂನಲ್ಲಿ ತೋರಿಸುವ ಯೋಜನೆ ಕೂಡಾ ನಿರ್ದೇಶಕರದ್ದಾಗಿದೆ.

ಈ ಎಲ್ಲಾ ವಿಚಾರಗಳಿಂದಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ವಿಲನ್ ಯಾರಾಗಲಿದ್ದಾರೆ ಎಂಬುದು ಸದ್ಯಕ್ಕಂತೂ ಉತ್ತರವಿಲ್ಲದ ಪ್ರಶ್ನೆ. ಆದರೆ ಖಳ ನಟನ ಪಾತ್ರವಂತೂ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುವುದರಲ್ಲಿ ಮಾತ್ರ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಸೂರಿಯವರು ತಮ್ಮ ಶೈಲಿಯಲ್ಲಿ ಈಗಾಗಲೇ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆಶ್ಚರ್ಯದ ವಿಷಯವೆಂದರೆ ಯಾವುದೇ ಸೆಟ್ ನಲ್ಲಿ ಚಿತ್ರೀಕರಣ ನಡೆದಿಲ್ಲ. ಬದಲಿಗೆ ಒಂದು ಕೋಣೆಯಲ್ಲಿ ಚಿತ್ರೀಕರಣ ನಡೆದಿದೆ. ಅದರ ಜೊತೆಜೊತೆಗೆ ಹಲವು ರಮ್ಯ ತಾಣಗಳಲ್ಲಿ ಕೂಡಾ ಚಿತ್ರೀಕರಣ ಮಾಡಲಾಗುತ್ತಿದೆ. ಒಟ್ಟಾರೆ ಈ ಚಿತ್ರದ ವಿಲನ್ ಯಾರು ? ಏನೆಂಬುದು ಈ ವಿಭಿನ್ನ ಶೀರ್ಷಿಕೆಯ ಚಿತ್ರದ ಕತೂಹಲ ಘಟ್ಟವಾಗಿದೆ.ಅದ್ದೂರಿಯಾಗಿ ನಿರ್ಮಿಸಲಾಗುತ್ತಿರುವ ಪಾಪ್ ಕಾರ್ನ್ ಮಂಕಿ‌ ಟೈಗರ್ ಸದ್ಯದಲ್ಲೇ ಚಿತ್ರೀಕರಣಕ್ಕಾಗಿ ಮುಂಬೈಗೆ ಹಾರಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here