ಬೆಂಗಳೂರು: ಪ್ರತಿ ವರ್ಷ ನಡೆಯುವಂತೆ ಈ ಬಾರಿಯೂ ಸಹ ಕರ್ನಾಟಕ ಚಲನಚಿತ್ರ ಕ್ರಿಕೆಟ್ ಪಂದ್ಯಾವಳಿಗೆ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿದ್ದು, ಈ ಬಾರಿ ಉದ್ಘಾಟನಾ ಸಮಾರಂಭದಲ್ಲಿ ಹೆಸರಾಂತ ಕ್ರಿಕೆಟಿಗರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹೌದು, ಕನ್ನಡ ಚಿತ್ರ ನಟ ಕಿಚ್ಚ ಸುದೀಪ್ ಅವರನೇತೃತ್ವದಲ್ಲಿ ಪ್ರತಿ ವರ್ಷವೂ ಆಯೋಜನೆಗೊಳ್ಳುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಎಂ.ಎಸ್. ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಆಗಮಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಇಬ್ಬರ ಜೊತೆ ಮಾತುಕತೆ ಕೂಡ ನಡೆಸಲಾಗಿದೆ.
ಹಲವಾರು ವರ್ಷಗಳಿಂದ ಕನ್ನಡ ಚಿತ್ರೋದ್ಯಮವನ್ನು ಸಂಘಟಿಸಿಕೊಂಡು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬರಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ, ಹುಬ್ಬಳಿಯಲ್ಲೂ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕನ್ನಡ ಸಿನಿಮಾ ರಂಗದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.
ನಟರು ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ಆಟವಾಡುವುದು ಈ ಕ್ರಿಕೆಟ್ ಪಂದ್ಯದ ಉದ್ದೇಶ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕ್ರೀಡೆಗೂ ಉತ್ತೇಜಿಸುವಂತಹ ಕೆಲಸವನ್ನು ಕನ್ನಡ ಚಿತ್ರೋದ್ಯಮ ಮಾಡುತ್ತಾ ಬಂದಿದೆ. ಕೆಸಿಸಿ ಹೆಸರಿನಲ್ಲಿ ಈ ಪಂದ್ಯಗಳು ಆಯೋಜನೆ ಆಗುತ್ತವೆ.
ಶಿವರಾಜ್ ಕುಮಾರ್, ಗಣೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್, ದರ್ಶನ್, ಉಪೇಂದ್ರ, ಡಾಲಿ ಧನಂಜಯ್ ಹೀಗೆ ಅನೇಕರು ಈ ಪಂದ್ಯದಲ್ಲಿ ಆಡಿದ್ದಾರೆ. ಈ ಕ್ರಿಕೆಟ್ ಪಂದ್ಯದ ಮತ್ತೊಂದು ವಿಶೇಷ ಅಂದರೆ, ನುರಿತ ಕ್ರಿಕೆಟ್ ಆಟಗಾರರು ಕೂಡ ಭಾಗಿ ಆಗಿರುತ್ತಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಆಡಿರುವ ಮತ್ತು ವಿದೇಶಿ ಕ್ರಿಕೆಟ್ ಆಟಗಾರರು ಕೂಡ ಪಂದ್ಯದಲ್ಲಿ ಆಡಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.