ರಾಜ್ಯದಲ್ಲಿ ಈ ಹಿಂದೆ ಅಂದರೆ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಅಸ್ತಿತ್ವದಲ್ಲಿದ್ದ‌‌ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳ ಪೋನ್ ಮಾತ್ರವಲ್ಲ, ರಾಜ್ಯದ ಕೆಲವು ಪ್ರಮುಖ ‌ಮಠಾಧೀಶ್ವರರ ಫೋನ್ ಸಂಭಾಷಣೆಯನ್ನು ಕೂಡಾ ಕದ್ದಾಲಿಕೆ ಮಾಡಲಾಗಿದೆ ಎಂದು ಸಿಬಿಐ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸರ್ಕಾರದ ಅಸ್ಥಿರತೆಯ ಪ್ರಶ್ನೆ ಉದ್ಭವಿಸಿದಾಗಲೆಲ್ಲಾ , ಶಾಸಕರು ತಮ್ಮ ಸಮುದಾಯದ ಮಠಾಧೀಶರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯುವುದು ಸಾಮಾನ್ಯವಾಗಿ ನಡೆದು ಬಂದಿರುವ ಅಭ್ಯಾಸ.

ಈ ಹಿನ್ನೆಲೆಯಲ್ಲಿ ಮಠಾಧೀಶರ ಹಾಗೂ ಅವರ ಆಪ್ತರ ಮೊಬೈಲ್ ಫೋನ್ ಕರೆಗಳನ್ನು ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಸಿಸಿಬಿ ಅಧಿಕಾರಿಗಳು ಕದ್ದಾಲಿಕೆ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆಯೆಂದು ಹೇಳಲಾಗಿದೆ. ಸಿಬಿಐ ವಿಚಾರಣೆಯ ವೇಳೆಯಲ್ಲಿ ಸಿಸಿಬಿ ತಾಂತ್ರಿಕ ವಿಭಾಗದ ಇನ್ಸ್ಪೆಕ್ಟರ್ ಒಬ್ಬರು ಈ ಬಗ್ಗೆ ಹೇಳಿಕೆ ನೀಡಿದ್ದು, ಆದಿ ಚುಂಚನಗಿರಿಯ ಮಠಾಧೀಶರ ಸುಮಾರು 720 ಗಂಟೆಗಳ ಅವಧಿಯ ಫೋನ್ ಸಂಭಾಷಣೆಯನ್ನು ಕದ್ದು ಆಲಿಸಲಾಗಿದೆ ಎನ್ನಲಾಗಿದೆ. ಒಕ್ಕಲಿಗ ಸಮುದಾಯದ ಶಾಸಕರ ನಡೆ ಏನೆಂಬುದು ಮುಖ್ಯಮಂತ್ರಿ ಅವರಿಗೆ ಇದರಿಂದ ತಿಳಿಯುತ್ತಿತ್ತು ಎನ್ನಲಾಗಿದೆ.

ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ಮಠಾಧೀಶ್ವರರ ಮೊಬೈಲ್ ಟೆಲಿಫೋನ್ ಕದ್ದಾಲಿಕೆ ನಡೆದಿದೆ. ಇನ್ನು ಟೆಲಿಫೋನ್ ಕದ್ದಾಲಿಕೆಯ ಪ್ರಕರಣದ ತನಿಖೆ ಆಗಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಆಗಿನ ಗೃಹ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದರು. ಈಗಾಗಲೇ ಸಿಬಿಐ ವಿಚಾರಣೆ ನಡೆಸಿದ್ದು, ವಿಚಾರಣೆ ಏನಾದರೂ ಇನ್ನಷ್ಟು ತೀವ್ರವಾದರೆ ಮಠಾಧೀಶರು ಕೂಡಾ ಸಿಬಿಐ ಗೆ ತಮ್ಮ ಹೇಳಿಕೆಗಳನ್ನು ನೀಡಬೇಕಾಗುವುದು ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here