ಪರಭಾಷೆ ಚಿತ್ರರಂಗದ ಕಡೆ ಗಮನಿಸಿದಾಗ ಅಲ್ಲಿನ ಸಿನಿಮಾಗಳಲ್ಲಿ ಅಲ್ಲಿನ ಹಿರಿಯ ಹಾಸ್ಯ ಕಲಾವಿದರು ಇನ್ನೂ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹಿರಿಯ ಹಾಸ್ಯ ನಟರಾರು ಸಿನಿಮಾಗಳಲ್ಲಿ ಕಾಣಿಸುವುದಿಲ್ಲ. ಒಂದು ಕಾಲದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡು ಜನರನ್ನು ನಕ್ಕು ನಲಿಸುತ್ತಿದ್ದ ಹಾಸ್ಯ ನಟರು ಏನಾದರೆಂಬ ಅನುಮಾನ ಕೂಡಾ ಮೂಡುತ್ತದೆ. ಇದಕ್ಕೆ ಪೂರಕ ಎಂಬಂತೆ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಾರು ನೂರಕ್ಕಿಂತ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಟೆನ್ನಿಸ್ ಕೃಷ್ಣ ಅವರು ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾ ದಲ್ಲೂ ಕಾಣುತ್ತಿಲ್ಲ.

ಇದೇ ವಿಷಯವಾಗಿ ಮಾತನಾಡಿರುವ ಟೆನ್ನಿಸ್ ಕೃಷ್ಣ ಅವರು ಬೇರೆ ಭಾಷೆಗಳಲ್ಲಿ ಹಾಸ್ಯ ಕಲಾವಿದರಿಗೆ ಅವರು ಸಾಯುವವರೆಗೆ ಅವಕಾಶ ನೀಡುತ್ತಾರೆ. ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ ಅವರಿಗೆ ಆರೋಗ್ಯ ಸರಿ ಇಲ್ಲದಿದ್ದ ಸಮಯದಲ್ಲೂ ಕೂಡಾ ಅವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರು. ಆದರೆ ನಮ್ಮಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಹಿರಿಯ ನಟರಿಗೆ ಅವಕಾಶ ಸಿಗುತ್ತಿಲ್ಲ. ಆದ ಕಾರಣ ನಾವು ಬೇರೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಅವರು ಹೇಳುತ್ತಾ , ಹೋದ ಕಡೆ ಅಭಿಮಾನಿಗಳು ಯಾವ ಸಿನಿಮಾ ಮಾಡುತ್ತಿದ್ದೀರಿ ? ಏಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದಾಗ ಉತ್ತರಿಸುವುದು ಕಷ್ಟ ಎಂದಿದ್ದಾರೆ.

ಅಲ್ಲದೆ ಕನ್ನಡ ಸಿನಿಮಾಗಳಲ್ಲಿ ಹಿರಿಯರು ಇರಬೇಕು ಎಂದಿರುವ ಅವರು ನನಗೆ ಸಿನಿಮಾ ಅವಕಾಶಗಳನ್ನು ನೀಡಿ ಎಂದು ಕೇಳುತ್ತಿಲ್ಲ. ಒಂದೊಂದು ಸಿನಿಮಾದಲ್ಲಿ ಒಬ್ಬೊಬ್ಬರನ್ನು ಹಾಕಿಕೊಳ್ಳಿ‌ ಎಂದಿದ್ದಾರೆ. ಹಿರಿಯ ಹಾಸ್ಯ ಕಲಾವಿದರಾದ ಬ್ಯಾಂಕ್ ಜನಾರ್ಧನ್ , ಹೊನ್ನವಳ್ಳಿ ಕೃಷ್ಣ, ಬಿರಾದರ್ ಹೀಗೆ ಎಲ್ಲರನ್ನೂ ಒಂದೊಂದು ಸಿನಿಮಾದಲ್ಲಿ ಹಾಕಿಕೊಳ್ಳಿ ಎಂದಿದ್ದಾರೆ. ಟೆನ್ನಿಸ್ ಕೃಷ್ಣ ಅವರ ಮಾತು ಅಕ್ಷರಶಃ ನಿಜ ಎನಿಸಿದೆ. ಪರಭಾಷೆಗಳಲ್ಲಿ ಹಿರಿಯ ಹಾಸ್ಯ ನಟರು ಇನ್ನೂ ತೆರೆಯ ಮೇಲೆ ಮಿಂಚುವಾಗ, ನಮ್ಮ ಕನ್ನಡದ ಅಪ್ಪಟ ಹಾಸ್ಯ ಕಲಾವಿದರು ಮಾತ್ರ ಸಿನಿಮಾಗಳಲ್ಲಿ ಅವಕಾಶ ಇಲ್ಲದೇ ಇರುವುದು ವಿಪರ್ಯಾಸ ಎನಿಸಿದೆ.‌

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here