ಬೆಂಗಳೂರು: ಸಾಮಾನ್ಯವಾಗಿ ನಾವು ಕೊಲೆ, ದರೋಡೆ, ಕಳ್ಳತನಗಳಂತ ಸಂಗತಿಗಳನ್ನು ಪೊಲೀಸರ ಮುಂದೆ ಹೇಳಿಕೊಳ್ಳುತ್ತೇವೆ. ಆದರೆ ಪೊಲೀಸರೇ ರೌಡಿಗಳಂತೆ ವರ್ತಿಸುತ್ತಿರುವುದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಬಂದಿದೆ.
ಜನಸಾಮಾನ್ಯರನು ರಕ್ಷಿಸುವ ಪೊಲೀಸ್ ಕೈಯಲ್ಲಿ ಲಾಂಗು ಮಚ್ಚು ಹಿಡಿದು ರೋಡಿಗೆ ಇಳಿದಿರುವ ಘಟನೆ ಒಂದು ನಡೆದಿದ್ದು, ಈ ಪೊಲೀಸ್ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್ ಎಂಬುವವರು ದಯಾನಂದ್, ಶಶಿಧರ್ ಎಂಬ ಯುವಕರ ಮೇಲೆ ರೌಡಿಗಳ ರೀತಿ ಲಾಂಗ್ನಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ASI ಶ್ರೀನಿವಾಸ್ ವಿರುದ್ಧ FIR ದಾಖಲಾಗಿದೆ. ಲಾಂಗ್ನಿಂದ ಎಎಸ್ಐ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅ.26ರ ರಾತ್ರಿ ವಿಜಯನಗರದ RPC ಲೇಔಟ್ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ರೌಡಿಯಂತೆ ಲಾಂಗ್ ಬೀಸಿ ದರ್ಪ ಮೆರೆದಿದ್ದಾರೆ. ASI ಶ್ರೀನಿವಾಸ್ ಅವರ ಅಣ್ಣನ ಮಗ ಆನಂದ್, ತೇಜಸ್ವಿನಿ ಬಾರ್ನಲ್ಲಿ ಮದ್ಯಪಾನ ಮಾಡಲು ಹೋಗಿದ್ದ. ಅದೇ ಬಾರಲ್ಲಿ ದಯಾನಂದ್ ಮತ್ತು ಶಶಿಧರ್ ಎಂಬ ಯುವಕರು ಬಿಯರ್ ಕುಡಿಯಲು ಹೋಗಿದ್ದರು. ಆಗ ಬಾರ್ನಲ್ಲಿ ಆನಂದ್ ಮತ್ತು ದಯಾನಂದ್, ಶಶಿಧರ್ ನಡುವೆ ಚಿಕ್ಕ ಗಲಾಟೆಯಾಗಿದೆ. ಈ ವೇಳೆ ನೀವಿಬ್ಬರು ಯಾವ ಏರಿಯಾ ಎಂದು ಆನಂದ್ ಕೇಳಿದ್ದಾನೆ. ನಮ್ದು ಇದೇ ಏರಿಯಾ, ನಿಂದು ಯಾವ ಏರಿಯಾ ಎಂದು ದಯಾನಂದ್ ಕೇಳಿದ್ದಾನೆ. ಆಗ ನಂದು ಇದೇ ಏರಿಯಾ ಬೇಕಾದ್ರೆ ಬಾ ಮನೆ ತೋರಿಸ್ತೀನಿ ಎಂದು ಆನಂದ್ ಹೇಳಿದ್ದು ತನ್ನದೇ ಆಟೋದಲ್ಲಿ ಇಬ್ಬರನ್ನು ಕರೆದುಕೊಂಡು ನೇರವಾಗಿ RPC ಲೇಔಟ್ 8th ಕ್ರಾಸ್ ನಲ್ಲಿರುವ ತನ್ನ ಚಿಕ್ಕಪ್ಪ ಶ್ರೀನಿವಾಸ್ ಮನೆ ಬಳಿ ಬಂದಿದ್ದಾನೆ. ಆಟೋದಿಂದ ಇಳಿದವನೇ ಆನಂದ್ ಜೋರಾಗಿ ಕೂಗಾಡಲು ಶುರು ಮಾಡಿದ್ದ. ಇವರಿಬ್ಬರೂ ಕಳ್ಳರು ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿದ್ದಾನೆ. ತಕ್ಷಣ ಕೈಯಲ್ಲಿ ಮಚ್ಚು, ಲಾಠಿ ಹಿಡಿದು ಓಡಿ ಬಂದ ASI ಶ್ರೀನಿವಾಸ್, ಓಡಿ ಹೋಗಿ ದಯಾನಂದ್ ಮತ್ತು ಶಶಿಧರ್ ಇಬ್ಬರನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.
ಮಾತನಾಡಲೂ ಬಿಡದೆ ಏಕಾಏಕಿ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಮಚ್ಚಲ್ಲಿ ಕೈ, ಕಾಲು, ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಯುವಕರು ಕೆಳಗೆ ಬೀಳ್ತಿದ್ದಂತೆ ಲಾಠಿಯಿಂದ ಥಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಹೊಯ್ಸಳ ಸಿಬ್ಬಂದಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಇಬ್ಬರು ಯುವಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ASI ಶ್ರೀನಿವಾಸ್ ವಿರುದ್ದ FIR ದಾಖಲಾಗಿದ್ದು ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.