ಕೊರೊನಾ ವೈರಸ್ ನ ಭೀತಿಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಕೂಡಾ ಸಂಕಷ್ಟ ಎದುರಾಗಿದೆ. ವಕೀಲರಾದ ಜೆ.ಅಲೆಕ್ಸ್ ಬೆಂಜಿಗರ್ ಮದ್ರಾಸ್ ಹೈಕೋರ್ಟ್ ನಲ್ಲಿ ಐಪಿಎಸ್ ರದ್ದುಗೊಳಿಸುವಂತೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಬಿಸಿಸಿಐ ಐಪಿಎಲ್ ನಡೆಸದಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಬೇಕೆಂದು ಬೆಂಜಿಗರ್ ಅವರು ಕೋರಿದ್ದಾರೆ‌‌. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನುಸಾರ ಕೊರೊನಾ ವೈರಸ್ ಗೆ ಇದುವರೆವಿಗೂ ಯಾವುದೇ ಔಷಧಿಯನ್ನು ಸಂಶೋಧನೆ ಮಾಡಿಲ್ಲ. ಅಲ್ಲದೇ ತಡೆಯಲು ಕೂಡಾ ಯಾವುದೇ ಸಮರ್ಪಕ ಮಾರ್ಗಗಳು ಇಲ್ಲವಾಗಿದೆ.

ಈ ವೈರಸ್ ನಿಂದ ಸೋಂಕು ಬಹಳ ಬೇಗ ವಿಶ್ವದೆಲ್ಲೆಡೆ ಹರಡುತ್ತಿದ್ದು, ಈಗಾಗಲೇ ಇಟಲಿ ಫುಟ್ಬಾಲ್ ಫೆಡರೇಷನ್‌ ಕೂಡಾ ಕೊರೊನಾ ವೈರಸ್ ನ ಭೀತಿಯ ಹಿನ್ನೆಲೆಯಲ್ಲಿ ಫುಟ್ಬಾಲ್ ಟೂರ್ನಿಯನ್ನು ಮುಂದೂಡಿ ಏಪ್ರಿಲ್ ನಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ. ಆದ ಕಾರಣ ನಮ್ಮಲ್ಲೂ ಕೂಡಾ ಐಪಿಎಲ್ ವಿಚಾರದಲ್ಲಿ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜೆ.ಅಲೆಕ್ಸ್ ಬೆಂಜಿಗರ್ ಅವರು ತಮ್ಮ ಅರ್ಜಿಯಲ್ಲಿ ಕೇಳಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಇದೇ ತಿಂಗಳ 12 ರಂದು ನಡೆಸಲು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ಎಂ.ಎಂ.ಸುಂದರೇಶ್ ಹಾಗೂ ಕೃಷ್ಣನ್ ರಾಮಸ್ವಾಮಿ ಅವರ ನ್ಯಾಯಪೀಠ ನಿರ್ಧರಿಸಿದೆ.

ಅಲೆಕ್ಸ್ ಅವರು ಈ ಹಿಂದೆ ಕೂಡಾ ಐಪಿಎಲ್ ವಿಚಾರದಲ್ಲಿ, ಅದನ್ನು ನಡೆಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದರು. ಆದರೆ ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರು ಇತ್ತೀಚಿಗೆ ಮಾತನಾಡುತ್ತಾ ಐಪಿಎಲ್ ರದ್ದು ಮಾಡುವುದು ಅಥವಾ ಮುಂದೂಡುವ ವಿಚಾರವನ್ನು ತಳ್ಳಿ ಹಾಕಿ, ಕೊರೊನಾ ವೈರಸ್ ಐಪಿಎಲ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here