ದೈಹಿಕವಾಗಿ ಸಮರ್ಥರಾಗಿದ್ದರೂ ಕೂಡಾ ಜೀವನದ ಮೇಲೆ ಹತಾಶೆಯಾಗಿ, ಯಶಸ್ಸು ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಕೆಲವರು ಶರಣಾದರೆ, ಹಲವರು ತಮ್ಮ ಜೀವನದ ಮೇಲೆ ಜಿಗುಪ್ಸೆ ಬೆಳೆಸಿಕೊಂಡು ಇಡೀ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದರೆ ಅಂತಹವರು ಒಮ್ಮೆ ಈ ಸಾಧಕಿಯ ಕುರಿತು ಓದಿದರೆ ನಿಜಕ್ಕೂ ಜೀವನದಲ್ಲಿ ಗೆದ್ದು ಮುಂದೆ ಬರಬೇಕೆಂಬ ಛಲ ಹಾಗೂ ಆತ್ಮ ವಿಶ್ವಾಸ ಮೂಡದೇ ಇರದು. ಜಗತ್ತಿನಲ್ಲಿ ದೈಹಿಕವಾಗಿ ನ್ಯೂನತೆಗಳನ್ನು ಹಲವರು ಹೊಂದಿದ್ದು, ಅವರಿಗೆ ಜೀವನ ಒಂದು ಸವಾಲಿದ್ದಂತೆ, ಅಂತಹ ಸವಾಲನ್ನು ಎದುರಿಸಿ, ಎದುರು ನಿಂತು ಒಬ್ಬ ಮಹಿಳೆ ಇಂದು ತನ್ನ ಸಾಧನೆಯ ಮೂಲಕ, ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾಳೆ.

ಕಷ್ಟಗಳ ಎದುರು ತಾನು ಮಂಡಿಯೂರಿ ಹತಾಶಳಾಗದೆ, ಎರಡೂ ಕೈಗಳೂ ಇಲ್ಲದೆ ಹೋದರೂ ತನ್ನ ಕಠಿಣ ಪರಿಶ್ರಮದಿಂದಾಗಿ, ಆಕೆ ತನ್ನ ಪೈಲಟ್ ಆಗಬೇಕೆಂಬ ಕನಸನ್ನು ಈಡೇರಿಸಿಕೊಂಡಿದ್ದಾಳೆ. ಅಂತಹ ಮಹಾ ಸಾಧಕಿ ಜೆಸ್ಸಿಕಾ ಕಾಕ್ಸ್. ವಿಶ್ವದಲ್ಲೇ ಮೊದಲ ಬಾರಿಗೆ ಎರಡೂ ಕೈ ಇಲ್ಲದೇ ಹೋದರೂ ಪೈಲಟ್ ಆಗಿ ಪರವಾನಗಿ ಪಡೆದ ಏಕೈಕ ಮಹಿಳಾ ಪೈಲಟ್. ಆರಿಜೋನಾದಲ್ಲಿ ಜನ್ಮಿಸಿದ ಜೆಸ್ಸಿಕಾಗೆ ಹುಟ್ಟಿನಿಂದಲೇ ಎರಡು ಕೈಗಳು ಇಲ್ಲ. ಆದರೆ ಅದು ಆಕೆಯ ಸಾಧನೆಗೆ ಅಡ್ಡಿಯಾಗಲಿಲ್ಲ. 2005 ರಲ್ಲಿ ಪದವಿ ಮುಗಿಸಿದ ಜೆಸ್ಸಿಕಾ ಪೈಲಟ್ ಆಗುವ ತನ್ನ ಕನಸಿಗೆ ನೀರೆರೆಯಲು ಮುಂದಾದರು.

ತನ್ನ ಎಲ್ಲಾ ಪ್ರಮುಖ ಕೆಲಸಗಳನ್ನು ತನ್ನ ಪಾದಗಳ ಸಹಾಯದಿಂದ ಮಾಡುವ ಜೆಸ್ಸಿಕಾಗೆ ಪೈಲಟ್ ಟ್ರೈನಿಂಗ್ ಸುಲಭವಾಗಿರಲಿಲ್ಲ. ಸತತ ಮೂರು ವರ್ಷಗಳ ಕಠಿಣ ಶ್ರಮ ಹಾಗೂ ತರಬೇತುದಾರರ ಸಹಕಾರ ಆಕೆಯನ್ನು ಗುರಿ ತಲುಪಿಸುವಲ್ಲಿ ಯಶಸ್ವಿಯಾಯಿತು. 2008 ರಲ್ಲಿ ಜೆಸ್ಸಿಕಾಗೆ ಪೈಲಟ್ ಆಗಿ ಪರವಾನಗಿ ದೊರೆತಿದೆ. ಕೇವಲ ಪೈಲಟ್ ಮಾತ್ರವಲ್ಲದೆ ಆಕೆ ಸ್ಕೂಬಾ ಡೈವರ್, ಥರ್ಡ್ ಡಿಗ್ರಿ ಬ್ಲಾಕ್ ಬೆಲ್ಟ್ ಟೇಕ್ವಾಂಡೋ ಸರ್ಟಿಫಿಕೇಟ್ ಪಡೆದಿದ್ದು, ಸುಮಾರು 20 ದೇಶಗಳಲ್ಲಿ ಸ್ಪೂರ್ತಿ ನೀಡುವ ಭಾಷಣ ನೀಡಿದ್ದಾರೆ. ಒಮ್ಮೆ ಯೋಚಿಸಿ ಜೆಸ್ಸಿಕಾ ಕಾಕ್ಸ್ ಇಷ್ಟೆಲ್ಲಾ ಸಾಧನೆ ಮಾಡಿರುವಾಗ, ದೈಹಿಕವಾಗಿ ಸಮರ್ಥವಾಗಿರುವ ನಾವು ಏನೆಲ್ಲಾ ಅದ್ಭುತಗಳನ್ನು ಸೃಷ್ಟಿಸಬಹುದು. ಮುಂದಡಿ ಇಟ್ಟು ಸವಾಲುಗಳನ್ನು ಎದುರಿಸೋಣ ಬನ್ನಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here